ಸಿಬಿಐ, ಪೊಲೀಸ್, ಎಫ್‌ಎಸ್‌ಎಸ್‌ಎಐ ಅಧಿಕಾರಿಗಳನ್ನೊಳಗೊಂಡ ಎಸ್‌ಐಟಿ ರಚನೆ
ಹೊಸದಿಲ್ಲಿ : ತಿರುಪತಿ ಲಡ್ಡು ಪ್ರಸಾದದಲ್ಲಿ ದನದ ಮತ್ತು ಮೀನಿನ ಕೊಬ್ಬಿನಂಶ ಸೇರಿಸಿರುವ ವಿವಾದದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ.ವಿ ವಿಶ್ವನಾಥನ್ ಅವರ ಪೀಠ ಈ ಪ್ರಕರಣದ ಬಗ್ಗೆ ಹೊಸದಾಗಿ ತನಿಖೆ ನಡೆಸುವಂತೆ ಆದೇಶಿಸಿ ಸಿಬಿಐ, ರಾಜ್ಯ ಪೊಲೀಸ್ ಮತ್ತು ಎಫ್‌ಎಸ್‌ಎಸ್‌ಎಐ ಅಧಿಕಾರಿಗಳನ್ನು ಒಳಗೊಂಡಿರುವ ಹೊಸ ಐದು-ಸದಸ್ಯರ ಸ್ವತಂತ್ರ ಎಸ್‌ಐಟಿಯನ್ನು ರಚಿಸಲು ಸೂಚಿಸಿದೆ.
ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್‌ಗೆ ಹೇಳಿಕೆ ನೀಡಿದ್ದು, ಎಸ್‌ಐಟಿಯ ಮೇಲೆ ಕೇಂದ್ರದ ಹಿರಿಯ ಅಧಿಕಾರಿ ನಿಗಾ ವಹಿಸಬೇಕು, ಇದರಿಂದ ಜನರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಹೇಳಿದರು.
ಸ್ವತಂತ್ರ ಎಸ್‌ಐಟಿ ರಚನೆಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಸಿಬಿಐ ಮತ್ತು ರಾಜ್ಯ ಸರ್ಕಾರದಿಂದ ತಲಾ ಇಬ್ಬರು ಸದಸ್ಯರು, ಎಫ್‌ಎಸ್‌ಎಸ್‌ಎಐ ಸದಸ್ಯನನ್ನೂ ಈ ಸಮಿತಿಯಲ್ಲಿ ಸೇರಿಸಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ. ಎಫ್‌ಎಸ್‌ಎಸ್‌ಐ ಭಾರತದಲ್ಲಿ ಆಹಾರ ಪದಾರ್ಥಗಳ ಗುಣಮಟ್ಟದ ಕುರಿತು ಪ್ರಮಾಣಪತ್ರ ನೀಡುವ ಉನ್ನತ ಸರಕಾರಿ ಸಂಸ್ಥೆಯಾಗಿದೆ.
ಇದು ಕೋಟ್ಯಂತರ ಜನರ ನಂಬಿಕೆಯ ಪ್ರಶ್ನೆ. ಹೀಗಿರುವಾಗ ಇದೊಂದು ರಾಜಕೀಯ ನಾಟಕವಾಗಬಾರದು, ಸ್ವತಂತ್ರ ಸಂಸ್ಥೆ ಇದ್ದರೆ ಆತ್ಮವಿಶ್ವಾಸ ಮೂಡುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸೆಪ್ಟೆಂಬರ್ 30ರಂದು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ರಾಜ್ಯವು ನೇಮಿಸಿದ ಎಸ್‌ಐಟಿ ತನಿಖೆಯನ್ನು ಮುಂದುವರಿಸಬೇಕೆ ಅಥವಾ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕೆ ಎಂದು ನಿರ್ಧರಿಸಲು ಸಹಾಯ ಮಾಡುವಂತೆ ಪೀಠವು ಮೆಹ್ತಾ ಅವರನ್ನು ಕೇಳಿತ್ತು.
ಪ್ರಸಾದ ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪವನ್ನು ಬಳಸಲಾಗಿದೆಯೆ ಎಂದು ಆಂಧ್ರಪ್ರದೇಶ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್ ಕೇಳಿದೆ. ಟಿಡಿಪಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, ಲಡ್ಡುಗಳ ರುಚಿ ಚೆನ್ನಾಗಿಲ್ಲ ಎಂದು ಜನರು ದೂರಿದ್ದಾರೆ, ಕಲುಷಿತ ತುಪ್ಪವನ್ನು ಪ್ರಸಾದಕ್ಕೆ ಬಳಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.