ಅ.5-6 : ಪುತ್ತೂರುದ ಪಿಲಿಗೊಬ್ಬು,  ಫುಡ್ ಪೆಸ್ಟ್ – ಸೀಸನ್ -2 | ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಆಯ್ದ 9 ಹುಲಿವೇಷ ತಂಡಗಳು ಭಾಗಿ | ಸ್ಯಾಂಡಲ್ ವುಡ್ ನಟ-ನಟಿಯರ ಮೆರುಗು

ಪುತ್ತೂರು: ‘ ಹುಲಿವೇಷ ಕುಣಿತ’ ತುಳು ನಾಡಿನ ಛಾಪಿನ ಹಿನ್ನೆಲೆ ಇರುವ ಜನಪದ ಕಲೆ. ಈ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪಿಲಿಗೊಬ್ಬು ಹಾಗೂ ಪುತ್ತೂರು ಫುಡ್ ಫೆಸ್ಟ್ ಅ.5 ಶನಿವಾರ ಹಾಗೂ ಅ.6 ಭಾನುವಾರದಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಆಯೋಜಿಸಲಾಗಿದೆ ಎಂದು ಪುತ್ತೂರು ವಿಜಯ ಸಾಮ್ರಾಟ್ ನ, ಪಿಲಿಗೊಬ್ಬು ಸಾರಥಿ ಸಹಜ್ ರೈ ಬಳಜ್ಜ ಹೇಳಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪಿಲಿ ಗೊಬ್ಬು ಕಾರ್ಯಕ್ರಮದ ಉದ್ಘಾಟನೆ ಅ.6 ಭಾನುವಾರ ಬೆಳಿಗ್ಗೆ 10:30ಕ್ಕೆ ಗಂಟೆಗೆ ನಡೆಯಲಿದ್ದು, ಪಿಲಿಗೊಬ್ಬು ವೇದಿಕೆಯನ್ನು ಮೂಡುಬಿದಿರೆಯ ಆಳ್ವಾಸ್ ವಿದ್ಯಾ ಸಂಸ್ಥೆಯ ಮೋಹನ್ ಆಳ್ವ ನೆರವೇರಿಸಲಿದ್ದಾರೆ. ಪಿಲಿಗೊಬ್ಬು ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಅಶೋಕ್ ಕುಮಾರ್ ರೈ ಮಾಡಲಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ, ಹಿರಿಯ ವೃದ್ಯ ಡಾ.ಪ್ರಸಾದ್ ಭಂಡಾರಿ, ಡಿವೈಎಸ್‍ ಪಿ ಅರುಣ್‍ ನಾಗೇಗೌಡ, ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ದ.ಕ.ಜಿಲ್ಲೆಯ ಪ್ರಖ್ಯಾತ 9 ಹುಲಿವೇಷ ತಂಡ ಭಾಗಿ :































 
 

ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಆಯ್ದ 9 ಹುಲಿವೇಷ ತಂಡಗಳನ್ನು ಆಹ್ವಾನಿಸಿ ಅವರೊಳಗೆ ಉತ್ತಮ ನಿರ್ವಹಣೆ ಮಾಡಿದ ತಂಡಕ್ಕೆ ಪ್ರಥಮ ಬಹುಮಾನ ರೂ 3 ಲಕ್ಷ ದ್ವಿತೀಯ ಬಹುಮಾನ 2 ಲಕ್ಷ, ಹಾಗೂ ತೃತೀಯ ಬಹುಮಾನ 1 ಲಕ್ಷ ಹಾಗೂ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಗುವುದು ಮಾತ್ರವಲ್ಲದೆ ಭಾಗಿಯಾದ ತಂಡಗಳಿಗೆ ತಲಾ 50,000 ಗೌರವ ಸಂಭಾವನೆಯನ್ನು ನೀಡಿ ಗೌರವಿಸಲಾಗುವುದು. ಸಮಗ್ರ ತಂಡ ಪ್ರಶಸ್ತಿ, ಸಮಗ್ರ ಶಿಸ್ತಿನ ತಂಡ ಗುಂಪು ಪ್ರಶಸ್ತಿ ವಿಭಾಗ ದಲ್ಲಿ ಉತ್ತಮ ಪ್ರವೇಶ ಹಾಗೂ ನಿರ್ಗಮನ, ಉತ್ತಮ ತಾಸ, ಉತ್ತಮ ಬಣ್ಣ ಉತ್ತಮ ಧರಣಿ ಮಂಡಲ ಕುಣಿತ ವೈಯುಕ್ತಿಕ ಪ್ರಶಸ್ತಿ ವಿಭಾಗದಲ್ಲಿ ಕಪ್ಪು ಹುಲಿ, ಮರಿ ಹುಲಿ ವುತ್ತೂರುದ ಹುಲಿ, ಮುಡಿ ಹಾರಿಸುವುದು, ನಾಣ್ಯ ತೆಗೆಯುವುದಕ್ಕೆ ವಿಶೇಷ 10,000 ನಗದು ಬಹುಮಾನದ 10 ಪ್ರತ್ಯೇಕ ವೈಯುಕ್ತಿಕ ಬಹುಮಾನವಿದೆ. ಪ್ರತಿ ತಂಡದಲ್ಲಿ 15 ಹುಲಿವೇಷ ಹಾಗೂ ಪ್ರತಿ ತಂಡಕ್ಕೆ ಹುಲಿ ವೇಷ ಕುಣಿತದ ಕಲಾ ಪ್ರದರ್ಶನ ನೀಡಲು 22 ನಿಮಿಷದ ಕಾಲಾವಕಾಶವಿರುತ್ತದೆ. ಈ ಕ್ಷೇತ್ರದಲ್ಲಿ ಉತ್ತಮ ಪರಿಣತಿ ಹೊಂದಿದ ಜಿಲ್ಲೆಯ ಖ್ಯಾತ ತೀರ್ಪುಗಾರರು ಭಾಗವಹಿಸಲಿದ್ದಾರೆ ಎಂದರು.

ಸ್ಯಾಂಡಲ್ ವುಡ್ ನಟ ನಟಿಯರು ಭಾಗಿ:

ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನಾಯಕ ನಟ ಶ್ರೀಮುರಳಿ, ಶಿವಧ್ವಜ್, ರೂಪೇಶ್ ಶೆಟ್ಟಿ, ಅರವಿಂದ್ ಕೆ.ಪಿ., ಮಿಸ್ ಕರ್ನಾಟಕ ಕು.ವಿಜೇತ ಪೂಜಾರಿ, ಸರಿಗಮಪ ಖ್ಯಾತಿಯ ಗಾಯಕಿ ಸಮನ್ನಿ ರೈ ಮುಂತಾದವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪುತ್ತೂರು ಹಾಗೂ ಸುತ್ತಲಿನ ಹತ್ತುರಿನಿಂದ ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯಿದೆ ಎಂದು ಹೇಳಿದರು.

ಪುತ್ತೂರು ಫುಡ್ ಫೆಸ್ಟ್:

ಅ.5 ಶನಿವಾರ ಸಂಜೆ ಗಂಟೆ 4:00 ಫುಡ್ ಫೆಸ್ಟ್ ಕಾರ್ಯಕ್ರಮವನ್ನು ಯು.ಆರ್‍.ಪ್ರಾಪರ್ಟಿಯ ಉಜ್ವಲ್ ಪ್ರಭು ಉದ್ಘಾಟಿಸಲಿದ್ದು, ಪಾಪ್ಯುಲರ್ ನ್ಯೂಟ್ರಿಷಿಯಸ್ ನ ನರೇಂದ್ರ ಕಾಮತ್ ಪಾಲ್ಗೊಳ್ಳುವರು.

ಪುತ್ತೂರು ಪುಡ್ ಫೆಸ್ಟ್ ವಿಶೇಷತೆಗಳು:

ಪಗೋಡ ಮಾದರಿಯ ಸುಂದರ ಸುಸಜ್ಜಿತ ಆಹಾರ ಮಳಿಗೆಯಲ್ಲಿ ಬರ್ಗರ್, ಸ್ಯಾಂಡ್ ವಿಚ್, ಕೇರಳ ಹುಟ್ಟು ಲೈವ್ ಮಸಾಲೆ ದೋಸೆ, ಲೈವ್ ಹಲಸಿನ ಹೋಳಿಗೆ, ಲೈನ್ ರುಮಾಲಿ ರೊಟ್ಟಿ, ಕರಾವಳಿಯ ರುಚಿಕರ ಖಾದ್ಯಗಳ ಸಹಿತ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಐವತ್ತು ವಿವಿಧ ಖಾದ್ಯಗಳ ಮಳಿಗೆಗಳು ವಿಜೃಂಭಿಸಲಿದೆ.

ಸ್ವಚ್ಛತೆಗೆ ಆದ್ಯತೆ :

ಯಾವುದೇ ಸಂದರ್ಭದಲ್ಲಿ ಕಸ ಕಡ್ಡಿಗಳು ಮಾರ್ಗದಲ್ಲಿ ಅಥವಾ ಆಹಾರ ಮಳಿಗೆಗಳ ಸುತ್ತಮುತ್ತ ಕಸದ ಬುಟ್ಟಿಯಲ್ಲಿ ತುಂಬಿ ತುಳುಕದಂತೆ ಮುಂಜಾಗ್ರತೆಯನ್ನು ವಹಿಸಲಾಗುವುದು. ಒಟ್ಟಾರೆ ಆಹಾರ ಮಳಿಗೆಗಳ ಮಾಲಕರಿಗೆ ಸ್ವಚ್ಛತೆಗೆ ಆದ್ಯತೆಯ ಜೊತೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರಥಮ ಬಹುಮಾನ 5,000, ದ್ವಿತೀಯ ಬಹುಮಾನ 3000, ತೃತೀಯ ಬಹುಮಾನ 2000 ಜೊತೆಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು ಎಂದರು.

ಶೌಚಾಲಯದ ವ್ಯವಸ್ಥೆ ಮಾಡಲಾಗಿದ್ದು, ಪುರುಷರು, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ.

ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರು ತಮ್ಮ ತಮ್ಮ ವಾಹನಗಳನ್ನು ಕಿಲ್ಲೆ ಮೈದಾನ, ಮಹಾಲಿಂಗೇಶ್ವರ ದೇವಸ್ಥಾನದ ರಥ ನಿಲ್ಲಿಸುವ ಜಾಗದ ಮುಂಭಾಗ, ನಾಗನಕಟ್ಟೆ ಹಾಗೂ ಅಯ್ಯಪ್ಪ ಗುಡಿಯ ಮುಂಭಾಗ, ಖಾಸಗಿ ಬಸ್ ನಿಲ್ದಾಣದ ಮುಂಭಾಗದ ಕಂಬಳ ಕೆರೆಯ ಎಡಭಾಗ ಹಾಗೂ ಮೂಲ ನಾಗ ಸನ್ನಿಧಿಯ ಮುಂಭಾಗದಲ್ಲಿ, ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಾರ್ವಜನಿಕರು ವಾಹನದಟ್ಟಣೆಯನ್ನು ನಿಯಂತ್ರಿಸುವಲ್ಲಿ ಕೈಜೋಡಿಸಬೇಕೆಂದು ಆಯೋಜಕರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪಿಲಿಗೊಬ್ಬು ಸಮಿತಿ ಅಧ್ಯಕ್ಷ, ಫುಡ್ ಫೆಸ್ಟ್ ರೂಪಾರಿ ಪುತ್ತೂರು ಉಮೇಶ್‍ ನಾಯಕ್, ಸಂಚಾಲಕ ನಾಗರಾಜ ಭಟ್, ಕಾರ್ಯಾಧ್ಯಕ್ಷ ಸುಜಿತ್ ರೈ ಪಾಲ್ತಾಡ್ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top