ಅಧಿಕಾರವಿಲ್ಲದೆ ಚಡಪಡಿಸುತ್ತಿರುವ ಕಾಂಗ್ರೆಸ್‌ನಿಂದ ದಿನಕ್ಕೊಂದು ಷಡ್ಯಂತ್ರ ಎಂದು ಆರೋಪ
ಹೊಸದಿಲ್ಲಿ: ದೇಶದ ಆರ್ಥಿಕತೆ, ಸಾಮಾಜಿಕ ಚೌಕಟ್ಟು ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ನಡೆಯುತ್ತಿರುವ ಅಂತಾರಾಷ್ಟ್ರೀಯ ಷಡ್ಯಂತ್ರದಲ್ಲಿ ಕಾಂಗ್ರೆಸ್ ಶಾಮೀಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಹರ್ಯಾಣ ಚುನಾವಣೆಯಲ್ಲಿ ಬಿಜೆಪಿಗೆ ನಿಚ್ಚಳ ಬಹುಮತ ನೀಡಿದ ಮತದಾರರಿಗೆ ಧನ್ಯವಾದ ಹೇಳಿದ ಮೋದಿ, ಕಾಂಗ್ರೆಸ್ ಮತ್ತು ಅದರ ಮಿತ್ರರು ದೇಶದ ಸಾಮಾಜಿಕ ಚೌಕಟ್ಟನ್ನು ನಾಶ ಮಾಡಲು ಬಯಸಿದ್ದಾರೆ. ಇದಕ್ಕಾಗಿ ಅವರು ಅಂತಾರಾಷ್ಟ್ರೀಯ ಕೂಟದೊಂದಿಗೆ ಕೈ ಮಿಲಾಯಿಸಿದ್ದಾರೆ. ದೇಶವನ್ನು ದುರ್ಬಲಗೊಳಿಸುವ ಆಟದಲ್ಲಿ ಕಾಂಗ್ರೆಸ್ ಪ್ರಮುಖ ಆಟಗಾರ ಎಂದಿದ್ದಾರೆ.
ಹರ್ಯಾಣದಲ್ಲಿ ಸತತ ಮೂರನೇ ಬಾರಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೇರಿರುವುದನ್ನು ಸತ್ಯ, ಅಭಿವೃದ್ಧಿ ಮತ್ತು ಉತ್ತಮ ಆಡಳಿತಕ್ಕೆ ಸಿಕ್ಕಿದ ಗೆಲುವು ಎಂದು ಮೋದಿ ಬಣ್ಣಿಸಿದ್ದಾರೆ.
ಎಲ್ಲ ಚುನಾವಣೋತ್ತರ ಸಮೀಕ್ಷೆಗಳನ್ನು ಸುಳ್ಳು ಮಾಡಿ ಹರ್ಯಾಣದಲ್ಲಿ ಬಿಜೆಪಿ 90 ಸ್ಥಾನಗಳ ಪೈಕಿ 48 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. ಹರ್ಯಾಣದ ಇತಿಹಾಸದಲ್ಲಿ ಒಂದೇ ಪಕ್ಷಕ್ಕೆ ಸತತ ಮೂರನೇ ಸಲ ಅಧಿಕಾರ ಸಿಕ್ಕಿರುವುದು ಇದೇ ಮೊದಲು.
ಬಿಜೆಪಿಯ ಈ ಗೆಲುವು ದೇಶಾದ್ಯಂತ ಪ್ರತಿಧ್ವನಿಸಲಿದೆ. ಭಗವದ್ಗೀತೆಯ ನಾಡಿನಲ್ಲಿ ಸತ್ಯಕ್ಕೆ ಗೆಲುವಾಗಿರುವುದು ಬಹಳ ಮಹತ್ವದ ಅಂಶ ಎಂದು ಮೋದಿ ಬಣ್ಣಿಸಿದ್ದಾರೆ. ಕಾಂಗ್ರೆಸ್ ಅಧಿಕಾರವನ್ನು ತನ್ನ ಜನ್ಮಸಿದ್ಧ ಹಕ್ಕು ಎಂದು ಭಾವಿಸಿದೆ. ಅಧಿಕಾರ ಇಲ್ಲದಿದ್ದರೆ ಅದು ನೀರಿನಿಂದ ಹೊರತೆಗೆದ ಮೀನಿನಂತೆ ಒದ್ದಾಡುತ್ತದೆ. ಅಧಿಕಾರಕ್ಕಾಗಿ ಏನು ಬೇಕಾದರು ಮಾಡುತ್ತದೆ ಎಂದು ಆರೋಪಿಸಿದ್ದಾರೆ.