ಮಾರ್ಕೆಟ್‌ಗೆ ದಾಂಗುಡಿ ಇಡ್ತಾ ಇವೆ ಮೆಟಾ-ರೆಬಾನ್ ಕನ್ನಡಕಗಳು
ಇವತ್ತು ಯಾವುದಾದರೂ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆ ಆಗ್ತಾ ಇದೆ ಎಂದರೆ ಅದು ಐಟಿ ಕ್ಷೇತ್ರದಲ್ಲಿ. ಅದರಲ್ಲಿಯೂ ಯಾವಾಗ ಕೃತಕ ಬುದ್ಧಿಮತ್ತೆಯು (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಜೊತೆಗೆ ಸೇರಿತೋ ಆಗ ಇನ್ನೂ ವೇಗವಾಗಿ ತಾಂತ್ರಿಕತೆ ಬೆಳೆಯುತ್ತ ಇದೆ.
2030ಕ್ಕೆ ತಲುಪುವಾಗ ಮನುಷ್ಯನ ಬುದ್ಧಿಮತ್ತೆಗೆ ಸಮನಾದ ಸಾಮರ್ಥ್ಯ ಇರುವ ಸಾಫ್ಟ್‌ವೇರ್ ಕಂಡುಹಿಡಿಯುತ್ತೇವೆ ಎಂದು ಐಟಿ ಕಂಪನಿಗಳು ಸವಾಲು ಸ್ವೀಕರಿಸಿವೆ ಮತ್ತು ಈಗಲೇ ಸಂಶೋಧನೆ ಆರಂಭವಾಗಿವೆ. ಇದು ಎಲ್ಲಿಯವರೆಗೆ ತಲುಪಬಹುದು ಎನ್ನುವುದು ನಮ್ಮ ಊಹೆಗೆ ಮೀರಿದ್ದು.
ಈಗ ಸ್ಮಾರ್ಟ್ ಗ್ಲಾಸ್ ಸರದಿ
ಸ್ಮಾರ್ಟ್ ವಾಚ್ ಇವತ್ತು ಮೂಲೆ ಸೇರಿ ಆಗಿದೆ. ಸ್ಮಾರ್ಟ್ ಫೋನ್ ಕೂಡ ಮುಂದಿನ ದಿನಗಳಲ್ಲಿ ಔಟ್‌ಡೇಟ್ ಆಗುವ ಸೂಚನೆಗಳು ಕಂಡು ಬರುತ್ತಿವೆ. ಮುಂದೆ ಏನು ಎಂಬ ಪ್ರಶ್ನೆಗೆ ಉತ್ತರ ಖಂಡಿತವಾಗಿಯೂ ಸ್ಮಾರ್ಟ್ ಗ್ಲಾಸ್ ಹೌದು.
ಮುಂಚೂಣಿಯ ಐಟಿ ಕಂಪನಿಯಾದ ಆಪಲ್ ಈಗಾಗಲೇ ಸ್ಮಾರ್ಟ್ ಗ್ಲಾಸ್ ರೆಡಿ ಮಾಡಿ ಮಾರ್ಕೆಟಗೆ ಪ್ರವೇಶ ಮಾಡಲು ಕಾಯುತ್ತಿದೆ. ಗೂಗಲ್ ಕಂಪನಿ 2010ರಲ್ಲಿಯೇ ಆಧುನಿಕವಾದ ಸ್ಮಾರ್ಟ್ ಗ್ಲಾಸ್ ಮಾರುಕಟ್ಟೆಗೆ ಬಿಟ್ಟು ಮುಂದೆ ಹಲವು ಕಾರಣಗಳಿಂದ ಅದನ್ನು ಹಿಂಪಡೆದುಕೊಂಡಿದೆ. ಹಿಂಪಡೆಯಲು ಕಾರಣ ದುಬಾರಿ ಬೆಲೆ, ಬಳಕೆದಾರರ ಸುರಕ್ಷತೆಗೆ ತೊಂದರೆ ಮತ್ತು ಗ್ರಾಹಕರ ಖಾಸಗಿತನದ ರಕ್ಷಣೆಯಲ್ಲಿ ಕೊರತೆ ಎಂದು ಕಂಪನಿ ಹೇಳಿಕೊಂಡಿತ್ತು.
ಈಗ 2024ರಲ್ಲಿ ಮತ್ತೆ ಅಪ್ಡೇಟ್ ಆಗಿ ಮಾರುಕಟ್ಟೆಗೆ ಬರುತ್ತೇವೆ ಎಂದು ಗೂಗಲ್ ಕಂಪನಿ ಪ್ರೆಸ್‌ಮೀಟ್ ಮಾಡಿ ಹೇಳಿದೆ.
ಈಗ ಮಾರ್ಕ್ ಝುಕರ್ ಬರ್ಗ್ ಸರದಿ
ಈಗ ಜಗತ್ತಿನ ದೈತ್ಯ ಐಟಿ ಉದ್ಯಮಿ ಮಾರ್ಕ್ ಝುಕರ್ ಬರ್ಗ್ ಸುಮ್ಮನೆ ಇರಲು ಸಾಧ್ಯವೇ? ಅವರು ತಮ್ಮ ಕಂಪನಿಯಾದ META ಬ್ರಾಂಡಿನಲ್ಲಿ ಹೊಸ ಸ್ಮಾರ್ಟ್ ಗ್ಲಾಸ್ ಲಾಂಚ್ ಮಾಡಲು ಹೊರಟಿದ್ದಾರೆ. ಜಗತ್ತಿನ ನಂಬರ್ ಒನ್ ಕೂಲ್ ಗ್ಲಾಸ್ ಕಂಪನಿ ರೇಬಾನ್ ಜೊತೆಗೆ ಅವರು ಒಡಂಬಡಿಕೆ ಮಾಡಿಕೊಂಡಿದ್ದಾರೆ. ನೂರಾರು ಐಟಿ ಇಂಜಿನಿಯರ್‌ಗಳು ಹಗಲು ರಾತ್ರಿ ದುಡಿದು ಈಗ META-REBAN ಬ್ರಾಂಡಿನ ಸ್ಮಾರ್ಟ್ ಗ್ಲಾಸ್ ರೆಡಿ ಮಾಡಿ ಅಮೆರಿಕದಲ್ಲಿ ಮೊದಲು ಮಾರುಕಟ್ಟೆಗೆ ಇಳಿಸಿದ್ದಾರೆ. ಅದರ ಕನಿಷ್ಠ ಬೆಲೆ 25,000 ರೂ.ನಿಂದ ಆರಂಭವಾಗಿ 75,000 ರೂ.ವರೆಗೆ ತಲುಪುತ್ತಿದೆ. ಒಂದೆರಡು ವರ್ಷಗಳ ಒಳಗೆ ಪ್ರಪಂಚದ ಅತಿದೊಡ್ಡ ಕೊಳ್ಳುಬಾಕ ದೇಶವಾದ ಭಾರತಕ್ಕೆ ಅದು ತಲುಪಲಿದೆ. 2026ಕ್ಕಾಗುವಾಗ ಸ್ಮಾರ್ಟ್ ಫೋನ್ ಮನೆಯಲ್ಲಿ ಇಟ್ಟು ಈ ಶೋಕಿ ಮಾಡುವ ಹಾಗೂ ಸ್ಮಾರ್ಟ್ ಫೋನಗಿಂತಲೂ ಅದ್ಭುತವಾಗಿ ಕೆಲಸ ಮಾಡುವ ಈ ಸ್ಮಾರ್ಟ್ ಗ್ಲಾಸ್ ಧರಿಸಿಕೊಂಡು ರಸ್ತೆಗೆ ಇಳಿಯುವ ದಿನಗಳು ಖಂಡಿತ ಬರುತ್ತವೆ.
ಇದು ಹೆಡ್‌ಮೌಂಟ್ ಸ್ಮಾರ್ಟ್ ಫೋನ್
ಈ ಮೆಟಾ ರೇಬಾನ್ ಸ್ಮಾರ್ಟ್ ಗ್ಲಾಸಗಳ ವಿಶೇಷ ಅಂದರೆ ಅದು ಸ್ಮಾರ್ಟ್ ಕಂಪ್ಯೂಟರ್, ಸ್ಮಾರ್ಟ್ ಫೋನ್ ಮತ್ತು ಸ್ಮಾರ್ಟ್ ಟಿವಿ ಈ ಮೂರರ ಕೆಲಸಗಳನ್ನು ಮಾಡುತ್ತದೆ. ಕಣ್ಣಿನ ರೆಪ್ಪೆ ತೆರೆದುಕೊಂಡಂತೆ ಈ ಸ್ಮಾರ್ಟ್ ಗ್ಲಾಸ್ ಆಕ್ಟೀವೇಟ್ ಆಗುತ್ತದೆ. ಅಲ್ಲಿಗೆ ಸ್ಮಾರ್ಟ್ ಜಗತ್ತು ತೆರೆದುಕೊಳ್ಳುತ್ತದೆ. ಅದರಿಂದ ಕಾಲ್ ಮಾಡುವುದು, ಕಾಲ್ ರಿಸೀವ್ ಮಾಡುವುದು, ಮೆಸೇಜ್ ಕಳುಹಿಸುವುದು, ಮೇಲ್ ಮಾಡುವುದು, ಫೋಟೋ ಕ್ಯಾಪ್ಚರ್ ಮಾಡುವುದು, 3ಡಿ ವಿಡಿಯೋ ಮಾಡುವುದು, ಅದನ್ನು ಕಣ್ಣಿನ ನೋಟದಲ್ಲಿಯೇ ಎಡಿಟ್ ಮಾಡುವುದು, ಧ್ವನಿ ಸಹಾಯಕ ವ್ಯವಸ್ಥೆ, ಕ್ಯೂ ಆರ್ ಕೋಡ್ ಸ್ಕ್ಯಾನಿಂಗ್ ಮಾಡುವುದು….ಹೀಗೆ ಸ್ಮಾರ್ಟ್ ಮೊಬೈಲ್ ಮಾಡುವ ಎಲ್ಲ ಕೆಲಸಗಳನ್ನೂ ಅದು ಪೂರ್ತಿ ಮಾಡುತ್ತದೆ. ಕೃತಕ ಬುದ್ಧಿಮತ್ತೆ (AI) ಆಧಾರಿತ ವಿಡಿಯೋ ಎಡಿಟಿಂಗ್, ಕಲರಿಂಗ್, ರೀಲ್ಸ್ ಮಾಡುವುದು, ಯೂಟ್ಯೂಬ್ ಸಂಪರ್ಕ ಮತ್ತು ಸ್ಕ್ರಿಪ್ಟ್ ಮಾಡುವುದು ಹೀಗೆ ಎಲ್ಲವನ್ನೂ ಸ್ಮಾರ್ಟ್ ಫೋನ್ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಮತ್ತು ಹೆಚ್ಚು ಸಕ್ಷಮವಾಗಿ ಈ ಸ್ಮಾರ್ಟ್ ಗ್ಲಾಸ್ ಮಾಡುತ್ತದೆ.
ಈ ಸ್ಮಾರ್ಟ್ ಗ್ಲಾಸ್‌ಗಳು ಈಗ ಆರಂಭಿಕ ಹಂತದಲ್ಲಿ ಇದ್ದು ಅದರ ಹಿಂದೆ ಸಾವಿರಾರು ತಂತ್ರಜ್ಞರು ಜಿದ್ದಿಗೆ ಬಿದ್ದ ಹಾಗೆ ಕೆಲಸ ಮಾಡುವುದನ್ನು ನೋಡಿದಾಗ ಬೆರಗು ಮೂಡುತ್ತದೆ. ಹಾಗೆಯೇ ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಜಗತ್ತನ್ನು ಎಲ್ಲಿಗೆ ತಲುಪಿಸಬಹುದು ಎಂಬ ಆತಂಕ ಮೂಡುತ್ತದೆ.
VISUAL REALITY (VR) ಎಂಬ ಮಾಯಾಜಾಲ
ಇಂದು ಐಟಿ ಜಗತ್ತಿನಲ್ಲಿ ಹೆಚ್ಚು ಬಳಕೆ ಆಗುವ ಪರಿಕಲ್ಪನೆ ಎಂದರೆ ಈ ವಿಶುವಲ್ ರಿಯಾಲಿಟಿ. ಅಂದರೆ ವಾಸ್ತವದ ಭ್ರಮೆ ಹುಟ್ಟಿಸುವ ತಂತ್ರಜ್ಞಾನ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಈ ಸ್ಮಾರ್ಟ್ ಗ್ಲಾಸ್ ಅದೇ ತಂತ್ರಜ್ಞಾನದ ಮುಂದುವರಿದ ಭಾಗ ಆಗಿದೆ. ಐಟಿ ಕಂಪನಿಗಳು ಈ ಕ್ಷೇತ್ರದಲ್ಲಿ ಕೂಡ ಅನಾರೋಗ್ಯಕರ ಸ್ಪರ್ಧೆಗೆ ಇಳಿದಿವೆ.
ಆಪಲ್ ಕಂಪನಿ ವಿಶನ್ ಪ್ರೊ ಎಂಬ ಹೆಸರಿನ VR ಸಾಧನವನ್ನು ಅಭಿವೃದ್ಧಿಪಡಿಸಿದ್ದರೆ, ಮೆಟಾ ಕಂಪನಿಯು ಮೆಟಾ ಕ್ವೆಸ್ಟ್ ಎಂಬ VR ಬ್ರಾಂಡ್ ತಯಾರಿ ಮಾಡಿದೆ. ಮೈಕ್ರೋಸಾಫ್ಟ್ HALO LENSE 2 ಎಂಬ VR ಬ್ರಾಂಡ್ ತಯಾರು ಮಾಡಿದೆ. ಇವುಗಳು ಮನರಂಜನೆ, ಆರೋಗ್ಯ, ಶಿಕ್ಷಣ ಮತ್ತು ಉದ್ಯಮ ರಂಗಗಳಲ್ಲಿ ಮುಂದಿನ ದಿನಗಳಲ್ಲಿ ಕ್ರಾಂತಿಯನ್ನೇ ಮಾಡುತ್ತವೆ ಎನ್ನುತ್ತವೆ ಐಟಿ ಕಂಪನಿಗಳು.
ರಾಜೇಂದ್ರ ಭಟ್ ಕೆ.