ಪುತ್ತೂರು: ತರಗತಿಯ ಒಳಗಡೆ ಆಗುವ ಪಾಠ ಮಾತ್ರ ಶಿಕ್ಷಣವಲ್ಲ. ತಮ್ಮನ್ನು ತಾವು ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳುವುದು ಕೂಡಾ ಒಂದು ಶಿಕ್ಷಣವೇ. ನಮ್ಮ ದೇಶದ ಶ್ರೀಮಂತಿಕೆ ಆರ್ಥಿಕ ಸ್ಥಿತಿಯಲ್ಲಿಲ್ಲ. ಬದಲಾಗಿ ಸರ್ವ ಕಲೆಗಳಲ್ಲಿ ಅಡಗಿದೆ. ಕಲಾವಿದರಾಗದೆ ಇದ್ದ ಪಕ್ಷದಲ್ಲಿ ಸೌಂದರ್ಯ ಪ್ರಜ್ಞೆಯುಳ್ಳ ಪ್ರೇಕ್ಷಕರಾದರೆ ಅದುವೇ ಸಾಂಸ್ಕೃತಿಕ ಲೋಕಕ್ಕೆ ನೀಡುವ ಬಹುದೊಡ್ಡ ಕೊಡುಗೆ ಎಂದು ರಾಷ್ಟ್ರೀಯ ರಂಗಪ್ರಶಸ್ತಿ ಪುರಸ್ಕೃತ ರಂಗಕರ್ಮಿ, ಸುಳ್ಯ ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರದ ಅಧ್ಯಕ್ಷ ಡಾ. ಜೀವನ್ ರಾಮ್ ಸುಳ್ಯ ಹೇಳಿದರು.
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ (ಸ್ವಾಯತ್ತ) ಲಲಿತ ಕಲಾ ಸಂಘ, ವಿದ್ಯಾರ್ಥಿ ಸಂಘ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ನಡೆದ ಲಲಿತಕಲಾ ಸಂಘದ 2024-25ನೇ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಉದ್ಘಾಟನೆ ಹಾಗೂ ಅಂತರ್ ತರಗತಿ ಸಾಂಸ್ಕೃತಿಕ ಸ್ಪರ್ಧೆಗಳ ಶುಭಾರಂಭ ಪ್ರತಿಭೋತ್ಸವ -2024-25 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಂಸ್ಕೃತಿಕ ಕಲೆಗಳಿಗೆ ಜಾತಿ, ಧರ್ಮ, ಭಾಷೆಯ ಯಾವುದೇ ಚೌಕಟ್ಟು ಇಲ್ಲ, ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಕಲೆಗಿದೆ. ಎಲ್ಲಿ ಸಾಂಸ್ಕೃತಿಕ ವಾತಾವರಣ ಇರುತ್ತದೋ ಅಲ್ಲಿ ಜೀವನೋತ್ಸಹ ಇರುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಮಾತನಾಡಿ, ನಮ್ಮ ಕಾಲೇಜು ಸಾಂಸ್ಕೃತಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡಿದೆ. ವಿದ್ಯಾರ್ಥಿಗಳು ಸಾಂಸ್ಕೃತಿಕ ಶಿಸ್ತನ್ನು ಅಳವಡಿಸಿಕೊಳ್ಳುವುದರ ಜೊತೆ ಕಲೆಯನ್ನು ಪ್ರೀತಿಸುವ ಗುಣವನ್ನು ಬೆಳೆಸಿಕೊಂಡು ಅದರೊಂದಿಗೆ ಕಲೆಯನ್ನು ಬೆಳೆಸುವ ಪ್ರೇಕ್ಷಕರು ನಾವಾಗಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಶುಭ ಹಾರೈಸಿದರು.
ವೇದಿಕೆಯಲ್ಲಿ ಸುಮಾರು 16 ತಂಡಗಳಿಂದ ಅಂತರ್ ತರಗತಿಗಳ ಸಾಂಸ್ಕೃತಿಕ ಸ್ಪರ್ಧೆಗಳ ವೈಭವ ನಡೆಯಿತು. ಪದವಿ ವಿಭಾಗದಲ್ಲಿ ಪ್ರಥಮ ಪ್ರಥಮ ಬಿಕಾಂ, ದ್ವಿತೀಯ tRತೀಯ ಬಿಎ ಹಾಗೂ ತೃತೀಯ ಬಹುಮಾನವನ್ನು ದ್ವಿತೀಯ ಬಿಎಸ್ಸಿ ತಂಡ ಪಡೆದುಕೊಂಡಿತು. ಸ್ನಾತಕೋತ್ತರ ವಿಭಾಗದಲ್ಲಿ ಎಂಕಾಂ ತಂಡ ಪ್ರಥಮ, ಎಂಸಿಜೆ ಹಾಗೂ ಎಂಎಸ್ಸಿ ತಂಡ ಪಡೆದುಕೊಂಡಿದೆ.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ, ಲಲಿತ ಕಲಾಸಂಘದ ಸಂಯೋಜಕ ಡಾ. ಮನಮೋಹನ್ ಎಂ. ಕಾರ್ಯಕ್ರಮ ನಿರ್ವಹಿಸಿದರು.