ರಾಜ್ಯದಲ್ಲಿವೆ 14 ಲಕ್ಷ ಅನರ್ಹ ಬಿಪಿಎಲ್‌ ಕಾರ್ಡ್‌ಗಳು

ಅನರ್ಹ ಕಾರ್ಡ್‌ ರದ್ದು ಮಾಡುವುದು ಅಧಿಕಾರಿಗಳ ಪಾಲಿಗೆ ಹರಸಾಹಸದ ಕೆಲಸ

ಬೆಂಗಳೂರು: ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿದಾರರ ಪೈಕಿ ಸುಮಾರು 14 ಲಕ್ಷ ಪಡಿತರದಾರರು ಬಿಪಿಎಲ್‌ ಕಾರ್ಡ್‌ಗೆ ಅನರ್ಹರಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ 14 ಲಕ್ಷ ಅಂದರೆ ಒಟ್ಟು ಪಡಿತರ ಚೀಟಿದಾರರಲ್ಲಿ ಶೇ.12.4ರಷ್ಟು ಅನರ್ಹ ಎನ್ನುವುದು ಕಂಡು ಬಂದಿದೆ. ಸರ್ಕಾರ ಇಂತಹ ಪಡಿತರ ಚೀಟಿಗಳನ್ನು ಪತ್ತೆಹಚ್ಚುವಲ್ಲಿ ನಿರತವಾಗಿದೆ. ಇಷ್ಟು ಪಡಿತರ ಕಾರ್ಡ್‌ಗಳು ರದ್ದಾದರೆ ಸರ್ಕಾರಕ್ಕೆ ಭಾರಿ ಉಳಿತಾಯವಾಗಲಿದೆ.

ಈ ಬಿಪಿಎಲ್‌ ಕಾರ್ಡ್‌ಗಳ ಪೈಕಿ 1.20 ಲಕ್ಷ ರೂ.ಗಿಂತ ಹೆಚ್ಚು ಆದಾಯ ಹೊಂದಿರುವ 12.79 ಲಕ್ಷ ಕುಟುಂಬಗಳು, 24 ಸಾವಿರ ಸರ್ಕಾರಿ ನೌಕರರು ಸೇರಿದ್ದಾರೆ. ಜೊತೆಗೆ 1.37 ಲಕ್ಷ ಬಿಪಿಎಲ್‌ ಕಾರ್ಡ್‌ದಾರರು ಕಳೆದ 6 ತಿಂಗಳಿಂದ ಪಡಿತರವನ್ನು ಪಡೆದುಕೊಂಡಿಲ್ಲ. ಇಷ್ಟೇ ಅಲ್ಲ, ತೆರಿಗೆ ಪಾವತಿಸುವವರು ಮತ್ತು ಜಿಎಸ್‌ಟಿ ಪಾವತಿ ಮಾಡುವವರೂ ಬಿಪಿಎಲ್‌ ಚೀಟಿಗಳನ್ನು ಪಡೆದುಕೊಂಡಿದ್ದರು. ಈಗಾಗಲೇ ಅವುಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ಶುರು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇತ್ತೀಚೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪರಿಶೀಲನಾ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸುವಂತೆ ಖಡಕ್‌ ಆದೇಶ ನೀಡಿದ್ದಾರೆ. ಬಡವರಿಗಾಗಿ ನೀಡಲಾಗುತ್ತಿರುವ ಪಡಿತರ ಆಹಾರ ಪದಾರ್ಥಗಳು ಉಳ್ಳವರ ಪಾಲಾಗಬಾರದು ಎನ್ನುವುದು ಅವರ ಕಾಳಜಿಯಾಗಿದೆ.

































 
 

ಆರ್ಥಿಕ ಇಲಾಖೆಯ ಪ್ರಕಾರ ರಾಜ್ಯದಲ್ಲಿ ಒಟ್ಟು 1.47 ಕೋಟಿ ಕುಟುಂಬಗಳಿದ್ದು, ಇದರಲ್ಲಿ 1.13 ಕೋಟಿ ಬಿಪಿಎಲ್‌ ಕಾರ್ಡ್‌ ಹೊಂದಿವೆ. ಅಂದರೆ ಒಟ್ಟು ಕುಟುಂಬಗಳ ಪೈಕಿ ಶೇ.85ರಷ್ಟು ಬಿಪಿಎಲ್‌ ಕಾರ್ಡ್‌ದಾರರಿದ್ದಾರೆ. ಆದರೆ ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಶೇ.5.67ರಷ್ಟು ಕುಟುಂಬಗಳು ಮಾತ್ರ ಬಿಪಿಎಲ್‌ ವ್ಯಾಪ್ತಿಗೆ ಸೇರಬೇಕಾಗಿದೆ. ಬಿಪಿಎಲ್‌ ವ್ಯಾಪ್ತಿಗಿಂತ ಮೇಲಿದ್ದೂ ಬಿಪಿಎಲ್‌ ಕಾರ್ಡ್ ಹೊಂದಿರುವ ಕುಟುಂಬಗಳು ಎರಡು ರೀತಿಯ ಆದಾಯ ಪ್ರಮಾಣಪತ್ರಗಳನ್ನು ಹೊಂದಿವೆ. ಬಿಪಿಎಲ್‌ ಕಾರ್ಡ್‌ಗಾಗಿ 1 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಪ್ರಮಾಣಪತ್ರ ಹೊಂದಿದ್ದರೆ, ಸಾಲ ಪಡೆಯಲು 3 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವ ಪ್ರಮಾಣಪತ್ರ ಹೊಂದಿವೆ.

ಬಹುತೇಕ ಕುಟುಂಬಗಳು ಆಯುಷ್ಮಾನ್‌ ಭಾರತ್‌ ಯೋಜನೆಯ ಪ್ರಯೋಜನ ಪಡೆಯಲು ಬಿಪಿಎಲ್‌ ಕಾರ್ಡ್‌ ಹೊಂದಿವೆ. ಚುನಾವಣೆಗಳು ಹತ್ತಿರ ಬರುವಾಗ ಸರ್ಕಾರಗಳು ಮುಕ್ತವಾಗಿ ಬಿಪಿಎಲ್‌ ಕಾರ್ಡ್‌ ಹಂಚುತ್ತವೆ. ಚುನಾವಣೆ ಮುಗಿದ ನಂತರ ನಕಲಿ ಬಿಪಿಎಲ್‌ ಕಾರ್ಡ್‌ಗಳನ್ನು ಪತ್ತೆ ಹಚ್ಚಲು ಸೂಚಿಸುತ್ತವೆ. ಇದು ಅಧಿಕಾರಿಗಳ ಶ್ರಮವನ್ನು ವ್ಯರ್ಥ ಮಾಡುತ್ತಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top