ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಚಾಲನೆ

ಸಾಹಿತಿ ಹಂಪನಾ ಅವರಿಂದ ಉತ್ಸವಗಳ ವಿಧ್ಯುಕ್ತ ಉದ್ಘಾಟನೆ, ಪುಷ್ಪಾರ್ಚನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಇಂದು ಬೆಳಗ್ಗೆ ಶುಭ ಮುಹೂರ್ತದಲ್ಲಿ ಸಾಹಿತಿ ನಾಡೋಜ ಹಂಪ ನಾಗರಾಜಯ್ಯ ಉದ್ಘಾಟಿಸಿದರು. ನಾಡದೇವತೆ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಬೆಳಗ್ಗೆ 9.29ಕ್ಕೆ ಶುಭ ಲಗ್ನದಲ್ಲಿ ತಾಯಿ ಚಾಮುಂಡೇಶ್ವರಿಗೆ ಪುಷ್ಪರ್ಚಾನೆ ಮಾಡುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ದಸರಾ ಮತ ಧರ್ಮಗಳ ತಾರತಮ್ಯ ಇಲ್ಲದ ಸರ್ವ ಜನಾಂಗದ ಹಬ್ಬ. ಆಸ್ತಿಕತೆ ನಾಸ್ತಿಕತೆ ಎಂಬುದು ದಸರಾದಲ್ಲಿ ಅಪ್ರಸ್ತುತವಾಗಿದೆ. ಇದು ಅರಮನೆ ಹಬ್ಬವಲ್ಲ. ಜನರ ಆರಿಸಿದ ಸರ್ಕಾರ ನಡೆಸುವ ಜನರ ಹಬ್ಬ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಷ್ಟೆ ಅಡ್ಡಿ ಆತಂಕ ಎದುರಾಗುತ್ತಿದ್ದರೂ ಎದೆಗುಂದದೆ ಸಡ್ಡು ಹೊಡೆದು ಗಟ್ಟಿಯಾಗಿ ನಿಂತಿದ್ದಾರೆ. ಜೀವನವೇ ದೊಡ್ಡ ಅಖಾಡ. ಅದರಲ್ಲಿ ಧೃತಿಗೆಡದೆ ತೊಡೆತಟ್ಟಿ ನಿಲ್ಲಲೇಬೇಕು. ಸಜ್ಜನಿಕೆ ಸೌಮ್ಯತೆ ದೌರ್ಬಲ್ಯವಲ್ಲ. ಪ್ರತಿಕೂಲ ಪ್ರವಾಹವನ್ನು ಎದುರಿಸುವ ಧೀಶಕ್ತಿ ಪ್ರತಿಯೊಬ್ಬರಲ್ಲೂ ಇರಬೇಕು ಎಂದು ಚಾಮುಂಡಿ ತಾಯಿಗೆ ಪಾರ್ಥನೆ ಸಲ್ಲಿಸಿದರು.

ಇಸ್ರೇಲ್-ಪ್ಯಾಲೆಸ್ಟೈನ್, ರಷ್ಯಾ–ಉಕ್ರೈನ್ ಯುದ್ಧ ನಿಲ್ಲಲಿ. ಹೆಣ್ಣು ಭ್ರೂಣ ಹತ್ಯೆ ನಿಲ್ಲಲಿ. ಶಾಸನ ಸಭೆಯಲ್ಲಿ ಸ್ತೀಯರಿಗೆ ಸೂಕ್ತ ಪ್ರಾತಿನಿಧ್ಯ ಸಿಗಲಿ. ಸರ್ಕಾರ ಉರುಳಿಸುವ ದುರಾಲೋಚನೆ ಬರದಂತೆ ತಡೆದು ಚುನಾಯಿತ ಸರ್ಕಾರಗಳು ಉಳಿಯುವ ಚಿಂತನೆ ಮೂಡಲಿ ಎಂದು ಸಿಎಂಗೆ ಧೈರ್ಯ ತುಂಬಿದರು. ಕೆಡವುದು ಸುಲಭ, ಕಟ್ಟುವುದು ಕಷ್ಟ. ಮತ್ತೆ ಮತ್ತೆ ಚುನಾವಣೆ ಬರುವುದು ಬೇಡ. ಯಾವ ಪಕ್ಷವೂ ಶಾಶ್ವತವಾಗಿ ಅಧಿಕಾರದಲ್ಲಿ ಇರುವುದು ಅಸಾಧ್ಯ. ಸೋತ ಪಕ್ಷವೂ ಮತ್ತೆ ಅಧಿಕಾರಕ್ಕೆ ಬರಲು ಐದು ವರ್ಷಗಳಲ್ಲಿ ಸಜ್ಜಾಗಬಹುದು. ದೋಷಾರೋಪಣೆ, ಅವಾಚ್ಯ ಶಬ್ಧ ಬಳಕೆಯೇ ಯುವಕರಿಗೆ ಮಾದರಿ ಆದರೆ ಏನು ಗತಿ ಎಂದು ಪ್ರಶ್ನಿಸಿದರು.
ಡಾ.ಹಂಪ ನಾಗರಾಜಯ್ಯ, ಡಿ.ಕೆ.ಶಿವಕುಮಾರ್ ಸೇರಿ ಎಲ್ಲ ಗಣ್ಯರು ಒಂದೇ ಬಸ್‌ನಲ್ಲಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದರು. ಉದ್ಘಾಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಡಿಸಿಎಂ ಹಾಗೂ ಹಲವರು ಶಾಸಕರು ಭಾಗಿಯಾಗಿದ್ದರು. ದಸರಾ ಚಾಲನೆ ನೀಡುವ ಜೊತೆಗೆ ಫಲಪುಷ್ಪ ಪ್ರದರ್ಶನ, ಚಲನಚಿತ್ರೋತ್ಸವ, ರೈತ ದಸರಾ, ಕುಸ್ತಿ ದಸರಾ, ಯೋಗ ದಸರಾ, ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮೈಸೂರು ಅರಮನೆ, ಪ್ರಮುಖ ವೃತ್ತಗಳ ವಿದ್ಯುತ್ ದೀಪಾಲಂಕಾರಕ್ಕೂ ಚಾಲನೆ ನೀಡಿದರು.
ನಂದಿಧ್ವಜಕ್ಕೆ ಸಿಎಂ ಸಿದ್ದರಾಮಯ್ಯ ಪೂಜೆ ಮಾಡಿ, ಸೇರಿದ ಗಣ್ಯರ ಜೊತೆ ಪುಷ್ಪಾರ್ಚನೆ ಮಾಡಿದರು. ಬಳಿಕ ಚಾಮುಂಡೇಶ್ವರಿ ದೇವಾಲಯದ ಬಳಿ ಆಗಮಿಸಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಗಂಗಾರತಿ ಮಾದರಿಯಲ್ಲಿ ಇಂದು ಸಂಜೆ ಶ್ರೀರಂಗಪಟ್ಟಣದಲ್ಲಿ 5 ದಿನಗಳ ಕಾಲ ಕಾವೇರಿ ಆರತಿ ನಡೆಯಲಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top