ರಿವಾಲ್ವರ್ ಸ್ವಚ್ಛಗೊಳಿಸುವಾಗ ಸಿಡಿದ ಬುಲೆಟ್
ಮುಂಬಯಿ: ಬಾಲಿವುಡ್ನ ಜನಪ್ರಿಯ ನಟ ಗೋವಿಂದ ಕಾಲಿಗೆ ಗುಂಡೇಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗೆಂದು ಅವರ ಕಾಲಿಗೆ ಯಾರೂ ಗುಂಡು ಹಾರಿಸಿಲ್ಲ, ತನ್ನದೇ ಲೇಸೆನ್ಸ್ ಇರುವ ರಿಲಾಲ್ವರ್ನಿಂದ ಹಾರಿದ ಗುಂಡಿನಿಂದ ಗೋವಿಂದ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರ ಬೆಳಗ್ಗೆ ಗೋವಿಂದ ಅವರ ಕಾಲಿಗೆ ಅವರದೇ ರಿವಾಲ್ವರ್ನಿಂದ ಹಾರಿದ ಗುಂಡು ತಗುಲಿದ ಹಿನ್ನೆಲೆಯಲ್ಲಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.ಆಕಸ್ಮಿಕವಾಗಿ ಅವರ ರಿವಾಲ್ವರ್ನಿಂದ ಗುಂಡು ಹಾರಿದೆ ಎನ್ನಲಾಗಿದೆ.
ಮುಂಜಾನೆ 4.45ಕ್ಕೆ ಈ ಘಟನೆ ನಡೆದಿದೆ. ಕೋಲ್ಕತಕ್ಕೆ ಹೋಗುವ ತರಾತುರಿಯಲ್ಲಿದ್ದ ಗೋವಿಂದ ರಿವಾಲ್ವರ್ ಕ್ಲೀನ್ ಮಾಡುತ್ತಿದ್ದಾಗ ಅದು ಕೈಜಾರಿ ಕೆಳಗೆ ಬಿದ್ದು ಗುಂಡು ಹಾರಿದೆ. ಗೋವಿಂದ ಅವರ ಮೊಣಕಾಲಿಗೆ ಗುಂಡು ತಾಗಿದ್ದು, ಕೂಡಲೇ ಅವರನ್ನು ಸಮೀಪದ ಕ್ರಿಟಿಕೇರ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ವೈದ್ಯರು ಗುಂಡನ್ನು ಹೊರತೆಗೆದಿದ್ದಾರೆ. ರಾಜಕಾರಣಿಯೂ ಆಗಿರುವ ಗೋವಿಂದ ಕಾಂಗ್ರೆಸ್ ಟಿಕೆಟ್ನಲ್ಲಿ ಸ್ಪರ್ಧಿಸಿ ಒಂದು ಅವಧಿಗೆ ಸಂಸದರೂ ಆಗಿದ್ದರು. ಬಳಿಕ ಅವರು ಶಿವಸೆನೆಗೆ ಸೇರಿದ್ದಾರೆ. ಒಂದು ಕಾಲದಲ್ಲಿ ಬಾಲಿವುಡ್ನ ಜನಪ್ರಿಯ ಹೀರೊ ಆಗಿದ್ದ ಗೋವಿಂದ ಈಗ ಕಾಮಿಡಿ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದಾರೆ.