ಕನ್ನಡ ಚಿತ್ರರಂಗ ಮರೆಯಬಾರದ ಹೆಸರು ವಿಜಯ ಭಾಸ್ಕರ್

2024 ಆ ಸಂಗೀತ ನಿರ್ದೇಶಕನ ಜನ್ಮ ಶತಮಾನದ ವರ್ಷ

ಅವರು ಬದುಕಿದ್ದರೆ ಈ ವರ್ಷ ಅವರಿಗೆ ನೂರು ತುಂಬುತ್ತಿತ್ತು. ಕನ್ನಡ ಚಿತ್ರರಂಗದಲ್ಲಿ ಅತಿಹೆಚ್ಚು ಮಾಧುರ್ಯಪೂರ್ಣ ಹಾಡುಗಳನ್ನು ಕೊಟ್ಟ ಕೀರ್ತಿ ಅವರದ್ದು. ಹಾಡುಗಳ ಮೂಲಕ ಅವರು ಇಂದಿಗೂ ನಮ್ಮ ನಡುವೆ ಜೀವಂತರಾಗಿದ್ದಾರೆ ಎನ್ನಬಹುದು.

ಗಟ್ಟಿಯಾದ ಶಾಸ್ತ್ರೀಯ ಚೌಕಟ್ಟು

































 
 

1924ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿದವರು. ಆದರೆ ಬಾಲ್ಯದಿಂದಲೂ ಅವರ ಆಸಕ್ತಿ ಸಂಗೀತದ ಕಡೆಗೆ ಇತ್ತು. ಗೋವಿಂದ್ ಭಾವೆ ಎಂಬ ಗುರುವಿನಿಂದ ಅವರು ಹಿಂದೂಸ್ತಾನಿ ಸಂಗೀತದ ಶಿಕ್ಷಣ ಪಡೆದರು. ಹಲವು ವರ್ಷ ನಾರಾಯಣ ಸ್ವಾಮಿ ಅವರಿಂದ ಕರ್ನಾಟಕ ಸಂಗೀತದ ಪಾಠವೂ ದೊರೆಯಿತು. ಲೀನಿ ಹಂಟ್ ಅವರಿಂದ ವೆಸ್ಟರ್ನ್ ಮ್ಯೂಸಿಕ್ ಕಲಿತರು.

ಆದರೆ ಅವರು ಶುದ್ಧ ಸಂಗೀತವನ್ನು ಕಲಿತದ್ದು ಮುಂಬೈಗೆ ಹೋಗಿ ನೌಶಾದ್ ಮತ್ತು
ಮದನಮೋಹನ್ ಎಂಬ ಅದ್ಭುತ ಸಂಗೀತ ನಿರ್ದೇಶಕರ ಜೊತೆಗೆ. ಪಿಯಾನೊ ನುಡಿಸುತ್ತಾ ಆರ್ಕೆಸ್ಟ್ರಾ ಟೀಮ್ ಕಟ್ಟಿ ನೂರಾರು ಸ್ಟೇಜ್ ಶೋಗಳನ್ನು ಕೊಟ್ಟರು. ಆಗಲೂ ಅವರ ಮನಸ್ಸು ಸಂಗೀತ ನಿರ್ದೇಶನದ ಕಡೆಗೆ ಇತ್ತು.

ಮಾಧುರ್ಯದ ಶಕೆ ಆರಂಭ

1953ರಲ್ಲಿ ಆರ್.ನಾಗೇಂದ್ರ ರಾವ್ ಅವರ ಸಿನಿಮಾ ‘ರಾಮ ಪೂಜಾ’ ಮೂಲಕ ಅವರು ಸ್ವತಂತ್ರ ಸಂಗೀತ ನಿರ್ದೇಶಕರಾದರು. ಅಲ್ಲಿಂದ ಅವರಿಗೆ ಕನ್ನಡದ ಶ್ರೇಷ್ಠ ಸಿನಿಮಾ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಪರಿಚಯ ಆಯಿತು. ಬೆಳ್ಳಿಮೋಡ ಪುಟ್ಟಣ್ಣ ಅವರ ಮೊದಲ ಸಿನಿಮಾ ಆಗಿತ್ತು. ಅದಕ್ಕೆ ವಿಜಯ ಭಾಸ್ಕರ್ ಸಂಗೀತ ನೀಡಿದರು.

ಮೂಡಲ ಮನೆಯ ಮುತ್ತಿನ ನೀರಿನ ಎರಕವಾ ಹೊಯ್ದ…

ಬೆಳ್ಳಿಮೋಡ ಸಿನಿಮಾದ ಎಲ್ಲ ಹಾಡುಗಳೂ ಟಾಪ್‌ಹಿಟ್ ಆದರೂ ಬೇಂದ್ರೆಯವರ ಮೂಡಲ ಮನೆ ಹಾಡು, ಅದರ ಕಂಪೋಸ್, ಅದರ ಚಿತ್ರೀಕರಣ ಇವುಗಳನ್ನು ಮರೆಯೋದು ಹೇಗೆ? ಈಗಲೂ ಆ ಹಾಡು ಕೇಳುವಾಗ ಮೈ ಜುಂ ಆಗದೇ ಇರದು. ಅದು ವಿಜಯ ಭಾಸ್ಕರ್ ಅವರ ಮ್ಯೂಸಿಕ್‌ನ ತಾಕತ್ತು.

ಅಲ್ಲಿಂದ ವಿಜಯ ಭಾಸ್ಕರ್ ಹಿಂದೆ ತಿರುಗಿ ನೋಡುವ ಪ್ರಸಂಗವೇ ಬರಲಿಲ್ಲ. ಮುಂದೆ ಪುಟ್ಟಣ್ಣ ಅವರ 25 ಸಿನೆಮಾಗಳಲ್ಲಿ 19 ಸಿನಿಮಾಗಳಿಗೆ ಸಂಗೀತ ಕೊಟ್ಟವರು ಇದೇ ವಿಜಯ ಭಾಸ್ಕರ್. ಅದೂ ಎಂತಹ ಸಿನೆಮಾಗಳು ಅಂತೀರಿ? ನಾಗರಹಾವು, ಗೆಜ್ಜೆಪೂಜೆ, ಶರಪಂಜರ, ಕಥಾಸಂಗಮ, ಮಾನಸ ಸರೋವರ, ಬಿಳಿಹೆಂಡ್ತಿ, ಶುಭಮಂಗಳ, ಉಪಾಸನೆ, ಅಮೃತ ಘಳಿಗೆ…ಎಲ್ಲವೂ ಸೂಪರ್ ಹಿಟ್. ಪುಟ್ಟಣ್ಣ ಅವರಿಗೆ ಅಪಾರವಾದ ಸಂಗೀತದ ಆಸಕ್ತಿ ಇದ್ದ ಕಾರಣ ವಿಜಯ ಭಾಸ್ಕರ್ ಅವರ ಸಿನಿಮಾಗಳಲ್ಲಿ ಅದ್ಭುತವಾದ ಮಾಧುರ್ಯದ ರಸಪಾಕವನ್ನೇ ಕೊಟ್ಟರು. ಹಾಗೆಯೇ ಖ್ಯಾತ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ (ರವಿ) ಅವರ ಹೆಚ್ಚಿನ ಸಿನಿಮಾಗಳಿಗೆ ಸಂಗೀತ ಕೊಟ್ಟದ್ದು ಇದೇ ವಿಜಯ ಭಾಸ್ಕರ್.

ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ

ಬಾರೇ ಬಾರೇ (ನಾಗರಹಾವು), ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ (ಶರಪಂಜರ), ಮಾನಸ ಸರೋವರ (ಶೀರ್ಷಿಕೆ ಗೀತೆ), ಹಿಂದುಸ್ತಾನವು ಎಂದೂ ಮರೆಯದ (ಅಮೃತ ಘಳಿಗೆ), ಸ್ನೇಹದ ಕಡಲಲ್ಲಿ (ಶುಭಮಂಗಳ), ಸಂಪಿಗೆ ಮರದ ಹಸಿರೆಲೆ ನಡುವೆ (ಉಪಾಸನೆ), ಭಾರತ ಭೂಶಿರ ಮಂದಿರ ಸುಂದರಿ (ಉಪಾಸನೆ), ಜಯತು ಜಯ ವಿಠ್ಠಲ (ಸಂತ ತುಕಾರಾಂ) ಇಂತಹ ಸೂಪರ್ ಹಿಟ್ ಹಾಡುಗಳನ್ನು ಕನ್ನಡಿಗರು ಮರೆಯುವುದು ಸಾಧ್ಯವೇ ಇಲ್ಲ.

ಆ ಸಿನಿಮಾಗಳು ಬಿಡುಗಡೆಯಾಗಿ ಎಷ್ಟೋ ದಶಕಗಳು ಆಗಿದ್ದರೂ ಈ ಹಾಡುಗಳನ್ನು ಕನ್ನಡಿಗರು ಇಂದಿಗೂ ಮರೆತಿಲ್ಲ. ಅದು ವಿಜಯ ಭಾಸ್ಕರ್ ಅವರ ಸಂಗೀತದ ಪವರ್. ಅದು ಶುದ್ಧವಾದ ಸಂಗೀತದ ಖದರ್‌.

ಅದೇ ರೀತಿ ನೀನೇ ಸಾಕಿದಾ ಗಿಣಿ (ಮಾನಸ ಸರೋವರ), ಶಾರದೆ ದಯೆ ತೋರಿದೆ (ಮಲಯ ಮಾರುತ), ತುತ್ತು ಅನ್ನ ತಿನ್ನೋಕೆ (ಜಿಮ್ಮಿಗಲ್ಲು), ಬೆಸುಗೆ (ಶೀರ್ಷಿಕೆ ಗೀತೆ), ಯಾವ ಜನ್ಮದ ಮೈತ್ರಿ (ಶೀರ್ಷಿಕೆ ಗೀತೆ), ಕನ್ನಡ ನಾಡಿನ ವೀರ ರಮಣಿಯ (ನಾಗರಹಾವು), ಪಂಚಮ ವೇದ ಪ್ರೇಮದ ನಾದ (ಗೆಜ್ಜೆಪೂಜೆ), ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೆ (ಶರಪಂಜರ) ಇಂತಹ ಸಾವಿರಾರು ಹಾಡುಗಳು ವಿಜಯ ಭಾಸ್ಕರ್ ಸಂಗೀತದ ಮೂಲಕ ಅಮರತ್ವವನ್ನು ಪಡೆದಿವೆ.

ಒಬ್ಬ ಸಂಗೀತ ನಿರ್ದೇಶಕ ಸಂಗೀತ ಕೊಟ್ಟ ಒಂದು ಸಿನಿಮಾದ ಕೆಲವು ಹಾಡು ಹಿಟ್ ಆಗುವುದು ಸಹಜ. ಆದರೆ ವಿಜಯ ಭಾಸ್ಕರ್ ಸಂಗೀತ ಕೊಟ್ಟ ಸಿನಿಮಾಗಳ ಎಲ್ಲ ಹಾಡುಗಳೂ ಹಿಟ್ ಆಗಿವೆ ಎಂದರೆ ಎಷ್ಟು ಗ್ರೇಟ್ ಅಲ್ವಾ? ಅದರಲ್ಲಿಯೂ ಶಾಸ್ತ್ರೀಯ ಸಂಗೀತ ಆಧಾರಿತವಾದ ಮಲಯ ಮಾರುತ, ಉಪಾಸನೆ ಸಿನಿಮಾಗಳ ಎಲ್ಲ ಹಾಡುಗಳೂ ಹಿಟ್ ಲಿಸ್ಟ್ ಸೇರಿವೆ.

ಒಂಬತ್ತು ಭಾಷೆ, 700 ಸಿನೆಮಾಗಳು ವಿಜಯ ಭಾಸ್ಕರ್ ಕಾಣ್ಕೆ

1980ರಿಂದ 2001ರವರೆಗೆ ವಿಜಯ ಭಾಸ್ಕರ್ ಭಾರತದ ಒಂಬತ್ತು ಭಾಷೆಗಳ 700 ಸಿನಿಮಾಗಳಿಗೆ ಸಂಗೀತ ಕೊಟ್ಟಿದ್ದಾರೆ. ಅದರಲ್ಲಿ ಕನ್ನಡದ 170 ಸಿನಿಮಾಗಳು ಸೇರಿವೆ. ಉಳಿದಂತೆ ತಮಿಳು, ತೆಲುಗು, ಮಲಯಾಳಂ, ಒರಿಯಾ, ಹಿಂದಿ, ಕೊಂಕಣಿ, ಮರಾಠಿ ಭಾಷೆಯ ಸಿನಿಮಾಗಳು ಸೇರಿವೆ. ಹಾಗೆಯೇ ಇಂಗ್ಲೆಂಡಿಗೆ ಹೋಗಿ ರಾಬರ್ಟ್ ಕ್ಲೈವ್ ಎಂಬ ಇಂಗ್ಲಿಷ್ ಸಿನಿಮಾಕ್ಕೂ ಸಂಗೀತ ಕೊಟ್ಟು ಅವರು ಬಂದಿದ್ದಾರೆ. ಜಿ.ವಿ.ಅಯ್ಯರ್ ಅವರ ಮೆಗ್ನಮಾಪಸ್ ಹಿಂದಿ ಸಿನೆಮಾ ವಿವೇಕಾನಂದ ಇದಕ್ಕೂ ಅವರೇ ಸಂಗೀತ ನೀಡಿದ್ದಾರೆ. ಅವರಿಗೆ 6 ಬಾರಿ ಅತ್ಯುತ್ತಮ ಸಂಗೀತ ನಿರ್ದೇಶಕ ರಾಜ್ಯ ಪ್ರಶಸ್ತಿಗಳು ಬಂದಿವೆ. ಮಲಯಾಳಂ ಲೆಜೆಂಡ್ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಅವರ 3 ಶ್ರೇಷ್ಠ ಮಲಯಾಳಂ ಸಿನಿಮಾಗಳಿಗೆ ಅವರೇ ಸಂಗೀತ ನಿರ್ದೇಶನ ಮಾಡಿದ್ದಾರೆ. ಸುರ್ ಸಿಂಗಾರ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ವಿಜಯ ಭಾಸ್ಕರ್.

ಶಾಸ್ತ್ರೀಯ ಸಂಗೀತ, ಜಾನಪದ ಹಾಡು, ಭಾವಗೀತೆ, ಭಕ್ತಿ ಸಂಗೀತ, ಗಝಲ್, ಕವ್ವಾಲಿ, ವೆಸ್ಟರ್ನ್….ಹೀಗೆ ಎಲ್ಲ ಪ್ರಕಾರದ ಹಾಡುಗಳಿಗೆ ಸಂಗೀತವನ್ನು ಕೊಟ್ಟ ಕೀರ್ತಿ ಅವರಿಗೆ ಸಲ್ಲಬೇಕು.

ಎಕ್ಕ ಸಕ್ಕ ಎಕ್ಕ ಸಕ್ಕ ಎಕ್ಕ ಸಕ್ಕಲಾ…

70ರ ದಶಕದ ಶ್ರೇಷ್ಠವಾದ ಮತ್ತು ರಾಷ್ಟ್ರಪ್ರಶಸ್ತಿಯನ್ನು ಪಡೆದ ತುಳು ಸಿನಿಮಾ ‘ಕೋಟಿ ಚೆನ್ನಯ’. ಅದಕ್ಕೆ ಸಂಗೀತ ನೀಡಿದವರು ವಿಜಯ ಭಾಸ್ಕರ್. ಎಕ್ಕ ಸಕ್ಕ ಎಕ್ಕ ಸಕ್ಕ ಎಕ್ಕ ಸಕ್ಕಲಾ, ಕೆಮ್ಮಲೆತ ಬ್ರಹ್ಮ, ಜೋಡು ನಂದಾ ದೀಪ ಬೆಳಗಂಡ್…ಮೊದಲಾದ ಹಾಡುಗಳನ್ನು ತುಳು ಭಾಷಿಗರು ಇಂದಿಗೂ ನೆನಪಿಸಿಕೊಳ್ಳುವಂತೆ ಮಾಡಿದವರು ಇದೇ ವಿಜಯ ಭಾಸ್ಕರ್. ಹಾಗೆಯೇ ಸಂಗ್ಯಾ ಬಾಳ್ಯಾ, ನಾಂದಿ, ಉಯ್ಯಾಲೆ ಮೊದಲಾದ ಪ್ರಯೋಗಾತ್ಮಕ ಸಿನಿಮಾಗಳಿಗೂ ಸಂಗೀತ ಕೊಟ್ಟು ಗೆಲ್ಲಿಸಿದವರು ಅವರು.

ಅಮರತ್ವವನ್ನು ಪಡೆದ ವಿಜಯ ಭಾಸ್ಕರ್ ಹಾಡುಗಳು

2002ರ ಇಸವಿ 77ನೇ ವಯಸ್ಸಿನಲ್ಲಿ ಅವರು ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ಆದರೆ ಅವರು ಸಂಗೀತ ನೀಡಿದ ಸಾವಿರಾರು ಹಾಡುಗಳ ಮೂಲಕ ವಿಜಯ ಭಾಸ್ಕರ್ ಇಂದಿಗೂ ನಮ್ಮ ಹೃದಯದಲ್ಲಿ ಜೀವಂತವಾಗಿದ್ದಾರೆ. ಕನ್ನಡದ ಫಿಲಂ ಚೇಂಬರ್ ಅವರ ನೆನಪಿಗಾಗಿ ಅವರ ಶತಮಾನದ ವರ್ಷ ಏನಾದರೂ ಮಾಡಲೇಬೇಕು ಎಂಬ ಒತ್ತಾಯ ಕನ್ನಡಿಗರದಾಗಬೇಕು.
ನನಗೆ ಇಷ್ಟವಾದ ಅವರ ಇನ್ನೂ ಕೆಲವು ಹಾಡುಗಳ ಪಟ್ಟಿಯ ಜೊತೆಗೆ ಅವರಿಗೆ ಶ್ರದ್ಧಾಂಜಲಿ ಕೊಡುವೆ.

1) ಯಾವ ಹೂವು ಯಾರ ಮುಡಿಗೋ, ಯಾರ ಒಲವು ಯಾರ ಕಡೆಗೋ.
2) ಓ ಗುಣವಂತಾ.
3) ಬೆಳ್ಳಿ ಮೋಡವೆ ಎಲ್ಲಿ ಓಡುವೇ
4) ಕೊಡಗಿನ ಕಾವೇರಿ
5) ವಸಂತ ಬರೆದನು ಒಲವಿನ ಓಲೆ
6) ಭಾವವೆಂಬ ಹೂವು ಅರಳಿ
7) ಎಲ್ಲೆಲ್ಲಿ ಸಂಗೀತವೇ
8) ಚಂದ ಚಂದ ಗುಲಾಬಿ ತೋಟವೇ ಚಂದ
9) ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು
10) ಭಾವವೆಂಬ ಹೂವು ಅರಳಿ
11) ಯಾವ ತಾಯಿಯ ಮಡಿಲ ಮಗಳಾದರೇನು
12) ಹಾಡೊಂದ ನಾ ಹಾಡುವೆ
13) ಆಚಾರವಿಲ್ಲದ ನಾಲಗೆ

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top