ಉಡುಪಿ: ರೇಬಿಸ್ ರೋಗವನ್ನು ತಡೆಗಟ್ಟುವ ಜಾಗೃತಿಗಾಗಿ ಸೆ.28 ನ್ನು ವಿಶ್ವ ರೇಬಿಸ್ ದಿನವಾಗಿ ಆಚರಿಸಲಾಗುತ್ತಿದೆ. ರೇಬಿಸ್ ರೋಗವು ನಾಯಿ ಮತ್ತು ಬೆಕ್ಕು ಕಡಿತದಿಂದ ಬರುತ್ತದೆ. ಈ ಪ್ರಾಣಿಗಳಿಂದ ಕಚ್ಚಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಬೇಕು. ಎಚ್ಚರಿಕೆಯ ಕ್ರಮವಾಗಿ ಎಲ್ಲಾ ಸಾಕುಪ್ರಾಣಿಗಳಿಗೆ ರೇಬಿಸ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಅಕಸ್ಮಿಕವಾಗಿ ಪ್ರಾಣಿಗಳ ಕಡಿತವಾದರೆ ಪಶು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದರೆ ಮಾರಣಾಂತಿಕ ರೋಗದಿಂದ ದೂರವಿರಬಹುದು ಎಂದು ಕಾಪು ತಾಲೂಕು ಪಶುವೈದ್ಯಾಧಿಕಾರಿ ಡಾ. ಅರುಣ್ ಹೆಗ್ಡೆ ತಿಳಿಸಿದರು.
ಉಡುಪಿ ಜಿಲ್ಲಾ ಪಂಚಾಯಿತಿ ಪಶುಪಾಲನ ಮತ್ತು ಪಶು ವೈದ್ಯ ಸೇವಾ ಇಲಾಖೆ, ಶಿರ್ವ ಪಶು ಚಿಕಿತ್ಸಾಲಯ, ಶಿರ್ವ ರೋಟರಿ ಕ್ಲಬ್ ಸಹಯೋಗದಲ್ಲಿ ಕುತ್ಯಾರು ಸೂರ್ಯ ಚೈತನ್ಯ ಪ್ರೌಢಶಾಲೆಯಲ್ಲಿ ನಡೆದ ರೇಬಿಸ್ ಜಾಗೃತಿ ಶಿಬಿರದಲ್ಲಿ ಅವರು ಮಾಹಿತಿ ನೀಡಿದರು.
ಶಿರ್ವ ರೋಟರಿ ಕ್ಲಬ್ ಅಧ್ಯಕ್ಷ ಅಮಿತ್ ಅರುಣ್ ಅಧ್ಯಕ್ಷತೆ ವಹಿಸಿದ್ದರು. ಪಡುಬಿದ್ರಿ ಹಿರಿಯ ಪಶುವೈದ್ಯ ಡಾ.ಲೋಕೇಶ್ ಪಡುಬಿದ್ರಿ, ಪರೀಕ್ಷಕರಾದ ಶಿವಪುತ್ರೇಯ ಗುರುಸ್ವಾಮಿ, ವಸಂತ ಮಾಧವ, ರೋಟರಿ ಮಾಜಿ ಅಧ್ಯಕ್ಷ ಡಾ.ವಿಠಲ ನಾಯಕ್, ರೊಟೇರಿಯನ್ ವಿಲಿಯಂ ಪುರ್ತಾದೊ, ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ದಿವಾಕರ ಆಚಾರ್ಯ ಗೇರುಕಟ್ಟೆ ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಸಂಗೀತ ರಾವ್ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ವಂದಿಸಿದರು. ಶಿಕ್ಷಕಿ ಅನಿತಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಗೆ ರೇಬಿಸ್ ಜಾಗೃತಿ ಕರಪತ್ರವನ್ನು ವಿತರಿಸಲಾಯಿತು.