ಅ.3-12 : ಪುತ್ತೂರು ಶ್ರೀ ಮಹಾಲಿಂಗೇಶ್ವರ ವಠಾರದ ಶ್ರೀ ಶಾರದಾ ಭಜನಾ ಮಂದಿರದಲ್ಲಿ 90ನೇ ವರ್ಷದ ನವರಾತ್ರಿ ಉತ್ಸವ, ‘ಪುತ್ತೂರು ಶಾರದೋತ್ಸವ’ | ವೈಭವದ ಶೋಭಾಯಾತ್ರೆ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ ‘ಪುತ್ತೂರು ಶಾರದೋತ್ಸವ’ ಅ.3 ರಿಂದ 12 ರ ತನಕ ವಿವಿಧ ವೈದಿಕ, ಧಾರ್ಮಿಕ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಶ್ರೀ ಶಾರದಾ ಭಜನಾ ಮಂದಿರದ ಆಡಳಿತ ಮಂಡಳಿ ಗೌರವಾಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ತಿಳಿಸಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 9 ದಶಕಗಳ ಹಿಂದೆ ಆರಂಭಗೊಂಡ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ ಆರಂಭಗೊಂಡಿತ್ತು. 9 ದಶಕಗಳ ಹಿಂದೆ ಪುತ್ತೂರಿಗೆ ಮಹಾಮಾರಿಯೊಂದು ಭಾದಿಸಿ ಜನರು ಸಾವಿಗೀಡಾಗುತ್ತಿರುವುದನ್ನು ಕಂಡು ಆಸ್ತಿಕ ಬಾಂಧವರು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನಕ್ಕೆ ತೆರಳಿ ಪ್ರಾರ್ಥಿಸಿದ್ದರು. ದೈವವು ಅಭಯದ ನುಡಿಯಲ್ಲಿ ತಿಳಿಸಿದಂತೆ ಮನೆ ಮನೆಗೆ ತೆರಳಿ ಭಜನೆ ಮಾಡಿದರೆ ರೋಗವನ್ನು ಶಮನಗೊಳಿಸಬಹುದು ಎಂದು ತಿಳಿಸಿ ಇತಿಹಾಸವಿದ್ದು, ಈ ನಿಟ್ಟಿನಲ್ಲಿ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಭಜನೋತ್ಸವ ನಡೆಸುವ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು ಎಂದು ತಿಳಿಸಿದರು.

ಉತ್ಸವದ ಅಂಗವಾಗಿ ಅ.2 ರಂದು ಸಂಜೆ 4 ಗಂಟೆಗೆ ದರ್ಬೆ ವೃತ್ತದಿಂದ ಭಜನಾ ಮಂದಿರಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹೊರೆಕಾಣೀಕೆ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಅ.3 ರಂದು ಗುರುವಾರ ನವರಾತ್ರಿ ಪೂಜೆ ಆರಂಭ. ಅಂದು ವಿಶೇಷವಾಗಿ ಈ ಬಾರಿಯಿಂದ ‘ಅಕ್ಷರಯಜ್ಞ’ ಸೇವೆ ನಡೆಯಲಿದ್ದು, ಇದಕ್ಕಾಗಿ ಭಕ್ತಾದಿಗಳು ಸಹಿತ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ನಡೆಯಲಿದೆ. ಅ.9 ಬುಧವಾರ ಬೆಳಿಗ್ಗೆ 10 ಗಂಟೆ ನಂತರ ಶ್ರೀ ಶಾರದಾ ವಿಗ್ರಹ ಪ್ರತಿಷ್ಠೆ ಬಳಿಕ ಅಕ್ಷರಯಜ್ಞ, ಸರಸ್ವತಿ ಪೂಜೆ ನಡೆಯಲಿದೆ. ಅ.10 ಗುರುವಾರ ಬೆಳಿಗ್ಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಚಂಡಿಕಾ ಹೋಮ ನಡೆಯಲಿದೆ ಎಂದು ತಿಳಿಸಿದರು.































 
 

ಅ.11 ರಂದು ಸಂಜೆ 4.30 ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ದೀಪ ಪ್ರಜ್ವಲನೆ ಮಾಡಲಿದ್ದು, ಬ್ರಹ್ಮಶ್ರೀ ಕೆಮ್ಮಿಂಜೆ ಕಾರ್ತಿಕ ತಂತ್ರಿ ಧಾರ್ಮಿಕ ಉಪನ್ಯಾಸ ನೀಡುವರು. ಶ್ರೀ ಶಾರದಾ ಭಜನಾ ಮಂದಿರದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅಧ್ಯಕ್ಷತೆ ವಹಿಸುವರು. ಗೌರವಾಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು, ಮಹಾವೀರ ಮೆಡಿಕಲ್ ಸೆಂಟರ್‍ ನ ವೈದ್ಯ ಡಾ.ಸುರೇಶ್‍ ಪುತ್ತೂರಾಯ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಶ್ರೀ ಶಾರದಾ ಭಜನಾ ಮಂದಿರದ ಹಿರಿಯ ಸದಸ್ಯರಿಗೆ ಸನ್ಮಾನ ನೆರವೇರಲಿದೆ ಎಂದು ಅವರು ಹೇಳಿದರು.

ಅ.12 ಶನಿವಾರ ಬೆಳಿಗ್ಗೆ 9 ರಿಂದ ಅಕ್ಷರಾಭ್ಯಾಸ ನಡೆದು ಸಂಜೆ 5 ಕ್ಕೆ ಶ್ರೀ ಶಾರದಾ ದೇವಿಯ ಶೋಭಾಯಾತ್ರೆ, ವಿಗ್ರಹ ಜಲಸ್ಥಂಭನ ನಡೆಯಲಿದೆ.

ಪ್ರತೀ ದಿನ ಸಂಜೆ 4 ರಿಂದ 7.30 ರ ತನಕ ಸಾಂಸ್ಕೃತಿ ಕಾರ್ಯಕ್ರಮ, ಭಜನೆ, ರಾತ್ರಿ 8.30 ಕ್ಕೆ ಮಹಾಪೂಜೆ, ಮಂಗಳ ನಡೆದು ಬಳಿಕ ಅನ್ನಸಂತರ್ಪನೆ ಜರಗಲಿದೆ.

ನವರಾತ್ರಿ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಕೆ.ನವೀನ್ ಭಂಡಾರಿ, ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸಮೂರ್ತಿ, ಶ್ರೀ ಶಾರದಾ ಭಜನಾ ಮಂದಿರದ ನಿಕಟಪೂರ್ವ ಅಧ್ಯಕ್ಷ ಸಾಯಿರಾಮ್ ರಾವ್ ಸಹಿತ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಅ.12 ಶನಿವಾರ ಸಂಜೆ ಬೊಳುವಾರು ವೃತ್ತದಲ್ಲಿ ಶ್ರೀ ಶಾರದಾ ದೇವಿಯ ಭವ್ಯ ಶೋಭಾಯಾತ್ರೆಗೆ ಮಾಜಿ ಸಂಸದ ನಳಿನ್ ಕುಮಾರ್‍ ಕಟೀಲ್ ಚಾಲನೆ ನೀಡುವರು. ಬಳಿಕ ಶೋಭಾಯಾತ್ರೆ ವೇದಘೋಷ, ಚೆಂಡೆ, ವಾದ್ಯಘೋಷ, ವಾದ್ಯವೃಂದ, ಕುಣಿತ ಭಜನೆಯೊಂದಿಗೆ ಮುಖ್ಯ ರಸ್ತೆಯಲ್ಲಿ ಚಲಿಸಿ ದರ್ಬೆ ವೃತ್ತಕ್ಕೆ ಸಾಗಿ ಬಳಿಕ ಪುನಃ ಹಿಂತಿರುಗಿ ಜಲಸ್ತಂಭನಗೊಳ್ಳಲಿದೆ ಎಂದು ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವೀಣಾ ವಾದನ, ಸುಗಮ ಸಂಗೀತ, ಹಾಸ್ಯಸಂಜೆ, ಯಕ್ಷಗಾನ ತಾಳಮದ್ದಳೆ, ಭಕ್ತಿ-ಭಾವ-ಗಾನ ಸಂಗೀತ ಸಂಭ್ರಮ, ಕರ್ನಾಟಕ ಶಾಸ್ತ್ರೀಯ ಸಂಗೀತ, ನಗೆಹಬ್ಬ, ಸುಮಧುರ ಸಂಗೀತ ಲಹರಿ, ಸಾಂಸ್ಕೃತಿಕ ಕಲಾ ವೈಭವ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.

ಶೋಭಾಯಾತ್ರೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ಹಾಕುವ ಎಲ್ಲಾ ವೇಷಧಾರಿಗಳು ಪಾಲ್ಗೊಳ್ಳಬೇಕು ಹಾಗೂ ಪಾಲ್ಗೊಳ್ಳಲಿರುವ ಕಲಾ ತಂಡಗಳು ಮುಂಚಿತವಾಗಿ ಹೆಸರು ನೀಡಬೇಕಾಗಿ ಅವರು ವಿನಂತಿಸಿದರು. ಶೋಭಾಯಾತ್ರೆಯಲ್ಲಿ ಡಿಜೆ ಹಾಗೂ ಪಟಾಕಿಗೆ ಅವಕಾಶವಿಲ್ಲ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಭಜನಾ ಮಂದಿರದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಹೊರೆಕಾಣಿಕೆ ಸಂಚಾಲಕ ರಾಜೇಶ್‍ ಬನ್ನೂರು, ಡಾ.ಸುರೇಶ್‍ ಪುತ್ತೂರಾಯ, ಶೋಭಾಯಾತ್ರೆ ಸಂಚಾಲಕ ನವೀನ್ ಕುಲಾಲ್‍ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top