ಮಾನವ ಹಕ್ಕುಗಳ ಕಾರ್ಯಕರ್ತರೆಂದು ಹೇಳಿಕೊಂಡು ಜೋಡಿಯನ್ನು ಬೆದರಿಸಿದ ಪಾತಕಿಗಳು
ಪುಣೆ: ಗೆಳೆಯನ ಜೊತೆಗಿದ್ದ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಸಂಭವಿಸಿದೆ. ಆರೋಪಿಗಳು ತಮ್ಮನ್ನು ಮಾನವ ಹಕ್ಕುಗಳ ಕಾರ್ಯಕರ್ತರೆಂದು ಹೇಳಿಕೊಂಡು ಯುವ ಜೋಡಿಯನ್ನು ಬೆದರಿಸಿ ಯುವಕನನ್ನು ಥಳಿಸಿ ಯುವತಿಯನ್ನು ಕಾರಿನಲ್ಲಿ ಅಪಹರಿಸಿದ್ದಾರೆ. ಘಟನೆಗೆ ಸಂಬಂಧಿಸಿ ರಾಜೇಖಾನ್ ಕರೀಂ ಪಠಾಣ್ (36) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ರಾತ್ರಿ 11 ಗಂಟೆ ವೇಳೆಗೆ ಸಂತ್ರಸ್ತ ಯುವತಿ ಆಕೆಯ ಸ್ನೇಹಿತನೊಂದಿಗೆ ಪುಣೆಯ ಬೋಪ್‌ದೇವ್ ಘಾಟ್ ಪ್ರದೇಶಕ್ಕೆ ತೆರಳಿದ್ದಳು. ಈ ವೇಳೆ ಅಲ್ಲಿಗೆ ಬಂದ ಪಠಾಣ್ ತನ್ನನ್ನು ಮಾನವ ಹಕ್ಕುಗಳ ಕಾರ್ಯಕರ್ತ ಎಂದು ಹೇಳಿಕೊಂಡು ಈ ಪ್ರದೇಶದಲ್ಲಿ ದಂಪತಿಗಳು ಬರುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿ ಅವರ ಫೋಟೋಗಳನ್ನು ತೆಗೆದುಕೊಂಡಿದ್ದಾನೆ.
ನಂತರ ಯುವತಿಯನ್ನು ಬೆದರಿಸಿ ತನ್ನ ಕಾರಿಗೆ ಬಲವಂತವಾಗಿ ಹತ್ತಿಸಿದ್ದಾನೆ. ಯುವತಿಯ ಸ್ನೇಹಿತನನ್ನು ಥಳಿಸಿದ್ದಾನೆ. ಆಕೆಯನ್ನು ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗಿ ಇಬ್ಬರು ಸ್ನೇಹಿತರೊಂದಿಗೆ ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ. ಬಳಿಕ ಯುವತಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಯುವತಿ ಇಂದು ಬೆಳಗ್ಗೆ ಪುಣೆಯ ಕೊಂಡ್ವಾ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಾಥಮಿಕ ತನಿಖೆಯಿಂದ ಆಕೆಯ ದೇಹಕ್ಕೆ ಹಲವಾರು ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಇನ್ನಿಬ್ಬರು ಆರೋಪಿಗಳನ್ನು ಪತ್ತೆಹಚ್ಚಲು ಅಪರಾಧ ವಿಭಾಗ ಮತ್ತು ಪತ್ತೆ ವಿಭಾಗದಿಂದ 10 ತಂಡಗಳನ್ನು ನಿಯೋಜಿಸಲಾಗಿದೆ.