ಬಧಾಯಿ ಹೋ ಮಿಥುನ್ ದಾ

ಬಂಗಾಳಿ ಮತ್ತು ಹಿಂದಿ ಸಿನಿಮಾಗಳ ಸೂಪರ್ ಸ್ಟಾರ್‌ಗೆ ಒಲಿದ ಫಾಲ್ಕೆ ಪ್ರಶಸ್ತಿ

ಈ ಸೋಮವಾರ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ ಆಗಿದ್ದು 74 ವರ್ಷದ ಶ್ರೇಷ್ಠ ನಟ ಮಿಥುನ್ ಚಕ್ರವರ್ತಿ ಅವರಿಗೆ (2022ರ) ಪ್ರಶಸ್ತಿ ಒಲಿದಿದೆ. ತನ್ನ ಪ್ರೊಫೈಲಿನಲ್ಲಿ ನೂರಾರು ಅತ್ಯುತ್ತಮ ಹಿಂದಿ ಮತ್ತು ಬೆಂಗಾಳಿ ಸಿನಿಮಾಗಳು, ಗಿನ್ನೆಸ್ ದಾಖಲೆ ಮಾಡಿದ ಟಿವಿ ರಿಯಾಲಿಟಿ ಶೋಗಳು, ಸಿನಿಮಾ ನಿರ್ಮಾಣ, ನಿರ್ದೇಶನ ಇವೆಲ್ಲವನ್ನೂ ಹೊಂದಿರುವ ಮಿಥುನ್ ಚಕ್ರವರ್ತಿ ತಾನೊಬ್ಬ ಶ್ರೇಷ್ಠ ಕಲಾವಿದ ಎನ್ನುವುದನ್ನು ಹೆಜ್ಜೆ ಹೆಜ್ಜೆಗೆ ಸಾಬೀತುಪಡಿಸಿದ್ದಾರೆ. ನಟನೆಗಾಗಿ ಎರಡು ರಾಷ್ಟ್ರಪ್ರಶಸ್ತಿಗಳು, ಹಲವು ಫಿಲ್ಮ್‌ಫೇರ್ ಪ್ರಶಸ್ತಿಗಳು ಅವರ ಶೋಕೇಸನಲ್ಲಿವೆ. ಕ್ಲಾಸ್ ಮತ್ತು ಮಾಸ್ ಎರಡೂ ರೀತಿಯ ಸಿನೆಮಾಗಳಿಗೆ ಅದ್ಭುತವಾಗಿ ಎರಕವಾಗುವ ಮಹಾನ್ ನಟ ಮಿಥುನ್ ದಾ.
ಬೆಂಗಾಲಿ ಜನರು ಅವನನ್ನು ಪ್ರೀತಿಯಿಂದ ಕರೆಯುವುದು ಹಾಗೇ

ಮೊದಲ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ





































 
 

ಕೋಲ್ಕತ್ತಾದ ಕ್ರೈಸ್ಟ್ ಕಾಲೇಜಿನಲ್ಲಿ ಬಿಎಸ್ಸಿ ಪೂರ್ತಿ ಮಾಡಿದ ಮಿಥುನ್ ದಾ ತನ್ನ ಸ್ವಂತ ಆಸಕ್ತಿಯಿಂದ ಪುಣೆ ಫಿಲ್ಮ್‌ ಇನ್‌ಸ್ಟಿಟ್ಯೂಟ್ ಸೇರಿ ಅಭಿನಯದಲ್ಲಿ ಪದವಿ ಪಡೆದು ಹೊರಬಂದರು. ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ ಕೋಲ್ಕತದಲ್ಲಿ ಆಗ ತೀವ್ರವಾಗಿದ್ದ ನಕ್ಸಲ್ ಚಟುವಟಿಕೆಯಿಂದ ಆಕರ್ಷಿತರಾಗಿ ಭೂಗತ ಆಗಿ ಬಿಡುತ್ತಾರೆ. ನಕ್ಸಲ್ ನಾಯಕರಾಗಿ ಸರಕಾರದ ವಿರುದ್ಧ ತೊಡೆ ತಟ್ಟಿ ನಿಲ್ಲುತ್ತಾರೆ. ಆದರೆ ಅನಿರೀಕ್ಷಿತವಾಗಿ ಆದ ಅವರ ಒಬ್ಬನೇ ಸೋದರನ ಅಪಘಾತ ಮತ್ತು ಮರಣ ಆತನನ್ನು ಮತ್ತೆ ಕುಟುಂಬದ ಕಡೆಗೆ ಎಳೆದುಕೊಂಡು ಬರುತ್ತದೆ.

1976ರಲ್ಲಿ ಮೃಣಾಲ್ ಸೇನ್ ನಿರ್ದೇಶನ ಮಾಡಿದ ‘ಮೃಗಯಾ’ ಸಿನಿಮಾದ ಮೂಲಕ ಅವರು ಸಿನಿಮಾರಂಗವನ್ನು ಪ್ರವೇಶ ಮಾಡಿದರು. ಸಿನಿಮಾ ಹಿಟ್ ಆಯಿತು. ಅದರ ಜೊತೆಗೆ ಮೊದಲ ಸಿನಿಮಾದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದರು. ನಂತರ ಆತ ವಿಶ್ರಾಂತಿ ಪಡೆದದ್ದೆ ಇಲ್ಲ ಎನ್ನಬಹುದು. ಬೆಂಗಾಳಿ ಮತ್ತು ಹಿಂದಿ ಸಿನಿಮಾಗಳ ಬ್ರಿಜ್ ನಟನಾಗಿ ಎರಡೂ ಕಡೆಗಳಲ್ಲಿ ಮಿಂಚಿದ್ದು ಮಾತ್ರವಲ್ಲ ಎರಡೂ ಭಾಷೆಗಳಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಕೀರ್ತಿ ಅವನದ್ದು.

ಡಿಸ್ಕೊ ಡಾನ್ಸರ್, ಅಗ್ನಿಪಥ್ ಇತ್ಯಾದಿ ಬ್ಲಾಕ್ ಬಸ್ಟರ್ ಸಿನಿಮಾಗಳು

ಆತನ ಸಮಕಾಲೀನ ನಟರಾದ ರಾಜೇಶ್ ಖನ್ನಾ ರೋಮಾನ್ಸ್ ಮೂಲಕ ಸ್ಟಾರ್ ಆಗಿದ್ದರೆ, ಅಮಿತಾಭ್‌ ಆಕ್ಷನ್ ಮತ್ತು ಡೈಲಾಗ್ ಮೂಲಕ ಸ್ಟಾರ್ ಆಗಿದ್ದರು. ಆದರೆ ಮಿಥುನ್ ದಾ ಸ್ಟಾರ್ ಆದದ್ದು ತನ್ನ ಅಗಾಧ ಅಭಿನಯ ಪ್ರತಿಭೆ ಮತ್ತು ಡ್ಯಾನ್ಸ್‌ನಿಂದ. ಆತನ ಡಿಸ್ಕೊ ಡ್ಯಾನ್ಸರ್ (1982) ಆಗಿನ ಕಾಲಕ್ಕೆ ಪಾನ್ ವರ್ಲ್ಡ್ ಸಿನೆಮಾ ಆಗಿದ್ದು ಮಾತ್ರವಲ್ಲ ಒಂದು ಬಿಲಿಯನ್ ದುಡ್ಡು ಮಾಡಿದ ಭಾರತದ ಮೊದಲ ಸಿನಿಮಾ ಆಯಿತು. ಕೇವಲ ಒಂದೇ ಇಮೇಜಿಗೆ ಸೀಮಿತವಾಗದೆ ಎಲ್ಲ ರೀತಿಯ ಪಾತ್ರಗಳನ್ನು ಮಾಡುತ್ತಾ ಬಂದವರು ಮಿಥುನ್ ದಾ.

ಸಿನೆಮಾ ಗೆಲ್ಲಬಹುದು ಅಥವಾ ಸೋಲಬಹುದು. ಆದರೆ ಸಿನೆಮಾದ ಕಥೆ ಮತ್ತು ಪಾತ್ರಗಳು ಸೋಲಬಾರದು ಎನ್ನುವುದು ಅವರ ನಿಲುವು. 1989ರ ಒಂದೇ ವರ್ಷದಲ್ಲಿ ಆತ ಲೀಡ್ ಪಾತ್ರ ಮಾಡಿದ 19 ಸಿನಿಮಾ ರಿಲೀಸ್ ಆಗಿ ಮಾಡಿದ ದಾಖಲೆ ಬಾಲಿವುಡ್‌ನಲ್ಲಿ ಇನ್ನೂ ಅಬಾಧಿತವಾಗಿಯೇ ಇದೆ. ಹಾಗೆಯೇ ಸತತ 19 ಸಿನಿಮಾಗಳು ಫ್ಲಾಪ್ ಆದ ದಾಖಲೆ ಕೂಡ ಆತನ ಹೆಸರಿಗಿದೆ. ಬೇರೆ ಯಾರಾದರೂ ಸಿನಿಮಾರಂಗವನ್ನು ಕ್ವಿಟ್ ಮಾಡಿ ಬೇರೆಲ್ಲಿಗಾದರೂ ಹೋಗುತ್ತಿದ್ದರು. ಆದರೆ ಮಿಥುನ್ ದಾ ಸಿನಿಮಾ ಬಿಟ್ಟು ಹೋಗಲಿಲ್ಲ. ಒಳ್ಳೆಯ ಸಿನಿಮಾ ಮಾಡುವುದನ್ನು ಬಿಡಲಿಲ್ಲ.

ತರಾನಾ, ಉನ್ನೀಸ್ ಬೀಸ್, ಸುರಕ್ಷಾ, ಪತಿತಾ, ಹಮ್ ಪಾಂಚ್, ಘರ್ ಏಕ್ ಮಂದಿರ್, ಆಂಧಿ ತೂಫಾನ್, ಜಾಗ್ ಉಠಾ ಇನ್ಸಾನ್, ಪ್ಯಾರ್ ಜುಕ್ತಾ ನಹೀಂ (ಕನ್ನಡದಲ್ಲಿ ನೀ ಬರೆದ ಕಾದಂಬರಿ), ಸ್ವರ್ಗ ಸೆ ಸುಂದರ್ ಆತನ ಗೆದ್ದಿರುವ ಕೆಲವು ಸಿನಿಮಾಗಳು. ಗೋಲ್‌ಮಾಲ್ 3, ಓ ಮೈ ಗಾಡ್, ಹೌಸ್‌ಫುಲ್ 2 ಆತನ ಸೂಪರ್ ಹಿಟ್ ಸಿನಿಮಾಗಳು. ತಮಿಳು, ತೆಲುಗು, ಕನ್ನಡ (ದ ವಿಲನ್) ಸಿನಿಮಾ ರಂಗದಲ್ಲಿ ಕೂಡ ಮಿಥುನ್ ದಾ ಗಮನಾರ್ಹ ಪಾತ್ರಗಳನ್ನು ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಹಿಂದಿ ಸಿನಿಮಾ ಕಾಶ್ಮೀರ್ ಫೈಲ್ಸ್ ಆತನನ್ನು ಗೆಲ್ಲಿಸಿದ ಸಿನಿಮಾ. ರೊಮಾನ್ಸ್, ಆಕ್ಷನ್, ಡ್ಯಾನ್ಸ್, ಎಮೋಷನಲ್, ಫ್ಯಾಮಿಲಿ ಡ್ರಾಮಾ, ಕಾಮಿಡಿ, ಕ್ಲಾಸಿಕಲ್, ಸ್ಪಿರಿಚುವಲ್ ಎಲ್ಲ ವಿಧವಾದ ಸಿನಿಮಾಗಳಿಗೆ ಸೂಟ್ ಆಗುವ ಮೇರು ಕಲಾವಿದ ಅಂದರೆ ಅದು ಮಿಥುನ್ ದಾ.

ಜಿ.ವಿ ಅಯ್ಯರ್ ನಿರ್ದೇಶನ ಮಾಡಿದ ಇಂಡಿಯನ್ ಕ್ಲಾಸಿಕಲ್ ಸಿನಿಮಾ ವಿವೇಕಾನಂದ ಇದರಲ್ಲಿ ರಾಮಕೃಷ್ಣ ಪರಮಹಂಸ ಪಾತ್ರ ವನ್ನು ಮಿಥುನ್‌ ಮಾಡಿದ್ದಾರೆ.

ಟಿವಿ ಶೋ ಗಿನ್ನೆಸ್ ದಾಖಲೆ

ಬೆಂಗಾಳಿಯಲ್ಲಿ ಹಲವು ವರ್ಷ ಜನಪ್ರಿಯ ಟಿವಿ ಶೋ ಬಿಗ್‌ಬಾಸ್ ಅವರು ನಡೆಸಿಕೊಟ್ಟಿದ್ದಾರೆ. ಅವರೇ ಡಿಸೈನ್ ಮಾಡಿ ಜಡ್ಜ್ ಆಗಿ ಕೂಡ ಕೂತಿದ್ದ DANCE INDIA ಅತ್ಯಂತ ದೀರ್ಘ ಅವಧಿಗೆ ಪ್ರದರ್ಶನ ಆದ ಟಿವಿ ಶೋ ಆಗಿ ಲಿಮ್ಕಾ ಹಾಗೂ ಗಿನ್ನೆಸ್ ದಾಖಲೆ ಮಾಡಿದ್ದನ್ನು ಮರೆಯುವ ಹಾಗೆಯೇ ಇಲ್ಲ. ಅದು ದೇಶದಲ್ಲಿ ಉಂಟುಮಾಡಿದ ಸಂಚಲನ ಮತ್ತು ಉನ್ಮಾದಗಳನ್ನು ವಿವರಿಸಲು ಶಬ್ದಗಳೇ ಇಲ್ಲ. ಈಗಲೂ ಡ್ಯಾನ್ಸ್ ರಿಯಾಲಿಟಿ ಶೋಗಳು ನಡೆಯುವಾಗ ಮುಖ್ಯ ನಿರ್ಣಾಯಕರಾಗಿ ಮಿಥುನ್ ದಾ ಇರುತ್ತಾರೆ. ಆತನ ಕಾಮಿಡಿ ಥೀಮ್ ಇರುವ ಸಿನಿಮಾಗಳು ತುಂಬ ಹಿಟ್ ಆಗಿವೆ. ಬೆಂಗಾಲಿ ಭಾಷೆಯಲ್ಲಿ ತಹದೇರ್ ಕಥಾ ಸಿನಿಮಾದ ಅಭಿನಯಕ್ಕೆ ಅವರಿಗೆ ಎರಡನೇ ರಾಷ್ಟ್ರಪ್ರಶಸ್ತಿ ಬಂದಿದೆ.

ಅಂತಹ ಪರಿಪೂರ್ಣ ಕಲಾವಿದನಿಗೆ 2022ನೇ ಇಸವಿಯ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೋಮವಾರ ಘೋಷಣೆ ಆಗಿದೆ. ಇಷ್ಟು ಲೇಟ್ ಯಾಕೆ ಆಯ್ತು? ಎಂಬ ಒಂದು ಸಣ್ಣ ಅಪಸ್ವರ ಬಿಟ್ಟರೆ ಅದು ನಿರ್ವಿವಾದದ ಆಯ್ಕೆ ಅನ್ನುವುದು ಮಿಥುನ್ ದಾ ಅವರ ಖದರ್‌.

ಫಾಲ್ಕೆ ಪ್ರಶಸ್ತಿಯ ಬಗ್ಗೆ ಎರಡು ಮಾತು

‘ಭಾರತೀಯ ಸಿನಿಮಾರಂಗದ ಪಿತಾಮಹ’ ಎಂದೇ ಕರೆಸಿಕೊಂಡ ದಾದಾ ಸಾಹೇಬ್ ಫಾಲ್ಕೆ ಅವರ ಹೆಸರಿನಲ್ಲಿ ಭಾರತ ಸರಕಾರದ ಮಾರ್ಗದರ್ಶನದಲ್ಲಿ ನೀಡಲಾಗುವ ಪ್ರಶಸ್ತಿ ಇದು. ಅದಕ್ಕೆ ಪ್ರತೀವರ್ಷ ತಜ್ಞರ ಆಯ್ಕೆ ಮಂಡಳಿ ಇರುತ್ತದೆ. ಭಾರತೀಯ ಸಿನಿಮಾ ರಂಗದ ಅಭ್ಯುದಯಕ್ಕೆ ನಿರ್ಣಾಯಕ ಕೊಡುಗೆ ನೀಡಿದ ಒಬ್ಬ ಕಲಾವಿದ, ತಂತ್ರಜ್ಞ, ಸಿನಿಮಾ ಸಾಹಿತಿ, ಸಂಗೀತ ನಿರ್ದೇಶಕ…ಹೀಗೆ ಯಾವುದೇ ಕ್ಷೇತ್ರದ ಒಬ್ಬರನ್ನು ಮಾತ್ರ ಆಯ್ಕೆ ಮಾಡಿ ಪ್ರತಿ ವರ್ಷ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯ ಜೊತೆಗೆ ಹೊಳೆಯುವ ಸ್ವರ್ಣ ಕಮಲ ಟ್ರೋಫಿ, ಸನ್ಮಾನ ಮತ್ತು ಹತ್ತು ಲಕ್ಷ ರೂ.ನಗದು ಬಹುಮಾನ ಇರುತ್ತದೆ.

1969ರಲ್ಲಿ ಖ್ಯಾತ ನಟಿ ದೇವಿಕಾ ರಾಣಿ ರೋರಿಚ್ ಈ ಪ್ರಶಸ್ತಿಯನ್ನು ಪಡೆದ ಮೊದಲ ಕಲಾವಿದೆ. ನಂತರ ಅಮಿತಾಭ್‌, ರಜನಿಕಾಂತ್, ಪೃಥ್ವಿರಾಜ್ ಕಪೂರ್, ರಾಜ್‌ಕಪೂರ್, ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ, ಶಶಿ ಕಪೂರ್, ಭೂಪೇನ್ ಹಜಾರಿಕಾ… ಮೊದಲಾದವರು ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ. 1995ರಲ್ಲಿ ಕನ್ನಡದ ವರನಟ ರಾಜಕುಮಾರ್ ಈ ಪ್ರಶಸ್ತಿ ಪಡೆದರು. ಈ ಸಾಧಕರ ಅನುಕ್ರಮಣಿಕೆಯಲ್ಲಿ ಮಿಥುನ್ ಚಕ್ರವರ್ತಿ 54ನೆಯವರು ಎನ್ನುವುದು ಇತಿಹಾಸ.
ಹಾಗೆಯೇ ಈ ಪ್ರಶಸ್ತಿ ನಿರ್ಣಯ ಇದುವರೆಗೆ ಅತ್ಯಂತ ಪಾರದರ್ಶಕ ಹಾಗೂ ನ್ಯಾಯಯುತ ಆಗಿದೆ ಎನ್ನುತ್ತದೆ ಫಾಲ್ಕೆ ಪ್ರಶಸ್ತಿಯ ಹಿರಿಮೆ.
ಬಧಾಯಿ ಹೋ ಮಿಥುನ್ ದಾ.

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top