ಸಿಬಿಐ ಅಧಿಕಾರಿಗಳಂತೆ ಸೋಗು ಹಾಕಿ ಉದ್ಯಮಿಯನ್ನು ಡಿಜಿಟಲ್ ಬಂಧನದಲ್ಲಿಟ್ಟು ವಂಚನೆ
ಹೊಸದಿಲ್ಲಿ : ಸಿಬಿಐ ಅಧಿಕಾರಿಗಳ ಸೋಗುಹಾಕಿ ಆನ್‌ಲೈನ್ ಮೂಲಕ ವರ್ಧಮಾನ್ ಕಂಪನಿ ಮಾಲೀಕ ಎಸ್.ಪಿ.ಓಸ್ವಾಲ್ ಅವರ ಖಾತೆಯಿಂದ 7 ಕೋ. ರೂ. ಎಗರಿಸಿದ್ದ ಇಬ್ಬರು ಸೈಬರ್ ವಂಚಕರನ್ನು ಪಂಜಾಬ್ ಪೊಲೀಸರು 48 ತಾಸುಗಳೊಳಗೆ ಬಂಧಿಸಿದ್ದಾರೆ. ಈ ಗ್ಯಾಂಗಿನಲ್ಲಿ ಇನ್ನೂ 7 ಮಂದಿಯಿದ್ದು, ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ.
ಓರ್ವ ಆರೋಪಿ ಸಿಬಿಐ ಅಧಿಕಾರಿಯಂತೆ ಸೋಗು ಹಾಕಿ ಓಸ್ವಾಲ್ ಅವರನ್ನು ಸಂಪರ್ಕಿಸಿ ಅವರಿಗೆ ತನ್ನ ನಕಲಿ ಗುರುತಿನ ಕಾರ್ಡ್ ತೋರಿಸಿದ್ದ. ನಂತರ ಮಾಮೂಲಿ ಕಾರ್ಯಶೈಲಿಯಂತೆ ಕೇಸಿನಿಂದ ಅವರನ್ನು ಪಾರು ಮಾಡಲು ಹಣಕ್ಕೆ ಬೇಡಿಕೆಯಿಟ್ಟಿದ್ದರು. ಅವರನ್ನು ಡಿಜಿಟಲ್ ಬಂಧನದಲ್ಲಿಟ್ಟು, ವಿವಿಧ ಖಾತೆಗಳಿಂದ 7 ಕೋಟಿ ರೂ. ತೆಗೆದಿದ್ದರು. ತಾನು ಮೋಸ ಹೋದದ್ದು ಗೊತ್ತಾದ ಬಳಿಕ ಓಸ್ವಾಲ್ ಲೂಧಿಯಾನ ಪೊಲೀಸರಿಗೆ ದೂರು ನೀಡಿದ್ದರು. ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅಸ್ಸಾಂ ನಿವಾಸಿಗಳಾದ ಅತನೂ ಚೌಧರಿ ಮತ್ತು ಆನಂದ್ ಚೌಧರಿ ಎಂಬಿಬ್ಬರನ್ನು ಬಂಧಿಸಿ ಅವರಿಂದ 5.25 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ. ಈ ಮೊದಲು ಇವರು ಇದೇ ರೀತಿ ಇನ್ನೋರ್ವ ಉದ್ಯಮಿಯಿಂದ 1.01 ಕೋಟಿ ರೂ. ಲಪಟಾಯಿಸಿರುವುದು ತನಿಖೆಯಿಂದ ತಿಳಿದುಬಂದಿದೆ.
ದೇಶಾದ್ಯಂತ ಸೈಬರ್ ವಂಚನೆ ಮಾಡುತ್ತಿರುವ ಜಾಲ ಇವರದ್ದು. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಹಲವು ಮಂದಿ ಈ ಜಾಲದಲ್ಲಿ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.