ಪುತ್ತೂರು: ನರಿಮೊಗರು ಹಿತರಕ್ಷಣಾ ವೇದಿಕೆ ವತಿಯಿಂದ ಆ.20 ರಂದು ನಡೆದ ಗ್ರಾಮ ಸಭೆಯಲ್ಲಿ ಕೈಗೊಂಡ ಸರ್ವಾನುಮತದ ನಿರ್ಣಾಯದಂತೆ ಸೆ.29 ರಂದು ಸಭೆ ನಡೆಸಿ ಕಲುಷಿತಗೊಂಡ ಕಾಲುವೆಯನ್ನು ಸ್ವಚ್ಛಗೊಳಿಸುವ ಮೂಲಕ ಸಮಸ್ಯೆ ಪರಿಹಾರಕ್ಕೆ ಚರ್ಚಿಸಲಾಯಿತು.
ಬಿಂದು ಸಂಸ್ಥೆಯ ಮಾಲಕರು, ತಜ್ಞರು, ಗ್ರಾಮ ಪಂಚಾಯತ್, ಸಂತ್ರಸ್ತರು ಮತ್ತು ಊರ ಪ್ರಮುಖರು ಸೇರಿ 15 ವರ್ಷದಿಂದ ನರಕ ಸದೃಶ ಜೀವನ ನಡೆಸುತ್ತಿದ್ದ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸುಮಾರು 3 ಗಂಟೆಗಳ ಕಾಲ ಸಭೆ ನಡೆದು ಚರ್ಚಿಸಲಾಯಿತು. ಮುಂದಿನ ಮೂರು ತಿಂಗಳ ಒಳಗಾಗಿ ಅದಕ್ಕೆ ಬೇಕಾದ ಕ್ರಮವನ್ನು ಕೈಗೊಂಡು ಪರಿಹಾರ ಮಾಡಿಕೊಡುತ್ತೇನೆ ಎಂದು ಬಿಂದು ಸಂಸ್ಥೆಯ ಮಾಲಕರು ಭರವಸೆ ನೀಡಿದರು.
ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು, ಈಗಾಗಲೇ ಕಲುಷಿತಗೊಂಡ ಕಾಲುವೆಯನ್ನು ಜೆಸಿಬಿ ಮೂಲಕ ಸ್ವಚ್ಛಗೊಳಿಸುವುದು, ಅಂತರ್ಜಲವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನದಿ ನೀರಿನ್ನು ಉಪಯೋಗಿಸುವುದು, ಕಾರ್ಖಾನೆಗೆ ಬರುವ ಟ್ರಕ್ ಗಳು ( ಲಾರಿ ) ಮತ್ತು ಅದರ ಚಾಲಕ ನಿರ್ವಾಹಕರಿಂದ ಆಗುವ ಸಮಸ್ಯೆಗಳನ್ನು ಸರಿಪಡಿಸಿಕೊಡುವ ಕುರಿತು ಬಿಂದು ಸಂಸ್ಥೆಯ ಮಾಲಕರು ಸಭೆಯಲ್ಲಿ ಭರವಸೆಯನ್ನು ನೀಡಿದ್ದಾರೆ.