ಕುಮಾರಸ್ವಾಮಿಯನ್ನು ಹಂದಿಗೆ ಹೋಲಿಸಿದ ಲೋಕಾಯುಕ್ತ ಎಡಿಜಿಪಿ ವಿರುದ್ಧ ಆಕ್ರೋಶ

ಹಗರಣದ ತನಿಖಾಧಿಕಾರಿಯೇ ಕಡುಭ್ರಷ್ಟ ಎಂದ ಬಿಜೆಪಿ- ಜೆಡಿಎಸ್‌

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲಿರುವ ಮುಡಾ ಅಕ್ರಮದ ಆರೋಪ ಈಗ ಈ ಹಗರಣವನ್ನು ತನಿಖೆ ಮಾಡುವ ಲೋಕಾಯುಕ್ತದ ಮೇಲೂ ತಿರುಗಿರುವುದು ವಿಪರ್ಯಾಸ. ಲೋಕಾಯುಕ್ತ ಎಸ್​ಐಟಿ ಎಡಿಜಿಪಿ, ಹಿರಿಯ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿಯವರನ್ನು ಹಂದಿಗೆ ಹೋಲಿಕೆ ಮಾಡಿ ಹೇಳಿಕೆ ನೀಡಿರುವುದು ಜೆಡಿಎಸ್‌ ಮತ್ತು ಬಿಜೆಪಿ ನಾಯಕರನ್ನು ಕೆರಳಿಸಿದ್ದು, ಈ ಅಧಿಕಾರಿಯ ವಿರುದ್ಧವೇ ಸಾಲು ಸಾಲು ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಾರೆ.
ತನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಎಚ್‌.ಡಿ ಕುಮಾರಸ್ವಾಮಿ ಅವರನ್ನು ಹಂದಿಗೆ ಹೋಲಿಸಿ ಚಂದ್ರೇಖರ್‌ ನಿನ್ನೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಜೆಡಿಎಸ್​, ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಸ್ವತಃ ಕುಮಾರಸ್ಬಾಮಿ ತಿರುಗೇಟು ನೀಡಿದ್ದಾರೆ. ಜೆಡಿಎಸ್ ಘಟಕ ಸಹ ಚಂದ್ರಶೇಖರ್ ವಿರುದ್ಧ ಹೊಸ ಗಂಭೀರ ಆರೋಪವನ್ನು ಮಾಡಿದೆ.

ಕೇಂದ್ರ ಸಚಿವರ ಕುರಿತು ಕೀಳುಮಟ್ಟದ ಪದ ಬಳಸಿರುವುದು ಅಕ್ಷಮ್ಯ. ಎಂ.ಚಂದ್ರಶೇಖರ್ ನೀವೊಬ್ಬ ಐಪಿಎಸ್ ಅಧಿಕಾರಿಯಾಗಿರಲು ಅನರ್ಹ. 20 ಕೋಟಿಗೆ ಬೇಡಿಕೆ ಇಟ್ಟಿದ್ದ ಕಡುಭ್ರಷ್ಟ ಅಧಿಕಾರಿ ನೀವೇ ಅಲ್ಲವೇ? ಭೂ ವ್ಯವಹಾರವೊಂದರಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಡುಭ್ರಷ್ಟ ಅಧಿಕಾರಿ. ಈ ಸಂಬಂಧ ನಿಮ್ಮ ವಿರುದ್ಧ ಇನ್ಸ್​ಪೆಕ್ಟರ್ ಒಬ್ಬರು ದೂರು ನೀಡಿದ್ದಾರೆ. ಬಹುಮಹಡಿ ವಾಣಿಜ್ಯ ಕಟ್ಟಡ ಎಷ್ಟು ಕೋಟಿ ಲಂಚ ಪಡೆದು ಕಟ್ಟುತ್ತಿದ್ದೀರಿ. ಬೆಂಗಳೂರಿನಲ್ಲಿ ನಿಮ್ಮ ಪತ್ನಿ ಹೆಸರಲ್ಲಿ ನಿರ್ಮಿಸುತ್ತಿರುವ ಬಹುಮಹಡಿ ಕಟ್ಟಡ. ರಾಜಕಾಲುವೆ ಮೇಲೆ ನಿರ್ಮಿಸುತ್ತಿರುವ ಬಹುಮಹಡಿಯ ವಾಣಿಜ್ಯ ಕಟ್ಟಡ, ಕೆರೆ ಒತ್ತುವರಿ ಮಾಡಿಕೊಂಡ ಅಕ್ರಮಗಳ ಬಗ್ಗೆ ತನಿಖೆ ನಡೆಯಬೇಕಲ್ಲವೇ? ಎಂದು ಗಂಭೀರ ಆರೋಪ ಮಾಡಿದೆ.































 
 

ಕುಮಾರಸ್ವಾಮಿಯನ್ನು ಹಂದಿಗೆ ಹೋಲಿಕೆ ಮಾಡಿದ್ದಕ್ಕೆ ಐಪಿಎಸ್​ ಅಧಿಕಾರಿ ಎಂ.ಚಂದ್ರಶೇಖರ್ ವಿರುದ್ಧ ಜೆಡಿಎಸ್​ ಕಿಡಿಕಾರಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್, ಕಳ್ಳನ ಮನಸ್ಸು ಹುಳ್ಳಗೆ. ಎಂ.ಚಂದ್ರಶೇಖರ್​ ನಿಮ್ಮ ಮೇಲಿನ ಆರೋಪಗಳು ನಿಜವಲ್ಲವಾದರೆ ಕಾನೂನಿನಡಿಯಲ್ಲಿ ನೀವು ಉತ್ತರ ನೀಡಬಹುದಿತ್ತು. ಅದನ್ನು ಬಿಟ್ಟು ನೀವೊಬ್ಬ ಐಪಿಎಸ್ ಅಧಿಕಾರಿ ಎಂಬುದನ್ನು ಮರೆತು ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿಯವರ ವಿರುದ್ಧ ಹತಾಶೆ. ಸಿಟ್ಟು, ಆಕ್ರೋಶದಿಂದ ಕೀಳುಮಟ್ಟದ ಪದಗಳನ್ನು ಬಳಸಿ ಉತ್ತರಿಸಿದ್ದೀರಿ. ನಿಮ್ಮ ಭ್ರಷ್ಟಾಚಾರ ದಾಖಲೆ ಸಮೇತ ಬಯಲು ಮಾಡಿದ್ದು ಅಪರಾಧವೇ? ಎಂದು ಪ್ರಶ್ನಿಸಿದೆ.

ಲೋಕಾಯುಕ್ತ ವಿಶೇಷ ತನಿಖಾ ದಳದ ಎಡಿಜಿಪಿಯಾಗಿರುವ ಎಂ.ಚಂದ್ರಶೇಖರ್ ಓರ್ವ ಭ್ರಷ್ಟ ಅಧಿಕಾರಿ. ಈತನ ವಿರುದ್ಧ ಹಲವು ದೂರುಗಳು ದಾಖಲಾಗಿದ್ದು. ಆರೋಪಪಟ್ಟಿ ಕೂಡ ಸಲ್ಲಿಕೆಯಾಗಿವೆ. ಹಲವು ಅಪರಾಧ ಮಾಡಿರುವ ಇಂತಹ ಕಳಂಕಿತ ಅಧಿಕಾರಿಗಳಿಂದ ಮುಕ್ತ, ನ್ಯಾಯ ಸಮ್ಮತ, ಪಾರದರ್ಶಕ ತನಿಖೆ ಅಸಾಧ್ಯ. ಕೀಳುಮಟ್ಟದ ಪದ ಬಳಸಿರುವ ಭ್ರಷ್ಟ ಅಧಿಕಾರಿ ವಿರುದ್ಧ ಕ್ರಮ ಜರುಗಿಸಿ ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಅವರೇ. ಎಂ.ಚಂದ್ರಶೇಖರ್ ಅಕ್ರಮಗಳ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು/ಕೇಂದ್ರ ಗೃಹ ಸಚಿವಾಲಯ ಈ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳಬೇಕು ಟ್ವೀಟ್ ಮೂಲಕ ಜೆಡಿಎಸ್​ ಘಟಕ ಆಗ್ರಹಿಸಿದೆ.

ಐಪಿಎಸ್ ಅಧಿಕಾರಿ ಚಂದ್ರಶೇಖರ್​ ಹೇಳಿಕೆಗೆ ಇಂದು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಉತ್ತರ ಕೊಡಬೇಕು. ವಿಷಯ ಕ್ರೋಡೀಕರಿಸದೆ ಮಾತಾಡಲ್ಲ ನಾನು. ಆ ಲೆಟರ್ ಚೆನ್ನಾಗಿ ಪ್ರಿಪೇರ್ ಮಾಡಿದ್ದಾರೆ. ನಿನ್ನೆ ಸಂಜೆ ಎಲ್ಲಿ ಹೋಗಿದ್ರು ಅವರು ಅದು ಗೊತ್ತಿದೆ. ಯಾವ ರೀತಿ ಲೆಟರ್ ರೆಡಿ ಮಾಡಬೇಕೊ ಆ ರೀತಿ ಮಾಡಿ ಬಿಟ್ಟಿದ್ದಾರೆ ಎಂದರು.

ನಾನು ದಾಖಲೆ ಇಟ್ಕೊಂಡೆ ನಿನ್ನೆ ಮಾತಾಡಿದ್ದೆ. ಹಿಮಾಚಲ ಪ್ರದೇಶ ಕೇಡರ್ ಅಧಿಕಾರಿ 25 ವರ್ಷಗಳಿಂದ ಇಲ್ಲಿದ್ದಾರೆ. ಯಾರ್ಯಾರನ್ನು ಹಿಡಿದು ಇಲ್ಲಿಗೆ ಬಂದ್ರು ಅಂತ ಗೊತ್ತಿದೆ. ಅವರ ಬಗ್ಗೆ ಮಾತಾಡಿ ಅವರನ್ನು ಯಾಕೆ ದೊಡ್ಡವರಾಗಿ ಮಾಡಲಿ. ಈ ತರದ ಭಾಷೆ ಬಳಕೆ ಅವರ ಸಂಸ್ಕೃತಿ ತೋರಿಸುತ್ತೆ. ಯಾರ್ಯಾರ ಜತೆ ಇವರ ಸಂಬಂಧ‌ ಇದೆ ಗೊತ್ತಿಲ್ವಾ? ಒಬ್ಬ ಕೇಂದ್ರದ ಮಂತ್ರಿ ಜತೆ ಹೇಗೆ ಮಾತಾಡಬೇಕು ಎಂದು ಇವರಿಗೆ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top