ಆಟೋಬಯೋಗ್ರಾಫಿಗಳ ಅದ್ಭುತ ಪ್ರಪಂಚ

ಸಾಹಿತ್ಯ ಲೋಕದಲ್ಲಿ ಆತ್ಮಚರಿತ್ರೆಗಳಿಗೆ ಇದೆ ವಿಶೇಷ ಸ್ಥಾನ

(ನಿನ್ನೆಯ ಲೇಖನದ ಮುಂದುವರಿದ ಭಾಗ)
ಸಾಹಿತ್ಯ ಪ್ರಪಂಚದಲ್ಲಿ ಆತ್ಮಚರಿತ್ರೆಗಳಿಗೆ ವಿಶೇಷ ಸ್ಥಾನ ಇದೆ. ಇಂದು ಸಾವಿರಾರು ಇಂತಹ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅವುಗಳ ನಿರಂತರ ಅಧ್ಯಯನದಿಂದ ನಮ್ಮ ಬದುಕಿನಲ್ಲಿ ಒಂದಿಷ್ಟು ಪರಿವರ್ತನೆ ತರಲು ಸಾಧ್ಯವಿದೆ ಅನ್ನುವುದು ನನ್ನ ಖಚಿತ ಅಭಿಪ್ರಾಯ.

ಆದರೆ ಪುಸ್ತಕಗಳ ಆಯ್ಕೆಯಲ್ಲಿ ನಾವು ಒಂದಿಷ್ಟು ಎಚ್ಚರಿಕೆ ತೆಗೆದುಕೊಳ್ಳಬೇಕು ಎನ್ನುವುದು ಮಾತ್ರ ನನ್ನ ಕಾಳಜಿ. ಇಂದು ಎಷ್ಟೋ ದುಡ್ಡಿದ್ದವರು ತಮ್ಮನ್ನು ಇಂದ್ರ ಚಂದ್ರ ಎಂದು ಹೊಗಳಿಸಿಕೊಂಡು ಯಾರ್ಯಾರ ಕೈಯ್ಯಲ್ಲಿ ಪುಸ್ತಕಗಳನ್ನು ಬರೆಸುವವರಿದ್ದಾರೆ. ಅದರಲ್ಲಿ ಇರುವುದು ಉತ್ಪ್ರೇಕ್ಷೆಯ ಸಾಲುಗಳು. ಅವುಗಳನ್ನು ಓದುವುದರಿಂದ ಏನೂ ಪ್ರಯೋಜನ ಇಲ್ಲ.































 
 

ನಿನ್ನೆ ಆರು ಶ್ರೇಷ್ಠವಾದ ಆತ್ಮಚರಿತ್ರೆಯ ಪುಸ್ತಕಗಳ ಬಗ್ಗೆ ಬರೆದಿದ್ದೆ. ಇಂದು ಇನ್ನೂ ಕೆಲವು
ಆಟೋಬಯೋಗ್ರಾಫಿಗಳ ವಿವರ ಇಲ್ಲಿದೆ. ಇವು ನಾನು ಓದಿರುವ ಅತ್ಯುತ್ತಮ ಪುಸ್ತಕಗಳು.

7) ಹೋರಾಟದ ಹಾದಿ – ಪ್ರೊ. ಎಚ್. ನರಸಿಂಹಯ್ಯ

‘ಸಿಂಪಲ್ ಲಿವಿಂಗ್ ಹೈ ಥಿಂಕಿಂಗ್’ ಅರ್ಥವು ನಮಗಾಗಬೇಕಾದರೆ ಈ ಪುಸ್ತಕವನ್ನು ನಾವು ಓದಬೇಕು. ಇದು ಬೆಂಗಳೂರು ವಿವಿಯ ಉಪಕುಲಪತಿಗಳು, ಪ್ರಸಿದ್ಧ ವಿಜ್ಞಾನಿ, ಸ್ವಾತಂತ್ರ್ಯ ಹೋರಾಟಗಾರ ಎಲ್ಲವೂ ಆಗಿದ್ದ ಪ್ರೊ. ಎಚ್. ನರಸಿಂಹಯ್ಯ ಅವರ ಪುಸ್ತಕ. ಅಷ್ಟು ದೊಡ್ಡ ಹುದ್ದೆಯಲ್ಲಿ ಇದ್ದರೂ ಅವರು ವಿವಿಯ ಆವರಣದಲ್ಲಿ ಒಂದು ಸಣ್ಣ ಕೊಠಡಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದವರು. ನಡೆದುಕೊಂಡೇ ಓಡಾಡುತ್ತಿದ್ದರು. ಗಾಂಧಿವಾದಿ ಆಗಿದ್ದರಿಂದ ಎಂದಿಗೂ ಖಾದಿ ತೊಡುತ್ತಿದ್ದರು. ಅವರು ತಾನು ನಂಬಿಕೊಂಡು ಬಂದ ಮೌಲ್ಯಗಳ ಜೊತೆಗೆ ಕೊನೆಯವರೆಗೂ ರಾಜಿ ಮಾಡಿಕೊಳ್ಳಲೇ ಇಲ್ಲ. ಇದಕ್ಕೆ ಸಂಬಂಧ ಪಟ್ಟ ನೂರಾರು ಘಟನೆಗಳು ಈ ಪುಸ್ತಕದಲ್ಲಿ ಇವೆ.
ಹಾಗೆಯೇ ಜನರ ಮೌಢ್ಯಗಳ ವಿರುದ್ಧ ಅವರು ಮಾಡಿದ್ದ ಜಾಗೃತಿಯ ಕಾರ್ಯಕ್ರಮಗಳು ತುಂಬ ರೋಚಕವಾಗಿವೆ. ಉದಾಹರಣೆಗೆ ಸಂಪೂರ್ಣ ಸೂರ್ಯಗ್ರಹಣ ಇದ್ದಾಗ ಮೈದಾನಕ್ಕೆ ಬಂದು ಉಪ್ಪಿಟ್ಟು ಮಾಡಿ ತಿಂದದ್ದು ಕೂಡ ಇದೆ.

8) PLAYING AT MY WAY – ಸಚಿನ್ ತೆಂಡೂಲ್ಕರ್

ನನಗೆ ಅತಿ ಹೆಚ್ಚು ಪ್ರೇರಣೆ ಕೊಟ್ಟ ಆತ್ಮಚರಿತ್ರೆ ಇದು. ಸಾಮಾನ್ಯ ಮಧ್ಯಮ ವರ್ಗದ ಹುಡುಗನೊಬ್ಬ ತನ್ನ 9ನೇ ವರ್ಷದ ಹುಟ್ಟುಹಬ್ಬಕ್ಕೆ ಅಜ್ಜ ಕೊಟ್ಟ ಕ್ರಿಕೆಟ್ ಬ್ಯಾಟ್ ಹಿಡಿದುಕೊಂಡು ಫೋಟೊ ತೆಗೆಸಿಕೊಂಡದ್ದು, ಅದು ಅವರ ಭವಿಷ್ಯಕ್ಕೆ ಮುನ್ನುಡಿ ಬರೆದದ್ದು, ತನ್ನ ಕ್ರಿಕೆಟ್ ಗುರು ರಮಾಕಾಂತ್ ಆಚರೇಕರ್ ಅವರ ಬಗ್ಗೆ ಸಚಿನ್ ಕೊನೆಯವರೆಗೂ ಹೊಂದಿದ ಪ್ರೀತಿ, ತನಗೆ ವಿದಾಯ ಕೋರಿದ ಕ್ರಿಕೆಟ್ ಪಂದ್ಯದಲ್ಲಿ ಅವರು ಮಾಡಿದ ಕೃತಜ್ಞತಾಪೂರ್ವಕ ಮಾತುಗಳು ಇವೆಲ್ಲವೂ ಈ ಪುಸ್ತಕದಲ್ಲಿ ಸ್ಥಾನ ಪಡೆದಿವೆ. ತನ್ನ ಗತಿಸಿದ ತಂದೆ, ಪ್ರೀತಿ ಧಾರೆಯೆರೆದ ಅಮ್ಮ, ಕ್ರಿಕೆಟ್ ಪ್ರೀತಿಗೆ ಒತ್ತಾಸೆಯಾಗಿ ನಿಂತ ಅಣ್ಣ, ತನ್ನ ಕನಸುಗಳಿಗೆ ಬೆಂಬಲವಾಗಿ ನಿಂತ ಪತ್ನಿ ಅಂಜಲಿ ಇವರೆಲ್ಲರ ಬಗ್ಗೆ ಸಚಿನ್ ಪುಸ್ತಕದಲ್ಲಿ ಭಾವುಕವಾದ ಉಲ್ಲೇಖಗಳು ಇವೆ. ಈ ಪುಸ್ತಕ ಎಲ್ಲರೂ ಓದಬೇಕು ಎಂದು ನನ್ನ ವಿನಂತಿ. ಅದರಲ್ಲಿಯೂ ಸಚಿನ್ ಕ್ರಿಕೆಟ್ ಜೀವನದ ಶಿಖರದಲ್ಲಿ ಇದ್ದಾಗ ತೀವ್ರವಾಗಿ ಕಾಡಿದ ಟೆನ್ನಿಸ್ ಎಲ್ಬೊ ಸಮಸ್ಯೆ, ಅದರಿಂದಾಗಿ ಪಟ್ಟ ನೋವು, ಆಸ್ಪತ್ರೆಗೆ ಸೇರಿದ್ದು, ತನ್ನ ವಿಲ್ ಪವರ್ ಬಳಸಿಕೊಂಡು ಮತ್ತೆ ಬೌನ್ಸ್ ಬ್ಯಾಕ್ ಮಾಡಿದ್ದು, ಮುಂದೆ ದಾಖಲೆಗಳ ಮೇಲೆ ದಾಖಲೆಗಳನ್ನು ಮಾಡಿದ್ದು…ಇವೆಲ್ಲವೂ ಸ್ಫೂರ್ತಿದಾಯಕ ಅಂಶಗಳು.

9) MY COUNTRY MY LIFE (ನನ್ನ ದೇಶ ನನ್ನ ಜೀವನ) – ಲಾಲ್ ಕೃಷ್ಣ ಅಡ್ವಾಣಿ

ಭಾರತದ ಮಾಜಿ ಉಪಪ್ರಧಾನಿ, ಮಾಜಿ ಗೃಹಮಂತ್ರಿ ಎಲ್.ಕೆ.ಆಡ್ವಾಣಿ ಅವರ ಬೃಹತ್ ಗಾತ್ರದ ಆತ್ಮಚರಿತ್ರೆ ಇದು. ಆಡ್ವಾಣಿ ಅವರ ಚರಿತ್ರೆ ಅಂದರೆ ಸುಮಾರು 90 ವರ್ಷದ ಭಾರತದ ಚರಿತ್ರೆ ಕೂಡ ಹೌದು. ಆಡ್ವಾಣಿ ಹೇಗೆ ತನ್ನ ಮೇಲೆ ಎಸೆಯಲ್ಪಟ್ಟ ಕಲ್ಲುಗಳಿಂದ ಬೃಹತ್ ಆದ ಸೌಧವನ್ನು ಕಟ್ಟಿದರು ಅನ್ನೋದು ಎಲ್ಲರಿಗೂ ಪ್ರೇರಣೆ ಕೊಡುವ ಅಂಶ. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಸೆರೆಯಾದ ಆಡ್ವಾಣಿ ಜೈಲಿನ ಒಳಗೆ ಕೂಡ ಹೇಗೆ ಅಧ್ಯಯನ ಮಾಡುತ್ತಿದ್ದರು, ಅವರು ಮಾಡಿದ ಬೃಹತ್ ರಥಯಾತ್ರೆ, ತನ್ನ ಮೇಲೆ ಬಂದ 1992ರ ಅಯೋಧ್ಯೆಯ ವಿವಾದಿತ ಕಟ್ಟಡದ ಕೆಡಹುವಿಕೆಯ ಆರೋಪವನ್ನು ಅವರು ಹೇಗೆ ಗೆದ್ದರು ಅನ್ನೋ ಸಂಗತಿಗಳು ಈ ಪುಸ್ತಕದಲ್ಲಿ ಇವೆ. NATION FIRST ಎಂಬುವುದು ಈ ಪುಸ್ತಕದ ಬಾಟಮ್ ಲೈನ್. ಕನ್ನಡ ಅನುವಾದವೂ ಸೊಗಸಾಗಿದೆ. ಆಡ್ವಾಣಿ ಬಗ್ಗೆ ಮಾಜಿ ಪ್ರಧಾನಿ ವಾಜಪೇಯಿ ಬರೆದಿರುವ ಮುನ್ನುಡಿ ನೀವೊಮ್ಮೆ ಓದಬೇಕು.

10) ಹುಚ್ಚು ಮನಸ್ಸಿನ ಹತ್ತು ಮುಖಗಳು – ಶಿವರಾಮ ಕಾರಂತ

ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡದ ಮೇರು ಸಾಹಿತಿ ಕೋಟ ಶಿವರಾಮ ಕಾರಂತರ ಆತ್ಮಚರಿತ್ರೆ ಇದು. ಇದರಲ್ಲಿ ಕೂಡ ಅತ್ಯಂತ ಹೆಚ್ಚು ಅಧ್ಯಾಯಗಳು ಇವೆ. ಕಾರಂತರು ಸಾಹಿತ್ಯದ ವಿವಿಧ ಕ್ಷೇತ್ರದಲ್ಲಿ ಮಾಡಿದ ವಿಶೇಷ ಪ್ರಯೋಗಗಳು, ಮೌಢ್ಯವನ್ನು ವಿರೋಧ ಮಾಡಿ ಹಲವರ ಸಿಟ್ಟಿಗೆ ಒಳಗಾದದ್ದು, ಪರಿಸರ ಮಾಲಿನ್ಯ ಉಂಟುಮಾಡುವ ಕೈಗಾರಿಕೆಗಳ ವಿರುದ್ಧ ಅವರು ಸಂಘಟನೆ ಮಾಡಿದ ನೂರಾರು ಜನಾಂದೋಲನ ಮತ್ತು ಜನಜಾಗೃತಿ ಕಾರ್ಯಕ್ರಮಗಳು, 60 ವರ್ಷ ದಾಟಿದ ನಂತರ ಯಕ್ಷಗಾನ ಕಲಿತದ್ದು, ಅದನ್ನು ರೂಪಕಗಳಾಗಿ ಬದಲಾಯಿಸಿ ಯಕ್ಷಗಾನ ತಂಡ ಕಟ್ಟಿ ವಿದೇಶಗಳಿಗೆ ಕೂಡ ಹೋದದ್ದು… ಇಂತಹ ಘಟನೆಗಳು ಓದುಗರನ್ನು ಬೆರಗುಗೊಳಿಸುತ್ತವೆ. ಶಿವರಾಮ ಕಾರಂತರು ಕೇವಲ ಸಾಹಿತಿ ಮಾತ್ರವಲ್ಲ ಎಲ್ಲ ರಂಗಗಳಲ್ಲಿಯೂ ಕೆಲಸ ಮಾಡಿದವರು. ಆದ್ದರಿಂದ ಅವರ ಈ ಆತ್ಮಚರಿತ್ರೆ ತುಂಬಾ ವಿಸ್ತಾರವಾಗಿದೆ. ಹಾಗೆಯೇ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಸತ್ಯವನ್ನು ಹೇಳಲು ಗಟ್ಸ್ ಬೇಕು, ಸುಳ್ಳನ್ನು ಹೇಳಲು ಅಲ್ಲ ಎನ್ನುವುದು ಈ ಪುಸ್ತಕದ ಬಾಟಮ್ ಲೈನ್.

12) REPORTER AT LARGE – ಎಂ ವಿ ಕಾಮತ್

ಭಾರತೀಯ ಪತ್ರಿಕಾರಂಗದ ಭೀಷ್ಮ, ಪದ್ಮಭೂಷಣ ಎಂ.ವಿ ಕಾಮತರ ಸುಂದರ ಆತ್ಮಚರಿತ್ರೆ ಇದು. ಪತ್ರಿಕಾರಂಗದಲ್ಲಿ ಆರಂಭಿಕ ಹೆಜ್ಜೆ ಇಡುತ್ತಿರುವ ವಿದ್ಯಾರ್ಥಿಗಳು ಓದಲೇಬೇಕಾದ ಪುಸ್ತಕ ಇದು. ಅವರು ಭಾರತದ ಸ್ವಾತಂತ್ರ್ಯದ ಮೊದಲ ತ್ರಿವರ್ಣ ಧ್ವಜಾರೋಹಣವನ್ನು ನೋಡಿ ಅದರ ವರದಿ ಮಾಡಿದವರು. ದೇಶ, ವಿದೇಶ ಸುತ್ತಿದವರು. ಪ್ರಧಾನಿ ಇಂದಿರಾ ಗಾಂಧಿ, ನೆಹರೂ, ಅಂಬೇಡ್ಕರ್, ಜಯಪ್ರಕಾಶ್ ನಾರಾಯಣ್ ಮೊದಲಾದವರ ಸಂದರ್ಶನ ಮಾಡಿದ ಕೀರ್ತಿ ಅವರದ್ದು. ಮುಂದೆ ಇಡೀ ಭಾರತದ ಎಲ್ಲ ಟಿವಿ ಚಾನೆಲ್ ಮತ್ತು ರೇಡಿಯೋಗಳ ಒಡೆತನ ಹೊಂದಿರುವ ‘ಪ್ರಸಾರ ಭಾರತಿ’ ಸಂಸ್ಥೆಯ ಅಧ್ಯಕ್ಷರಾಗಿ ಅವರು ಮಾಡಿದ ಸಾಧನೆಯ ನೂರಾರು ನಿದರ್ಶನಗಳು ಈ ಪುಸ್ತಕದಲ್ಲಿವೆ. ಇಂಗ್ಲೀಷ್ ಸರಳವಾಗಿದೆ.

13) ಇಡ್ಲಿ, ಆರ್ಕಿಡ್ ಮತ್ತು ಆತ್ಮಬಲ – ವಿಠ್ಠಲ ವಿ. ಕಾಮತ್

ಮುಂಬಯಿಯ ರಸ್ತೆಗಳಲ್ಲಿ ತಳ್ಳುಗಾಡಿಯ ಮೂಲಕ ಇಡ್ಲಿ ಮಾರುತ್ತಿದ್ದ ಸಣ್ಣ ಹುಡುಗ ದೆಹಲಿಯಲ್ಲಿ ಆರ್ಕಿಡ್ ಎಂಬ ಹೆಸರಿನ ಏಷ್ಯಾದ ಅತ್ಯಂತ ದೊಡ್ಡ ಹೋಟೆಲಿನ ಸ್ಥಾಪಕ ಆದದ್ದು ಹೇಗೆ? ಅದರ ಹಿಂದೆ ಇದ್ದ ಹೋರಾಟ, ಪರಿಶ್ರಮ, ಬದ್ಧತೆ ಯಾವುದು? ದೇಶ, ವಿದೇಶಗಳಲ್ಲಿ ಇಂದು ನೂರಾರು ಹೊಟೇಲುಗಳ ಸಾಮ್ರಾಜ್ಯ ಅವರು ಹೇಗೆ ಕಟ್ಟಿದರು? ಮೊದಲಾದ ಪ್ರಶ್ನೆಗಳಿಗೆ ಉತ್ತರವನ್ನು ಈ ಪುಸ್ತಕದ ಮೂಲಕ ಅವರು ತುಂಬ ಚೆನ್ನಾಗಿ ದಾಖಲಿಸಿದ್ದಾರೆ. ಪ್ರತಿಯೊಬ್ಬ ಉದ್ಯಮ ಕಟ್ಟುವ ಆಕಾಂಕ್ಷಿಗಳು ಓದಲೇಬೇಕಾದ ಪುಸ್ತಕ ಇದು. ಈ ಪುಸ್ತಕ ಭಾರತದ ಇತರ ಭಾಷೆಗಳಿಗೆ ಅನುವಾದ ಕೂಡ ಆಗಿದೆ.

ಹಾಗೆಯೇ ಐಎಎಸ್, ಐಪಿಎಸ್ ಕನಸು ಹೊಂದಿದ್ದವರು ಭಾರತದ ಮೊಟ್ಟಮೊದಲ ಐಪಿಎಸ್ ಕಿರಣ್ ಬೇಡಿ ಅವರ ಪುಸ್ತಕ ‘DARE TO BE GREAT’ ಓದಬೇಕು. ಹಾಗೆಯೇ ವಿಶ್ವಕಪ್ ಗೆದ್ದ ಭಾರತದ ಮೊದಲ ಕ್ಯಾಪ್ಟನ್ ಕಪಿಲ್ ದೇವ್ ಅವರ ಪುಸ್ತಕ STRAIGHT FROM THE HEART ಕೂಡ ತುಂಬಾ ಉತ್ತಮವಾಗಿದೆ.

ಭರತವಾಕ್ಯ

ಲೆಜೆಂಡ್ಸ್ ಮಾತ್ರ ಆತ್ಮಚರಿತ್ರೆ ಬರೆಯಬೇಕು ಎನ್ನುವುದು ಒಂದು ಭ್ರಮೆ. ಒಬ್ಬ ಜನಸಾಮಾನ್ಯನ ಬದುಕಿನಿಂದ ಕೂಡ ನಾವು ಸಾಕಷ್ಟು ಅಂಶಗಳನ್ನು ಕಲಿಯಬಹುದು. ಆದ್ದರಿಂದ ಎಲ್ಲರೂ ತಮ್ಮ ಬದುಕಿನ ಕಥೆಗಳನ್ನು ಬರೆಯಬಹುದು. ಈ ಲೇಖನದ ನನ್ನ ಮುಖ್ಯ ಉದ್ದೇಶ ಏನೆಂದರೆ ಪ್ರತಿಯೊಬ್ಬರೂ ಆತ್ಮಚರಿತ್ರೆಯ ಪುಸ್ತಕಗಳನ್ನು ಓದಲು ಆರಂಭಿಸಿ ಎಂಬುದು.

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top