ಗನ್‌ಮ್ಯಾನ್ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ
ಬೆಂಗಳೂರು : ಕಿತ್ತೂರು ಉತ್ಸವದ ಉದ್ಘಾಟಿಸುವ ವೇಳೆ ಜ್ಯೋತಿ ಬೆಳಗುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಟ್ಟೆಗೆ ಬೆಂಕಿ ತಾಗಿ ತುಸು ಹೊತ್ತು ಆತಂಕದ ಪರಿಸ್ಥಿತಿ ಉಂಟಾದ ಘಟನೆ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಸಂಭವಿಸಿದೆ. ಬಟ್ಟೆಗೆ ಬೆಂಕಿ ಹತ್ತಿಕೊಂಡಿರುವುದನ್ನು ಕಂಡ ಗನ್‌ಮ್ಯಾನ್ ಕೂಡಲೇ ನಂದಿಸಿದ್ದಾರೆ. ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದೆ.
ವಿಧಾನಸೌಧದ ಮುಂಭಾಗ ಕಿತ್ತೂರು ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿದ್ದರಾಮಯ್ಯ ಕಿತ್ತೂರು ಉತ್ಸವಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಬಳಿಕ, ಕಿತ್ತೂರು ಉತ್ಸವದ ರಥಕ್ಕೆ ಹಸಿರು ನಿಶಾನೆ ತೋರಿಸಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಜಾಗ ಬಿಡುವಾಗ ಪಕ್ಕದಲ್ಲೇ ಇದ್ದ ದೀಪದ ಬೆಂಕಿ ಸಿದ್ದರಾಮಯ್ಯ ಅವರ ಶಲ್ಯಕ್ಕೆ ತಾಗಿದೆ. ಕೂಡಲೆ ಗನ್‌ಮ್ಯಾನ್ ಬೆಂಕಿ ನಂದಿಸಿದ್ದಾರೆ. ಸಿದ್ದರಾಮಯ್ಯ ಎಡಕೈಗೆ ಬೆಂಕಿಯ ಕಿಡಿ ತಾಗಿದೆ. ಈ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಎಚ್.ಕೆ. ಪಾಟೀಲ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಸೇರಿ ಹಲವರು ಉಪಸ್ಥಿತರಿದ್ದರು.