ನವರಾತ್ರಿ – ನವಧಾತ್ರಿ – ನವ ನವೊನ್ಮೇಷಶಾಲಿನಿ

ನವರಾತ್ರಿ ಎಂದರೆ ನಮ್ಮೊಳಗಿನ ಶಕ್ತಿಯ ಆವಾಹನೆ

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹರಡಿರುವ ಭಾರತದಲ್ಲಿ ಇಡೀ ವರ್ಷವೂ ಹಬ್ಬಗಳೇ ಹಬ್ಬಗಳು. ನಾವು ಆಚರಿಸುವಷ್ಟು ಹಬ್ಬಗಳನ್ನು ಜಗತ್ತಿನ ಬೇರೆ ಯಾವ ರಾಷ್ಟ್ರ ಕಲ್ಪನೆ ಮಾಡಲೂ ಸಾಧ್ಯ ಇಲ್ಲ. ಹಬ್ಬಗಳು ನಮ್ಮ ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ನಂಬಿಕೆಗಳ ಒಟ್ಟು ಮೊತ್ತವೇ ಆಗಿವೆ.

ನವರಾತ್ರಿ – ಜಗತ್ತಿನ ಅತಿ ದೀರ್ಘ ಅವಧಿಯ ಹಬ್ಬ































 
 

ಈ ಹಬ್ಬಕ್ಕೆ ನವರಾತ್ರಿ ಎಂಬ ಹೆಸರಿದ್ದರೂ ಇದು ಹತ್ತು ದಿನಗಳ ಹಬ್ಬ. ಆದ್ದರಿಂದ ಇದನ್ನು ದಸರಾ (ದಶಹರಾ ಅಂದರೆ ಹತ್ತು ರಾತ್ರಿಗಳು ಎಂದರ್ಥ) ಎಂದೂ ಕರೆಯುತ್ತಾರೆ. ಈ ಹಬ್ಬವು ಶರದ್ ಋತುವಿನಲ್ಲಿ ಬರುವ ಕಾರಣ ಇದನ್ನು ಶರನ್ನವರಾತ್ರಿ ಎಂದೂ ಕರೆಯುತ್ತಾರೆ. ಚಂಡಿ, ಚಾಮುಂಡಿ, ಕಾಳಿ, ಪಾರ್ವತಿ, ಕಾತ್ಯಾಯಿನಿ, ಅಂಬಾ, ದುರ್ಗಾ, ಈಶ್ವರಿ, ಮಹಾಲಸ, ದುರ್ಗೆ, ಲಕ್ಷ್ಮಿ, ಸರಸ್ವತಿ, ಅನ್ನಪೂರ್ಣೆ…ಹೀಗೆ ಬೇರೆ ಬೇರೆ ರೂಪಗಳಲ್ಲಿ ದೇವಿಯ ಆರಾಧನೆಯು ನಡೆಯುವ ಹಬ್ಬ ನವರಾತ್ರಿ. ಅದರಲ್ಲೂ ಪ್ರಮುಖವಾಗಿ ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿಯರ ಪೂಜೆಗಳು ದೊಡ್ಡ ಮಟ್ಟದಲ್ಲಿ ನಡೆಯುವ ಹಬ್ಬವೇ ನವರಾತ್ರಿ. ವಿಶೇಷವಾಗಿ ಕರಾವಳಿಯಲ್ಲಿ ಶ್ರೀದೇವಿಯ ಕ್ಷೇತ್ರಗಳು ಜಾಸ್ತಿ ಇರುವ ಕಾರಣ ನವರಾತ್ರಿಯ ಒಂಬತ್ತು ದಿನಗಳೂ ಕರಾವಳಿಯಲ್ಲಿ ಯಾರಿಗೂ ಬಿಡುವು ದೊರೆಯುವುದಿಲ್ಲ. ಉತ್ಸವಗಳು ನಿಲ್ಲುವುದಿಲ್ಲ.

ಪ್ರಕೃತಿಗೆ ಪೂರಕವಾದ ಹಬ್ಬ

ಈ ನವರಾತ್ರಿಯ ಸಂದರ್ಭ ಮಳೆಯ ಪ್ರಮಾಣ ಕಡಿಮೆ ಆಗಿ ನದಿಗಳಲ್ಲಿ ಪ್ರವಾಹ ಕಡಿಮೆ ಆಗುತ್ತದೆ. ಸರೋವರ, ಜಲಾಶಯ, ಕೊಳಗಳ ನೀರು ಶುದ್ಧವಾಗುತ್ತದೆ. ಹಿತವಾದ ಗಾಳಿ ಮೈಮನಗಳನ್ನು ತೀಡುತ್ತದೆ. ಗದ್ದೆಗಳಲ್ಲಿ ರೈತರ ಬೆವರ ಹನಿಯು ಮುತ್ತಾಗಿ ಬೆಳೆಗಳು ತೆನೆತುಂಬಿ ಬಾಗುತ್ತವೆ. ಹೂವಿನ ಗಿಡಗಳು ಪ್ರಫುಲ್ಲಿತವಾಗಿ ಅರಳಿ ಸೌಂದರ್ಯದ ತೇರಾಗುತ್ತವೆ. ಬೇಸಗೆಯಲ್ಲಿ ಬರಡಾಗಿದ್ದ ಭೂಮಿಯು ಈಗ ಹಸಿರು ಹೊದ್ದು ಮಲಗಿರುತ್ತದೆ. ಬಂಧನದಿಂದ ಸ್ವಾತಂತ್ರ್ಯವನ್ನು ಪಡೆದ ಗೋವುಗಳು ಹುಲ್ಲುಗಾವಲಿಗೆ ಬಂದು ಮೇಯುವ ದೃಶ್ಯವೇ ತುಂಬ ಚಂದವಾಗಿರುತ್ತದೆ. ಪ್ರಕೃತಿ ಮಾತೆಯು ಸಿಂಗರಿಸಿಕೊಂಡು ನವರಾತ್ರಿ ಹಬ್ಬವನ್ನು ಸ್ವಾಗತ ಮಾಡಲು ನಿಂತ ಹಾಗೆ ನಮಗೆ ಅನ್ನಿಸುತ್ತದೆ. ಗದ್ದೆಗಳಲ್ಲಿ ಕಟಾವು ಮುಗಿದು ಬಾಗಿದ ತೆನೆಗಳು ಅಂಗಳಕ್ಕೆ ಬಂದು ಕಣಜವನ್ನು ತುಂಬುವ ಮುಹೂರ್ತದಲ್ಲಿ ರೈತನ ಸಂಭ್ರಮವೂ ನವರಾತ್ರಿ ಹಬ್ಬಕ್ಕೆ ಮುನ್ನುಡಿ ಬರೆಯುತ್ತದೆ.

ನವರಾತ್ರಿ ಎಂದರೆ ನಿಜವಾದ ಶಕ್ತಿಯ ಆರಾಧನೆ

ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿ ಆರಾಧನೆಯ ಪರ್ವಕಾಲ ಅಂದರೆ ನವರಾತ್ರಿಯೇ ಆಗಿದೆ. ಭೂಮಿಯಲ್ಲಿ ರಾಕ್ಷಸರ ಉಪಟಳ ಜಾಸ್ತಿಯಾಗಿ ಭೂಮಿಯ ಭಾರ ಹೆಚ್ಚಾಗಿತ್ತು. ಆಗ ರಾಕ್ಷಸರ ಮರ್ದನ ಮಾಡಿ ಭೂಭಾರವನ್ನು ಇಳಿಸಲು ದೇವಿಯು ಬೇರೆ ಬೇರೆ ಅವತಾರಗಳನ್ನು ಎತ್ತಿ ದುಷ್ಟ ರಾಕ್ಷಸರನ್ನು ಸಂಹಾರ ಮಾಡಿದ ಹಿನ್ನೆಲೆಯಲ್ಲಿ ಮೂಡಿದ್ದು ನವರಾತ್ರಿ.

ಇಲ್ಲಿ ದೇವಿ ಎಂದರೆ ಸೃಷ್ಟಿಯ ಮೊದಲ ತಾಯಿ ಆಗಿದ್ದಾಕೆ. ಆಕೆಯನ್ನು ಆದಿಮಾತೆ ಎಂದೂ ಕರೆಯುತ್ತಾರೆ. ಆಕೆ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ತಾಯಿ ಕೂಡ ಆಗಿದ್ದವಳು. ತ್ರಿಮೂರ್ತಿಗಳನ್ನು ತನ್ನ ಸಂಕಲ್ಪದ ಮೂಲಕ ಸೃಷ್ಟಿ, ಸ್ಥಿತಿ, ಲಯಗಳ ಕಾರ್ಯಕ್ಕೆ ಹಚ್ಚಿದವಳೇ ಅವಳು. ಅಂತಹ ಜಗನ್ಮಾತೆಯು ತಾನೇ ಹಲವು ಅವತಾರಗಳನ್ನು ಎತ್ತಿ ಚಂಡ, ಮುಂಡ, ಮಧು, ಕೈಟಭ ಮೊದಲಾದ ರಾಕ್ಷಸರನ್ನು ನಾಶ ಮಾಡಿ ಕೊನೆಯದಾಗಿ ಮಹಾನವಮಿಯ ದಿನ ಮಹಿಷಾಸುರನನ್ನು ಕೊಂದು ಮಹಿಷಾಸುರ ಮರ್ದಿನಿಯಾಗಿ, ಚಾಮುಂಡಿಯಾಗಿ ತನ್ನ ಅವತಾರಗಳನ್ನು ಮುಗಿಸಿದವಳು. ಅದು ದೇವಿಯ ರೌದ್ರರೂಪವೇ ಆಗಿದೆ. ದುರ್ಗಾ ನಮಸ್ಕಾರ ಪೂಜೆಯು ನವರಾತ್ರಿಯ ಒಂಬತ್ತೂ ದಿನಗಳ ಕಾಲ ಮನೆ ಮನೆಗಳಲ್ಲಿ ಮತ್ತು ದೇವಿಯ ದೇವಸ್ಥಾನಗಳಲ್ಲಿ ನಡೆಯುತ್ತದೆ.

ನವಾನ್ನ ಭೋಜನ – ತೆನೆಪೂಜೆ

ಗದ್ದೆಯಿಂದ ಫಲವತ್ತಾದ ತೆನೆಗಳು ರೈತನ ಅಂಗಳಕ್ಕೆ ಬಂದ ನಂತರ ಅದನ್ನು ಕಣಜಕ್ಕೆ ತುಂಬಿಸುವ ಮೊದಲು ಆ ತೆನೆಗಳನ್ನು ಸಾಂಕೇತಿಕವಾಗಿ ದೇವರ ಪಾದದಲ್ಲಿ ಅಥವಾ ತುಳಸಿ ಕಟ್ಟೆಯಲ್ಲಿ ಇಟ್ಟು ಪೂಜೆ ಮಾಡಿ ಮನೆ ತುಂಬಿಸಿಕೊಳ್ಳುವ ಹಬ್ಬವೇ ತೆನೆಪೂಜೆ. ಆ ತೆನೆಗಳನ್ನು ಮಾವಿನ ತಳಿರಿನಲ್ಲಿ ಕಟ್ಟಿ ಮನೆಯ ಹೊಸ್ತಿಲು, ದುಡ್ಡಿನ ಖಜಾನೆ, ತೊಟ್ಟಿಲು, ವಾಹನಗಳು ಮೊದಲಾದವುಗಳಿಗೆ ಕಟ್ಟಿ ಮನೆ ತುಂಬಿಸಿಕೊಳ್ಳುತ್ತಾರೆ.

ಅಂದು ಆ ವರ್ಷದ ಹೊಸ ಅಕ್ಕಿ (ನವಾನ್ನ)ಯ ಅನ್ನವನ್ನು ಮಾಡಿ ಪಾಯಸದ ಸಿಹಿಯ ಜೊತೆಗೆ ಮನೆಯವರೆಲ್ಲರೂ ಸೇರಿ ಊಟ ಮಾಡುವುದೇ ಈ ನವಾನ್ನ ಭೋಜನ. ಇದು ನಿಜವಾದ ಅರ್ಥದಲ್ಲಿ ಅನ್ನಪೂರ್ಣೆಯ ರೂಪದಲ್ಲಿ ದೇವಿಯ ಆರಾಧನೆ ಆಗಿರುತ್ತದೆ.

ಶ್ರೀ ಶಾರದಾ ಪೂಜೆ-ಅಕ್ಷರಾಭ್ಯಾಸ ಆರಂಭ

ನವರಾತ್ರಿಯ ಏಳನೇ ದಿನ (ಸಪ್ತಮಿ ತಿಥಿ) ಶಾರದಾ ಮಾತೆಯ ಪ್ರತಿಷ್ಠಾಪನೆಯ ಜೊತೆಗೆ ಶಾರದಾ ಪೂಜೆ ಆರಂಭವಾಗುತ್ತದೆ. ಈ ಪೂಜೆ ಹೆಚ್ಚಿನ ಕಡೆಗಳಲ್ಲಿ ಸಾಮೂಹಿಕ ಆರಾಧನೆಯ ರೂಪವನ್ನು ಪಡೆಯುತ್ತದೆ. ಪುಸ್ತಕ ಮತ್ತು ಸಂಗೀತ ವಾದ್ಯಗಳ ಪೂಜೆ ಎಲ್ಲ ಕಡೆಗಳಲ್ಲಿ ನಡೆಯುತ್ತದೆ. ಎಲ್ಲೆಡೆ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ದೊಡ್ಡಮಟ್ಟದಲ್ಲಿ ನಡೆಯುತ್ತವೆ. ಅನ್ನ ಸಂತರ್ಪಣೆಗಳು ಎಲ್ಲ ದೇವಿಯ ದೇವಸ್ಥಾನಗಳಲ್ಲಿ ನಡೆಯುತ್ತವೆ.

ಅದೇ ರೀತಿಯಾಗಿ ದೇವಿಯ ದೇವಸ್ಥಾನಗಳಲ್ಲಿ ಸಾಮೂಹಿಕ ಅಕ್ಷರ ಪೂಜೆಗಳು ನಡೆಯುತ್ತವೆ. ದೇವಿಯ ಸನ್ನಿಧಾನಗಳಲ್ಲಿ ಅಕ್ಕಿಯ ಮೇಲೆ ಅಕ್ಷರಗಳನ್ನು ಬರೆದು ಮಕ್ಕಳಿಗೆ ಮೊದಲನೇ ಅಕ್ಷರಾಭ್ಯಾಸ ಮಾಡಿಸುವುದು ಸರಸ್ವತಿಪೂಜೆ.

(ನಾಳೆಗೆ ಮುಂದುವರೆಯುತ್ತದೆ)

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top