ಮುಡಾ, ವಾಲ್ಮೀಕಿ ನಿಗಮ ಹಗರಣದ ಹೋರಾಟ ಮಾಡಿದ್ದಕ್ಕೆ ಕಾಂಗ್ರೆಸ್ ಸೇಡು
ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿಗೆ ತಿರುಗೇಟು ಕೊಡುವ ಸಲುವಾಗಿ ಸರಕಾರ ಕೋವಿಡ್ ಹಗರಣಗಳ ತನಿಖೆಗೆ ಎಸ್‌ಐಟಿ ರಚಿಸಲು ತೀರ್ಮಾನಿಸಿರುವುದನ್ನು ಬಿಜೆಪಿ ಸೇಡಿನ ರಾಜಕೀಯ ಎಂದು ಹೇಳಿದೆ. ಆರೋಪಕ್ಕೆ ಸಂಬಂಧಿಸಿದಂತೆ ಕ್ಯಾಬಿನೆಟ್ ಸಬ್‌ಕಮಿಟಿ ಸಭೆಯಲ್ಲಿ ಎಸ್‌ಐಟಿ ರಚನೆಗೆ ನಿರ್ಧರಿಸಲಾಗಿದ್ದು, ಇದರ ವಿರುದ್ಧ ಕಿಡಿಕಾರಿದೆ.
ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಎಂಎಲ್‌ಸಿ ಎನ್.ರವಿಕುಮಾರ್ ಹೇಳಿದ್ದಾರೆ. ಕ್ಯಾಬಿನೆಟ್ ಸಭೆಯಲ್ಲಿ ಬಿಜೆಪಿ ಅಧಿಕಾರದಲ್ಲಿರುವಾಗ ಕೋವಿಡ್ ನಿರ್ವಹಣೆಯಲ್ಲಿ ಆರೋಗ್ಯ ಇಲಾಖೆಯಲ್ಲಿ ನೂರಾರು ಕೋಟಿ ರೂ. ಭ್ರಷ್ಟಾಚಾರ ಮಾಡಿದೆ. ಆರೋಗ್ಯ ಸಚಿವರು ನೂರಾರು ಕೋಟಿ ಹಗರಣದಲ್ಲಿ ಭಾಗಿ ಆಗಿದ್ದಾರೆಂದು ತಿಳಿಸಿ, ಆ ಹಗರಣವನ್ನು ಎಸ್‍ಐಟಿ ತನಿಖೆಗೆ ಕೊಡಲು ನಿರ್ಧರಿಸಲಾಗಿದೆ. ಎಸ್‍ಐಟಿ ತನಿಖೆಗೆ ಕೊಡಲು ಮತ್ತು ಅದಕ್ಕೂ ಮೊದಲು ಉಪಸಮಿತಿ ಮಾಡಲು ನಮ್ಮ ವಿರೋಧವಿಲ್ಲ. ಕೋವಿಡ್ ನಿರ್ವಹಣೆಯಲ್ಲಿ ಭ್ರಷ್ಟಾಚಾರ ಆಗಿದ್ದರೆ ಅದು ಹೊರಗಡೆ ಬರಲಿ. ಆದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಒಂದೂವರೆ ವರ್ಷಕ್ಕಿಂತ ಜಾಸ್ತಿ ಆಗಿದೆ. ಇದುವರೆಗೆ ಈ ಸರಕಾರ ಏನು ಮಾಡುತ್ತಿತ್ತು? ಅದನ್ನು ಹೇಳಲು ಒಂದೂವರೆ ವರ್ಷ ಬೇಕಾಯಿತೇ? ಎಂದು ರವಿಕುಮಾರ್ ಪ್ರಶ್ನಿಸಿದ್ದಾರೆ.
ಬಿಜೆಪಿ, 5 ಸಾವಿರ ಕೋಟಿ ಭ್ರಷ್ಟಾಚಾರದ ಮುಡಾ ಹಗರಣ ವಿರುದ್ಧ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಮಾಡಿ ಅದನ್ನು ಹೊರಗಡೆ ಹಾಕಿದ ತಕ್ಷಣ ಇವರಿಗೆ ಕೋವಿಡ್ ನೆನಪಾಯಿತು. ಮುಡಾ ಹಗರಣ ವಿಚಾರ ಹೊರಗಡೆ ತರದೇ ಇದ್ದರೆ ಕೋವಿಡ್ ವಿಚಾರ ಹೊರಗೆ ಬರುತ್ತಿರಲಿಲ್ಲ. ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಆಗಿರುವ 187 ಕೋಟಿ ರೂ. ಹಣದ ಹಗರಣವನ್ನು ಬಯಲಿಗೆ ಎಳೆದಿದ್ದೇವೆ. ಈ ಹಣವನ್ನು ತೆಲಂಗಾಣ ಸೇರಿ ಬೇರೆ ರಾಜ್ಯಗಳಿಗೆ ಕಳುಹಿಸಿದ್ದಾರೆ. ಬಳ್ಳಾರಿ ಚುನಾವಣೆಗೆ 20 ಕೋಟಿಗೂ ಹೆಚ್ಚು ಹಣ ಖರ್ಚಾಗಿದೆ ಎಂದು ಇ.ಡಿ. ವರದಿ ತಿಳಿಸಿದೆ ಎಂದು ರವಿಕುಮಾರ್ ಹೇಳಿದ್ದಾರೆ. .
ಮಹರ್ಷಿ ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಇ.ಡಿ. ಮೂಲಕ ಬಹಿರಂಗವಾಗಿದೆ. ಅದಕ್ಕೆ ಪ್ರತಿಯಾಗಿ ಇವರು ಕೋವಿಡ್ ಸಂದರ್ಭದಲ್ಲಿ ಭ್ರಷ್ಟಾಚಾರ ಆಗಿದೆ ಎಂದು ತಿಳಿಸಿ ತನಿಖೆಗೆ ನೀಡಲು ಮುಂದಾಗಿದ್ದಾರೆ .ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಕೇಳಿದ್ದಕ್ಕಾಗಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ನಮಗ್ಯಾವ ವಿರೋಧವೂ ಇಲ್ಲ. ನೀವು ಎಸ್‍ಐಟಿ ಮೂಲಕ ಒಬ್ಬ ಸಚಿವ ನಾಗೇಂದ್ರರಿಗೆ ಕ್ಲೀನ್‌ಚಿಟ್ ಕೊಟ್ಟಿದ್ದೀರಿ; ಈಗ ಮತ್ತೆ ಎಸ್‍ಐಟಿಗೆ ಆ ಕೇಸನ್ನು ಕೊಡುತ್ತಿದ್ದಾರೆ. ಆರೋಗ್ಯ ಇಲಾಖೆ ಸಚಿವರಾಗಿದ್ದ ಡಾ.ಎಸ್.ಸುಧಾಕರ್ ಅವರ ಬಗ್ಗೆ ಈ ಎಸ್‍ಐಟಿ ಏನು ಮಾಡುತ್ತದೆ ಎಂದು ಕಾದು ನೋಡುತ್ತೇವೆ ಎಂದು ತಿಳಿಸಿದರು.