ಮಂಗಳೂರು: ವಿಧಾನ ಪರಿಷತ್ ಸ್ಥಾನದ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳ ಸಭೆ ಇಂದು ನಡೆಯಿತು.
ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಕಿಶೋರ್ ಕುಮಾರ್ ಅವರಿಂದ ಪಕ್ಷ ಚಟುವಟಿಕೆಯಲ್ಲಿ ಪ್ರೇರಣೆ ಪಡೆದವರಲ್ಲಿ ನಾನೂ ಒಬ್ಬ ಎಂಬ ಹೆಮ್ಮೆಯಿದೆ. ವಿವಿಧ ಚುನಾವಣೆಗಳಲ್ಲಿ ಬೂತ್ ಮಟ್ಟದಿಂದ ರಾಜ್ಯ ಮಟ್ಟದ ವರೆಗೆ ಸಂಘಟನಾ ಚಟುವಟಿಕೆಯ ಅನುಭವವಿರುವ ಕಿಶೋರ್ ಕುಮಾರ್ ಅವರನ್ನು ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿಯು ಪಕ್ಷ ಸಂಘಟನೆ, ಚಟುವಟಿಕೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ. ಅವರನ್ನು ವಿಧಾನ ಪರಿಷತ್ತಿಗೆ ಗೆಲ್ಲಿಸಿ ಕಳಿಸಿಕೊಡುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಹೇಳಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿ, ಪಕ್ಷದ ಅನೇಕ ಜವಬ್ದಾರಿಗಳನ್ನು ಹೊತ್ತು ಯಶಸ್ವಿಯಾಗಿರುವ ಕಿಶೋರ್ ಕುಮಾರ್ ಅವರು ಜನಸೇವೆಯಲ್ಲಿಯೂ ಅದೇ ಬದ್ಧತೆ ಪ್ರದರ್ಶಿಸುತ್ತಾರೆ. ವಿಧಾನ ಪರಿಷತ್ತಿನಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಧ್ವನಿಯಾಗುತ್ತಾರೆ ಎಂದು ಹೇಳಿದರು.
ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಕಿಶೋರ್ ಕುಮಾರ್ ಪುತ್ತೂರು ಅವರ ಗೆಲುವು ನಿಶ್ಚಿತವಾಗಿದೆ. ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸೋಲೊಪ್ಪಿಕೊಳ್ಳುವ ವಾತಾವರಣ ನಿರ್ಮಾಣ ವಾಗಿದ್ದು ಬಿಜೆಪಿಯ ಗೆಲುವು ನಿರ್ಧಾರವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಚು, ಉಪ ಮೇಯರ್ ಭಾನುಮತಿ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ಇನ್ನಿತರ ಪ್ರಮುಖರು ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು.