ದೇಶದ ಜನಸಂಖ್ಯೆಯ ಸ್ವರೂಪ ಬದಲಾಯಿಸುವ ಷಡ್ಯಂತ್ರ ಎಂದ ನ್ಯಾಯಾಧೀಶರು
ಲಖನೌ: ಭಾರತದಲ್ಲಿ ಲವ್ ಜಿಹಾದ್ ನಡೆಯುತ್ತಿದೆ ಮತ್ತು ಇದಕ್ಕೆ ವಿದೇಶಗಳಿಂದ ಹಣಕಾಸಿನ ನೆರವು ಸಿಗುತ್ತಿದೆ ಎಂದು ನ್ಯಾಯಾಲಯವೇ ಹೇಳಿದೆ. ಉತ್ತರ ಪ್ರದೇಶದ ಬರೇಲಿಯ ನ್ಯಾಯಾಲಯ ಬಲವಂತದ ಮದುವೆ ಮತ್ತು ಮತಾಂತರದ ಪ್ರಕರಣವೊಂದರ ತೀರ್ಪು ನೀಡುವಾಗ ಭಾರತದಲ್ಲಿ ಲವ್ ಜಿಹಾದ್ ನಡೆಯುತ್ತಿರುವುದು ನಿಜ ಮತ್ತು ದೇಶದ ಜನಸಂಖ್ಯೆಯ ಸ್ವರೂಪವನ್ನು ಬದಲಾಯಿಸುವ ಉದ್ದೇಶ ಇದರ ಹಿಂದೆ ಇರುವುದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿಬೇಕೆಂದು ಹೇಳಿ ಪ್ರಕರಣದ ಆರೋಪಿಗೆ ಆಜೀವ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದೆ.
ಕೆಲವು ಸಂಘಟನೆಗಳು ಹಿಂದು ಮಹಿಳೆಯರನ್ನು ವಿವಿಧ ಆಮಿಷಗಳನ್ನೊಡ್ಡಿ ಪ್ರೀತಿಯ ಬಲೆಗೆ ಬೀಳಿಸಿ ಮತಾಂತರಗೊಳಿಸುವಲ್ಲಿ ನಿರತವಾಗಿವೆ. ಇದು ದೇಶದ ಏಕತೆ ಮತ್ತು ಭದ್ರತೆಗೆ ಅಪಾಯವುಂಟು ಮಾಡುತ್ತಿದೆ. ಮಾನಸಿಕ ಬೆದರಿಕೆ ಮತ್ತು ಆಮಿಷಗಳನ್ನೊಡ್ಡಿ ಪ್ರೀತಿಯ ಹೆಸರಲ್ಲಿ ನಡೆಯುತ್ತಿರುವ ಮತಾಂತರಕ್ಕೆ ವಿದೇಶದಿಂದ ಹಣಕಾಸಿನ ನೆರವು ಹರಿದು ಬರುತ್ತಿದೆ. ಭಾರತದ ಜನಸಂಖ್ಯೆಯ ಸ್ವರೂಪವನ್ನು ಬದಲಾಯಿಸುವ ಉದ್ದೇಶ ಇದರ ಹಿಂದೆ ಇದೆ ಎಂದು ಬರೇಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ರವಿಕುಮಾರ್ ದಿವಾಕರ್ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಲವ್ ಜಿಹಾದ್ ಮೂಲಕ ಪಾಕಿಸ್ಥಾನ ಮತ್ತು ಬಾಂಗ್ಲಾದೇಶದಂಥ ಪರಿಸ್ಥಿತಿಯನ್ನು ಭಾರತದಲ್ಲಿ ಸೃಷ್ಟಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಹೇಳಿದ್ದಾರೆ.
ಮೊಹಮ್ಮದ್ ಅಲೀಂ (25) ಎಂಬ ಆರೋಪಿ ತನ್ನನ್ನು ಆನಂದ್ ಎಂದು ಪರಿಚಯಿಸಿಕೊಂಡು 20ರ ಹರೆಯದ ಹಿಂದು ಯುವತಿಯನ್ನು ಬಲೆಗೆ ಬೀಳಿಸಿಕೊಂಡು ನಕಲಿ ಸಮಾರಂಭವೊಂದರಲ್ಲಿ ಮದುವೆಯಾಗಿದ್ದ. ಯುವತಿ ಗರ್ಭಿಣಿಯಾದಾಗ ಗರ್ಭಪಾತ ಮಾಡಿಸಲು ಬಲವಂತಪಡಿಸಿದ್ದ. ಪ್ರಾಣಭಯದಿಂದ ಯುವತಿ ಪೊಲೀಸರಿಗೆ ದೂರು ನೀಡಿದಾಗ ಆರೋಪಿಯ ಅಸಲಿ ಗುರುತು ಬಯಲಾಗಿತ್ತು. ಮುಖ್ಯ ಆರೋಪಿ ಮೊಹಮ್ಮದ್ ಅಲೀಂಗೆ ಆಜೀವ ಕಾರಾಗೃಹ ವಾಸ ಮತ್ತು ಮಗನಿಗೆ ಸಹಕರಿಸಿದ ಅವನ ತಂದೆ ಸಬೀರ್‌ಗೆ (65) ಎರಡು ವರ್ಷದ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.