ಪುತ್ತೂರು: ಪಿಎಂಶ್ರೀ ಶಾಲೆ ವೀರಮಂಗಲದಲ್ಲಿ ದೇಸಿ ಸೊಗಡಿನಲ್ಲಿ ಕಲಾತ್ಮಕ ಕಾರ್ಯಾಗಾರ ಪರೀಕ್ಷೆ ಮುಗಿದಾಕ್ಷಣ ಮಕ್ಕಳೆಲ್ಲರು ಹಗ್ಗ ಬಿಟ್ಟ ಕರುವಿನಂತೆ ಎಲ್ಲೆಂದರಲ್ಲಿ ಓಡುತ್ತಾ ಚೆಲುವಿನ ನಗೆ ಬೀರುತ್ತಾ , ಕಾಲ ಕಳೆಯುತ್ತಾರೆ. ಮೊಬೈಲ್ ,ಟಿ ವಿ ಎಂದು ಸಮಯ ವ್ಯರ್ಥ ಮಾಡುವ ಮಕ್ಕಳೂ ಇರುತ್ತಾರೆ. ಅವರ ಸುಂದರ ಯೋಚನೆಗಳಿಗೆ ಸೃಜನಶೀಲ ವೇದಿಕೆ ಸಿಕ್ಕಾಗ ಭಾವ ಚಿತ್ರಕ್ಕೆ, ಹಾಡಿಗೆ, ಕುಣಿತಕ್ಕೆ ತಿರುಗಿ, ಮನಸ್ಸು ಹೊಸತನವನ್ನು ಒಪ್ಪಿಕೊಳ್ಳುತ್ತದೆ. ಅದು ಹವ್ಯಾಸಕ್ಕೆ ವೇದಿಕೆಯಾಗುತ್ತದೆ. ಕೆಟ್ಟ ಯೋಚನೆಗಳಿಗೆ ಬ್ರೇಕ್ ಹಾಕುತ್ತದೆ. ಇಂತಹ ಸೃಜನಶೀಲ ಕಲಿಕೆಗೆ ವೇದಿಕೆಯಾಗಿ ಮನಸ್ಸನ್ನು ಅರಳಿಸುವ ಕಾರ್ಯ ನಡೆಯುತ್ತಿರುವುದು ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲದಲ್ಲಿ.

ಸ್ಪೋಕನ್ ಇಂಗ್ಲಿಷ್ ಸಂಭಾಷಣೆ, ನಾಟಕಾಭಿನಯದೊಂದಿಗೆ ಆರಂಭವಾದ ಮಕ್ಕಳ ಕಲಿಕಾ ಸಮಯ ಎರಡನೆ ದಿನ ಚಿತ್ರ, ಚಿತ್ತಾರಕ್ಕೆ ಮೀಸಲಾಯಿತು. ಚಿತ್ರಕ್ಕೆ ಬಣ್ಣ ತುಂಬಿಸುವುದು ವಾಟರ್ ಕಲರ್ ಬಳಸಿ ಚಿತ್ರ ಮಾಡುವುದು, ಎಲೆ ಕೊಲಾಜ್, ಪೇಪರ್ ಕೊಲಾಜ್, ಪೇಪರ್ ಕ್ರಾಪ್ಟ್ ಇತ್ಯಾದಿ ಚಟುವಟಿಕೆಗಳು ಎಲ್ಲಾ ಮನಸ್ಸುಗಳನ್ನು ತೊಡಗುವಂತೆ ಮಾಡಿತು. ಜನಪದ ಕುಣಿತಗಳ ಕಾರ್ಯಾಗಾರದಲ್ಲಿ ದೇಸಿಯ ಸಂಸ್ಕೃತಿಗಳ ಅನಾವರಣ, ಮೂಲ ಜನಪದ ಹಾಡುಗಳು, ಕಂಸಾಳೆ, ವೀರಗಾಸೆ, ನಂದಿಕೋಲು, ಪಟದ ಕುಣಿತ, ಮಾರಮ್ಮನ ಕುಣಿತ, ಹಾಲಕ್ಕಿ, ಗೊರವರ ಕುಣಿತ, ಕೋಲಾಟ, ತುಳು ಜನಪದ ಕುಣಿತಗಳಾದ, ಕಂಗೀಲು, ಕರಂಗೋಲು, ಚೆನ್ನು, ಮಾಂಕಾಳಿ, ಸಿದ್ಧವೇಷ, ಹುಲಿಕುಣಿತ, ದುಡಿ ಕುಣಿತ, ಕನ್ಯಾಪು ಕುಣಿತ ಇತ್ಯಾದಿ ದೇಸಿ ಕುಣಿತಗಳು ಆಧುನಿಕ ಬದುಕಿನ ಸಂಕೀರ್ಣತೆಗೆ ಮೂರ್ತ ಭಾವ ತೋರಿಸಿತು.

ಈ ಕಲಿಕಾ ಕಾರ್ಯಾಗಾರವು ಶಾಲಾ ಮುಖ್ಯ ಶಿಕ್ಷಕ ತಾರಾನಾಥ ಸವಣೂರು ನಿರ್ದೇಶನದಲ್ಲಿ ಶಿಕ್ಷಕರಾದ ಹರಿಣಾಕ್ಷಿ, ಶೋಭಾ, ಶ್ರೀಲತಾ, ಕವಿತಾ, ಹೇಮಾವತಿ, ಶಿಲ್ಪರಾಣಿ, ಸೌಮ್ಯ ಅವರ ಸಹಕಾರದೊಂದಿಗೆ, ಚಿತ್ರ ಕಲಾವಿದ ಗಿರೀಶ್ ವೀರಮಂಗಲ ಜನಪದ ಕಲಾವಿದ ದೇವಿಪ್ರಸಾದ್ ಸುಳ್ಯ ಭಾಗವಹಿಸಿದರು. ಶಾಲಾ ಮಕ್ಕಳ ಸಂಭ್ರಮ ಕಲಿಕೆಯೊಂದಿಗೆ ಸೃಜನಶೀಲ ಮನಸ್ಸನ್ನು ಅರಳಿಸಲು ವೇದಿಕೆ ಸಿಕ್ಕಿರುವುದು ಶಾಲೆಯ ಉತ್ತುಂಗತೆಗೆ ಕನ್ನಡಿಯಾಯಿತು.
