ಜೆರಸಲೇಂ ಎಂದು ಹೆಸರು ಬದಲಾಯಿಸಿದ ಮಾಲೀಕ
ಮಂಗಳೂರು : ಮೂಡುಬಿದಿರೆ-ಮೂಲ್ಕಿ ಮಧ್ಯೆ ಸಂಚರಿಸುವ ಖಾಸಗಿ ಬಸ್‌ಗೆ ಇಸ್ರೇಲ್ ಎಂದು ಹೆಸರಿಟ್ಟದ್ದು ಭಾರಿ ವಿವಾದಕ್ಕೊಳಗಾದ ಬಳಿಕ ಮಾಲೀಕರು ಬಸ್‌ನ ಹೆಸರನ್ನೇ ಬದಲಾಯಿಸಿದ್ದಾರೆ. ಮೂಲತಃ ಕಟೀಲಿನವರಾದ ಲೆಸ್ಬರ್ ಕಟೀಲು ಎಂಬವರು ಕಳೆದ ಸುಮಾರು 12 ವರ್ಷಗಳಿಂದ ಇಸ್ರೇಲ್‌ನಲ್ಲಿ ನೌಕರಿ ಮಾಡುತ್ತಿದ್ದಾರೆ. ಅಲ್ಲಿ ದುಡಿದ ಹಣದಿಂದ ಬಸ್ ಖರೀದಿಸಿ ಮೂಡುಬಿದಿರೆ-ಮೂಲ್ಕಿ ರೂಟ್‌ನಲ್ಲಿ ಸರ್ವಿಸ್ ನಡೆಸುತ್ತಿದ್ದು. ಲೆಸ್ಬರ್ ಅವರ ಸಂಬಂಧಿಕರು ಈ ಬಸ್‌ನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು.
ತನಗೆ ಅನ್ನ ನೀಡುತ್ತಿರುವ ಇಸ್ರೇಲ್ ಮೇಲಿನ ಅಭಿಮಾನದಿಂದ ಅವರು ತನ್ನ ಬಸ್‌ಗೆ ಇಸ್ರೇಲ್ ಟ್ರಾವೆಲ್ಸ್ ಎಂದು ಹೆರಿಟ್ಟಿದ್ದರು. ಬಸ್‌ನ ಮುಂದೆ ಇಸ್ರೇಲ್ ಎಂಬ ಹೆಸರಿದ್ದರೆ ಹಿಂದಿನ ಗಾಜಿನಲ್ಲಿ ಇಸ್ರೇಲ್ ಟ್ರಾವೆಲ್ಸ್ ಮತ್ತು ಅದರ ಕೆಳಗೆ ಟೆಲ್ ಅವೀವ್ ಎಂದು ಬರೆದು ಫೋನ್ ನಂಬರ್ ಹಾಕಿದ್ದರು. ಅದರ ಕೆಳಗೆ ಪಂದಳ ಕಂದ ಎಂಬ ಹೆಸರು ಬರೆಸಿದ್ದರು.
ಆದರೆ ಇಸ್ರೇಲ್ ಹೆಸರು ಹಲವರ ಕಣ್ಣು ಕುಕ್ಕಿತ್ತು. ಅನೇಕ ಮಂದಿ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸೋಷಿಯಲ್ ಮೀಡಿಯಾದಲ್ಲೂ ಅನೇಕ ಮಂದಿ ಇಸ್ರೇಲ್ ಹೆಸರನ್ನು ವಿರೋಧಿಸಿ ಬೆದರಿಕೆಯ ಸಂದೇಶಗಳನ್ನು ಹಾಕಿದ್ದರು. ಇದು ಪೊಲೀಸರ ಗಮನಕ್ಕೆ ಬಂದು ಅವರು ಮುಂದೆ ದ್ವೇಷ ಹರಡುವುದು ಬೇಡ ಎಂಬ ಕಾರಣಕ್ಕೆ ಬಸ್ಸಿನ ಹೆಸರು ಬದಲಾಯಿಸಲು ಸೂಚಿಸಿದ್ದರು.
ಈ ಎಲ್ಲ ಬೆಳವಣಿಗೆಯಿಂದ ಬೇಸರಗೊಂಡ ಲೆಸ್ಬರ್ ಕಟೀಲು ಈಗ ಬಸ್ಸಿನ ಹೆಸರನ್ನು ಜೆರುಸಲೇಂ ಎಂದು ಬದಲಾಯಿಸಿದ್ದಾರೆ.
ಬಸ್‌ಗೆ ಇಸ್ರೇಲ್ ಹೆಸರು ಇಟ್ಟದ್ದನ್ನು ಸಹಿಸದ ಪ್ಯಾಲೆಸ್ತೀನ್ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ಬಸ್ಸಿನ ಹೆಸರು ಬದಲಿಸದಿದ್ದರೆ ಸೀಜ್ ಮಾಡಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಇಸ್ರೇಲ್‌ನಲ್ಲಿ ನೌಕರಿ ಮಾಡುತ್ತಿರುವ ಕಾರಣ ಆ ದೇಶದ ಅಭಿಮಾನದಿಂದ ಬಸ್ಸಿಗೆ ಹೆಸರಿಟ್ಟಿದ್ದೆ. ಇದರ ಹಿಂದೆ ಬೇರೆ ಯಾವುದೇ ಉದ್ದೇಶ ಇರಲಿಲ್ಲ ಎಂದು ಲೆಸ್ಬರ್ ಹೇಳಿದ್ದಾರೆ.