ಬೆಂಗಳೂರು: ಸಾವರ್ಕರ್ ಗೋಹತ್ಯೆಯ ವಿರೋಧಿಯಲ್ಲ. ಅವರು ಚಿತ್ಪಾವನ ಬ್ರಾಹ್ಮಣರಾಗಿದ್ದರಾದರೂ ಮಾಂಸಾಹಾರಿಯಾಗಿದ್ದರು ಮತ್ತು ಮಾಂಸಹಾರ ಸೇವಿಸುತ್ತಿದ್ದರು ಎಂದು ಸಚಿವ ದಿನೇಶ್ ಗುಂಡೂರಾವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಜಾಗೃತ ಕರ್ನಾಟಕ ಮತ್ತು ಅಹರ್ನಿಶಿ ಪ್ರಕಾಶನ ಆಯೋಜಿಸಿದ್ದ ‘ಗಾಂಧೀಜಿಯ ಹಂತಕ’ ಪುಸ್ತಕ ಬಿಡುಗಡೆ, ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಬ್ರಾಹ್ಮಣ ಸಮುದಾಯದ ಸಾವರ್ಕರ್ ಮಾಂಸ ಸೇವಿಸುತ್ತಿದ್ದರು. ಮಾಂಸಹಾರ ಸೇವನೆಯನ್ನು ಅವರು ಬಹಿರಂಗವಾಗಿ ಸಮರ್ಥಿಸುತ್ತಿದ್ದರು. ಹಾಗೆ ನೋಡಿದರೆ ಸಾವರ್ಕರ್ ಒಂದು ರೀತಿಯಲ್ಲಿ ಮಾಡರ್ನಿಸ್ಟ್ ಆಗಿಯೂ ಕಾಣುತ್ತಾರೆ. ಆದರೆ ಮೂಲಭೂತವಾದಿಯಾಗಿದ್ದರು ಎಂಬುದರಲ್ಲಿ ಸಂಶಯವಿಲ್ಲ. ಮೂಲಭೂತವಾದ ನಮ್ಮ ಭಾರತ ದೇಶದ ಸಂಸ್ಕೃತಿಯಲ್ಲ. ಇದು ಯುರೋಪ್ನಿಂದ ಬಂದಿರುವಂತದ್ದು. ಸಾವರ್ಕರ್ ಯೂರೋಪ್ನಿಂದ ಸಾಕಷ್ಟು ಪ್ರಭಾವ ಹೊಂದಿದ್ದರು. ಆದರೆ ಗಾಂಧೀಜಿಯವರು ಸಸ್ಯಹಾರಿ. ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಮೇಲೆ ಗಾಂಧೀಜಿಯವರಿಗೆ ಅಪಾರವಾದ ನಂಬಿಕೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದೇಶದಲ್ಲಿ ಗಾಂಧೀವಾದ ಗೆಲ್ಲಬೇಕೇ ಹೊರತು ಸಾವರ್ಕರ್ ಅವರ ವಾದ ಅಲ್ಲ. ಗೋಡ್ಸೆಗೆ ಉತ್ತರ ಗಾಂಧೀಜಿಯವರೇ. ಗಾಂಧೀಜಿಯವರ ಹತ್ಯೆ ಮಾಡಿದ ಗೋಡ್ಸೆ, ಸಾವರ್ಕರ್ ವಾದದಿಂದ ಪ್ರಭಾವಿತರಾಗಿದ್ದರು. ದೇಶದಲ್ಲಿ ಇಂದು ಗಾಂಧೀವಾದದ ಎದುರು ಸಾವರ್ಕರ್ ಅವರ ವಾದ ಗೆಲ್ಲುತ್ತಿದೆಯೇ ಎಂಬ ಅನುಮಾನ ನಮ್ಮನ್ನು ಕಾಡುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಸಾವರ್ಕರ್ ಅವರಲ್ಲಿ ವೈಚಾರಿಕ ಚಿಂತನೆಗಳು, ರಾಷ್ಟ್ರೀಯವಾದ ಕಾಣಲು ಸಾಧ್ಯವಾದರೂ, ಪ್ರಜಾಪ್ರಭುತ್ವದ ಪರವಾದ ವ್ಯಕ್ತಿತ್ವ ಇರಲಿಲ್ಲ. ಆದರೆ ಗಾಂಧೀಜಿ ಅವರದ್ದು ಡೆಮಾಕ್ರೆಟಿಕ್ ವ್ಯಕ್ತಿತ್ವ ಎಂದು ದಿನೇಶ್ ಗುಂಡೂರಾವ್ ಬಣ್ಣಿಸಿದರು.
ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂಬುದು ಅವರ ಅಭಿಮಾನಿಗಳ ವಾದ. ಬ್ರಿಟಿಷರು ಅವರನ್ನು ಜೈಲಿಗೂ ಹಾಕಿದ್ದರು. ಈ ವಿಚಾರವನ್ನು ಮುಂದಿಟ್ಟುಕೊಂಡು ಅವರನ್ನು ಎದುರಿಸುವುದು ಕಷ್ಟ ಎಂದು ದಿನೇಶ್ ಗುಂಡೂರಾವ್ ಹೇಳಿದರು.