ನಿತ್ಯ 80 ಸಾವಿರ ಭಕ್ತರಿಗೆ ಮಾತ್ರ ದರ್ಶನ ಅವಕಾಶ
ತಿರುವನಂತಪುರ: ಶಬರಿಮಲೆ ಯಾತ್ರೆಗೈಯ್ಯುವವರು ಈ ಬಾರಿ ಆನ್ಲೈನ್ ಬುಕ್ಕಿಂಗ್ ಮಾಡಿಕೊಳ್ಳುವುದು ಕಡ್ಡಾಯ. ಮಂಡಲ-ಮಕರವಿಳಕ್ಕು ಯಾತ್ರೆಗೆ ಪೂರ್ವಭಾವಿಯಾಗಿ ನಿನ್ನೆ ನಡೆದ ಸಭೆಯಲ್ಲಿ ಕೇರಳ ಸರಕಾರ ಈ ಸಲ ಯಾತ್ರಾರ್ಥಿಗಳಿಗೆ ಆನ್ಲೈನ್ ಬುಕ್ಕಿಂಗ್ ಕಡ್ಡಾಯಗೊಳಿಸುವ ನಿರ್ಧಾರ ಕೈಗೊಂಡಿದೆ.
ಪ್ರತಿದಿನ 80,000 ಭಕ್ತರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ಸಿಗಲಿದೆ. ಭಕ್ತರು ಶಬರಿಮಲೆ ದೇಗುಲದ ವೆಬ್ಸೈಟ್ನಲ್ಲಿ ವರ್ಚುವಲ್ ಬುಕ್ಕಿಂಗ್ ಮಾಡಬೇಕಾಗುತ್ತದೆ. ಈ ವೇಳೆ ಯಾತ್ರಾರ್ಥಿಗಳು ಸಾಗುವ ಮಾರ್ಗವನ್ನೂ ಆಯ್ದುಕೊಳ್ಳುವ ಅವಕಾಶ ಕೂಡ ಇದೆ. ಕಡಿಮೆ ಜನಸಂದಣಿ ಇರುವ ಮಾರ್ಗಗಳೂ ಲಭ್ಯವಿವೆ. ಕಾಡಿನ ಮಾರ್ಗದಲ್ಲಿ ಸಂಚರಿಸಲಿರುವ ಯಾತ್ರಾರ್ಥಿಗಳಿಗೆ ಅಗತ್ಯ ಸೌಲಭ್ಯ ಒದಗಿಸುವುದಾಗಿಯೂ ಸರಕಾರ ತಿಳಿಸಿದೆ.
ಈ ಸಲ ಶಬರಿಮಲೆಯಲ್ಲಿ ಸ್ಪಾಟ್ ಬುಕ್ಕಿಂಗ್ ಸೌಲಭ್ಯ ಇರುವುದಿಲ್ಲ. ಭಕ್ತರು ಮೊದಲೇ ಆನ್ಲೈನ್ ಬುಕ್ಕಿಂಗ್ ಮಾಡಿಕೊಂಡು ದರ್ಶನದ ಸಮಯ ಕಾದಿರಿಸಿಕೊಳ್ಳಬೇಕು. ಬುಕ್ಕಿಂಗ್ ರಹಿತರಾಗಿ ಬರುವ ಭಕ್ತರನ್ನು ಪರಿಶೀಲಿಸಲು ವ್ಯವಸ್ಥೆ ಮಾಡಲಿದ್ದೇವೆ. ನಿಲಕ್ಕಲ್ ಮತ್ತು ಎರುಮೇಲಿಯಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ದೇವಸ್ವಂ ಸಚಿವ ವಿ.ಎನ್.ವಾಸವನ್ ಹೇಳಿದ್ದಾರೆ.