ಬೆಂಗಳೂರು: ದಲಿತರು ಹಾಗೂ ಹಿಂದುಳಿದ ವರ್ಗದವರ ಮೇಲೆ ರಾಷ್ಟ್ರದ್ರೋಹಿ ಅಲ್ಪಸಂಖ್ಯಾತರಿಂದ ಆಗುತ್ತಿರುವ ಅನ್ಯಾಯವನ್ನು ತಡೆಯಲು ಸಂಘಟನೆಯೊಂದನ್ನು ರಚಿಸುವ ಬಗ್ಗೆ ಚರ್ಚಿಸಲು ಬಾಗಲಕೋಟೆಯಲ್ಲಿ ಅ.20ರಂದು ಸಭೆ ಕರೆಯಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಸಂಘಟನೆ ರಚಿಸುವ ಸಂಬಂಧ ಉತ್ತರ ಕರ್ನಾಟಕದ ಹಲವು ಪ್ರಮುಖ ನಾಯಕರ ಜೊತೆ ಚರ್ಚಿಸಿದ್ದೇವೆ. ಮಾಜಿ ಸಂಸದ ವಿರೂಪಾಕ್ಷಪ್ಪ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಮಾಜಿ ಶಾಸಕರಾದ ರಘುಪತಿ ಭಟ್, ವೀರಭದ್ರಪ್ಪ ಹಾಲಹರವಿ, ಅಹಿಂದ ಸಂಘಟನೆಯ ನಾಯಕ ಮುಕುಡಪ್ಪ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿ, ಅಭಿಪ್ರಾಯ ತಿಳಿಸಿದ್ದಾರೆ ಎಂದರು. 30–40 ಜನ ಸಾಧು ಸಂತರು ಇಂತಹ ಸಂಘಟನೆಯೊಂದನ್ನು ರಚಿಸುವಂತೆ ಸಲಹೆ ನೀಡಿದ್ದಾರೆ. ಅವರ ಸಲಹೆ ಮೇರೆಗೆ ಸಂಘಟನೆ ರಚಿಸಲು ಮುಂದಾಗಿದ್ದೇವೆ. ಈ ಸಂಘಟನೆಯು ರಾಜಕೀಯೇತರವಾಗಿದೆ. ಇದಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಸಂಘಟನೆಯ ಹೆಸರನ್ನು ಇನ್ನೂ ನಿಗದಿ ಮಾಡಿಲ್ಲ. ‘ರಾಯಣ್ಣ– ಚನ್ನಮ್ಮ ಬ್ರಿಗೇಡ್’ ಎಂದು ನಾಮಕರಣ ಮಾಡುವಂತೆ ಕೆಲವರು ಸಲಹೆ ನೀಡಿದ್ದಾರೆ. ಬಾಗಲಕೋಟೆಯ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಹಿಂದೆ ರಾಯಣ್ಣ ಬ್ರಿಗೇಡ್ ಕಟ್ಟಿದಾಗ ಜನ ಬೆಂಬಲ ಸಿಕ್ಕಿತ್ತು. ಆದರೆ ಬಿ.ಎಸ್ ಯಡಿಯೂರಪ್ಪ ಅವರಿಗೆ ಸಹಿಸಿಕೊಳ್ಳಲು ಆಗದೆ ಅಮಿತ್ ಶಾ ಅವರಿಗೆ ದೂರು ಕೊಟ್ಟರು. ದೂರು ಕೊಡಲು ಕಾರಣವೇನು ಎಂದು ಬಿ.ಎಸ್ ಯಡಿಯೂರಪ್ಪ ಇನ್ನೂ ಕಾರಣ ಹೇಳಿಲ್ಲ. ಸಂಘಟನೆ ಬೇಡ ಅಂತ ಮಾತ್ರ ಹೇಳಿದರು. ಅವತ್ತು ನಾನು ತಪ್ಪು ಮಾಡಿದೆ. ರಾಯಣ್ಣ ಬ್ರಿಗೇಡ್ ಇರಬೇಕಿತ್ತು ಎಂದರು. ಅಪ್ಪ ಮಕ್ಕಳ ಹೊಂದಾಣಿಕೆಯಿಂದ ಬಿಜೆಪಿ ಮುಕ್ತವಾಗಬೇಕು. ಬಿಜೆಪಿ ಶುದ್ಧೀಕರಣವಾಗಲು ಚುನಾವಣೆ ನಿಂತಿದ್ದೆ. ನಾನು ಬಿಜೆಪಿ ಸೇರಲ್ಲ, ನನಗೆ ಸಮಾಧಾನ ಆದರೆ ಮಾತ್ರ ವಾಪಸ್ ಬಿಜೆಪಿ ಸೇರುತ್ತೇನೆ. ನನ್ನ ಮಗನಿಗೆ ಹಾವೇರಿಗೆ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿ ಯಡಿಯೂರಪ್ಪ ಮೋಸ ಮಾಡಿದರು ಎಂದು ಆರೋಪಿಸಿದರು.