ತೆಂಗಿನೆಣ್ಣೆ ಬೆಲೆಯಲ್ಲಿ 100 ರೂ. ಏರಿಕೆ
ಪುತ್ತೂರು: ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಈಗ ತೆಂಗಿನಕಾಯಿ ಕೂಡ ಶಾಕ್ ಕೊಡಲಾರಂಭಿಸಿದೆ. ಟೊಮೆಟೊ, ಈರುಳ್ಳಿ, ತರಕಾರಿ, ಅಡುಗೆ ಎಣ್ಣೆ, ಹೂ, ಹಣ್ಣು… ಹೀಗೆ ಪ್ರತಿಯೊಂದು ಅಗತ್ಯ ವಸ್ತುವಿನ ಬೆಲೇ ಏರುತ್ತಲೇ ಇದೆ. ಇದರ ಜೊತೆಗೆ ಈಗ ತೆಂಗಿನಕಾಯಿ ಕೂಡ ಸೇರಿಕೊಂಡಿದೆ. ಅದರಲ್ಲೂ ಸಾಲು ಸಾಲು ಹಬ್ಬಗಳು ಬರುತ್ತಿರುವಾಗಲೇ ತೆಂಗಿನಕಾಯಿ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿರುವುದು ಜನರ ಕೈಸುಡಲಾರಂಭಿಸಿದೆ. ಕರಾವಳಿ ಭಾಗದಲ್ಲಿ ಅಡುಗೆಗೆ ತೆಂಗಿನಕಾಯಿ ಬೇಕೇ ಬೇಕು. ಇದರ ಜೊತೆಗೆ ಪೂಜೆ ಪುರಸ್ಕಾರದಂಥ ಧಾರ್ಮಿಕ ಕಾರ್ಯಗಳಲ್ಲೂ ತೆಂಗಿನಕಾಯಿಗೆ ಮಹತ್ವದ ಸ್ಥಾನವಿದೆ.
ಹದಿನೈದು ದಿನಗಳ ಹಿಂದೆ ಒಂದು ಕೆ.ಜಿ ತೆಂಗಿನಕಾಯಿ 30ರಿಂದ 35ರೂಪಾಯಿಗೆ ಮಾರಾಟವಾಗುತ್ತಿತ್ತು. ಈಗ ಅದೇ ತೆಂಗಿನಕಾಯಿ 50-57 ರೂಪಾಯಿಗೆ ಮಾರಾಟವಾಗುತ್ತಿದೆ. ಹಲವು ವರ್ಷಗಳಿಂದ ಸ್ಥಿರತೆ ಕಾಯ್ದುಕೊಂಡಿದ್ದ ತೆಂಗಿನಕಾಯಿ ಬೆಲೆ ಈ ವರ್ಷ ಹೆಚ್ಚಳವಾಗುತ್ತಿದೆ. 2010ರ ನಂತರ ಇದೇ ಮೊದಲ ಬಾರಿಗೆ ತೆಂಗಿನಕಾಯಿ ಬೆಲೆ ಏರಿಕೆಯಾಗಿದೆ. ಸದ್ಯದಲ್ಲೇ ದಸರಾ, ದೀಪಾವಳಿ ಹಬ್ಬಗಳು ಬರುತ್ತಿದ್ದು, ಬೆಲೆ ಮತ್ತಷ್ಟು ಏರಿಕೆಯಾಗಲಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಮುಂದಿನ 5-6 ತಿಂಗಳ ತನಕ ತೆಂಗಿನಕಾಯಿ ಬೆಲೆ ಏರುಗತಿಯಲ್ಲೇ ಇರಲಿದೆ ಎಂದು ಮಾರುಕಟ್ಟೆ ಮೂಲಗಳು ಹೇಳಿವೆ.
ಈ ಬಾರಿ ಬೇಸಿಗೆಯಲ್ಲಿ ವಿಪರೀತ ಬಿಸಿಲಿದ್ದ ಕಾರಣ ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದು, ಉತ್ತರ ಭಾರತವೂ ಸೇರಿದಂತೆ ಎಲ್ಲೆಡೆಗೆ ಸಾಕಷ್ಟು ಎಳನೀರು ರಫ್ತಾಗಿದೆ. ಇದೇ ಕಾರಣದಿಂದಾಗಿ ತೆಂಗಿನಕಾಯಿ ಬೆಳೆಯಲ್ಲಿ ಕುಸಿತವಾಗಿ ಏಕಾಏಕಿ ಬೆಲೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಇದಲ್ಲದೆ ಮಳೆಗಾಲದಲ್ಲಿ ವಿಪರೀತ ಮಳೆಯಾಗಿ ತೆಂಗಿನಮರಗಳಿಗೆ ರೋಗ ಬಂದಿದೆ. ತೆಂಗಿನಕಾಯಿ ಇಳುವರಿ ಕುಂಠಿತವಾಗಲು ಇದು ಕೂಡ ಒಂದು ಕಾರಣ ಎನ್ನಲಾಗುತ್ತಿದೆ.
ಕರಾವಳಿ ಭಾಗದಲ್ಲಿ ತೆಂಗಿಕಾಯಿ ಅಡುಗೆ ಮನೆಯ ಅನಿವಾರ್ಯ ವಸ್ತು. ಶಾಖಾಹಾರ ಇರಲಿ, ಮಾಂಸಾಹಾರ ಇರಲಿ ತೆಂಗಿನಕಾಯಿ ಹಾಕದೆ ಅಡುಗೆ ಆಗುವುದಿಲ್ಲ. ಐದು ಮಂದಿಯಿರುವ ಒಂದು ಕುಟುಂಬ ನಿತ್ಯ ಸರಾಸರಿಯಾಗಿ ಕನಿಷ್ಠ ಒಂದು ತೆಂಗಿನಕಾಯಿ ಬಳಸುತ್ತದೆ ಎನ್ನುವುದು ಲೆಕ್ಕಾಚಾರ.
ತೆಂಗಿನೆಣ್ಣೆ ಬೆಲೆಯೂ ಗಗನಕ್ಕೆ
ತೆಂಗಿನಕಾಯಿ ಬೆಲೆ ಏರಿಕೆಯಾಗುತ್ತಿರುವಂತೆಯೇ ತೆಂಗೆನೆಣ್ಣೆಯ ಬೆಲೆಯೂ ಗಗನಮುಖಿಯಾಗಿದೆ. ಕರಾವಳಿಯಲ್ಲಿ ಅಡುಗೆಗೆ ಹೆಚ್ಚಾಗಿ ಬಳಸುವುದು ತೆಂಗಿನೆಣ್ಣೆ. ದೇವರಿಗೆ ದೀಪ ಹಚ್ಚಲೂ ತೆಂಗೆನೆಣ್ಣೆಯೇ ಹೆಚ್ಚು ಬಳಕೆಯಾಗುತ್ತದೆ. ಅನೇಕ ತಿಂಡಿಗಳ ತಯಾರಿಗೂ ತೆಂಗಿನೆಣ್ಣೆ ಅನಿವಾರ್ಯ. ತೆಂಗಿನೆಣ್ಣೆಯಿಂದ ಮಾಡಿದ ತಿಂಡಿ ಹೆಚ್ಚು ರುಚಿಕರವಾಗಿರುತ್ತದೆ. ತೆಂಗಿನೆಣ್ಣೆಯಿಂದಲೇ ತಿಂಡಿಗಳನ್ನು ತಯಾರಿಸುವ ಬೇಕರಿಗಳು, ಹೋಟೆಲ್‌ಗಳು ಈಗಲೂ ಕರಾವಳಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. ಇವರಿಗೆಲ್ಲ ತೆಂಗಿನೆಣ್ಣೆಯ ಬೆಲೆ ಏರಿಕೆಯಿಂದಾಗಿ ಕೈಸುಡಲಾರಂಭಿಸಿದೆ.
15 ದಿನಗಳ ಹಿಂದಿನ ತನಕ ತೆಂಗಿನೆಣ್ಣೆ ಲೀಟರಿಗೆ 140-150 ರೂ. ಇತ್ತು. ಈಗ ದಿಢೀರ್ ಎಂದು 240-250 ರೂ. ಆಗಿದೆ. ಅಂದರೆ ಲೀಟರಿಗೆ 100 ರೂ. ಏರಿಕೆಯಾಗಿದೆ. ಈ ಪರಿಸ್ಥಿತಿಯಲ್ಲಿ ತಿಂಡಿಗಳ ಬೆಲೆ ಏರಿಸುವುದು ಅನಿವಾರ್ಯ ಎಂದು ಬೇಕರಿ ಮಾಲೀಕರು ಹೇಳುತ್ತಿದ್ದಾರೆ.