ಕಸ್ತೂರಿ ರಂಗನ್‌ ವರದಿ ಆತಂಕ ಸದ್ಯ ದೂರ

ವರದಿ ಜಾರಿಗೊಳಿಸದಿರಲು ಸಂಪುಟ ಸಭೆ ತೀರ್ಮಾನ

ಬೆಂಗಳೂರು : ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ವಾಸವಾಗಿರುವ ಜನರ ಆತಂಕಕ್ಕೆ ಕಾರಣವಾಗಿದ್ದ ಕಸ್ತೂರಿ ರಂಗನ್‌ ವರದಿಯನ್ನು ಜಾರಿಗೊಳಿಸದಿರಲು ಸರಕಾರ ನಿರ್ಧರಿಸಿದೆ. ಈ ಮಳೆಗಾಲದಲ್ಲಿ ಹಲವೆಡೆ ಭುಕುಸಿತ ಸಂಭವಿಸಿ ಅಪಾರ ಹಾನಿ ಉಂಟಾದ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟ ಪ್ರದೇಶ ಸಂರಕ್ಷಿಸುವ ಸಲುವಾಗಿ ಕಸ್ತೂರಿ ರಂಗನ್‌ ವರದಿ ಕಟ್ಟುನಿಟ್ಟಾಗಿ ಜಾರಿಯಾಗಬೇಕೆಂಬ ಕೂಗು ಒಂದೆಡೆಯಿಂದ ಕೇಳಿಬಂದಿತ್ತು. ಅದರಲ್ಲೂ ವಯನಾಡಿನ ಭೀಕರ ಭೂಕುಸಿತ ದುರಂತ ಬಳಿಕ ಪಶ್ಚಿಮ ಘಟ್ಟದ ಸುರಕ್ಷತೆ ಕುರಿತು ವ್ಯಾಪಕ ಕಳವಳ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ವರದಿ ಜಾರಿಗೊಳಿಸಲು ಮುಂದಾದಾಗ ಘಟ್ಟ ಪ್ರದೇಶಗಳಲ್ಲಿ ವಾಸವಾಗಿರುವ ಜನರು ವಿರೋಧ ವ್ಯಕ್ತಪಡಿಸತೊಗಿದ್ದಾರೆ.
ಉಡುಪಿ, ದಕ್ಷಿಣ ಕನ್ನಡ ಸೇರಿ ರಾಜ್ಯದ 11 ಜಿಲ್ಲೆಗಳಲ್ಲಿ ಪಶ್ಚಿಮ ಘಟ್ಟ ಹಾದುಹೋಗಿದೆ. ಈ ಭಾಗದ ಜನರು ವರದಿಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಕರಾವಳಿ ಮತ್ತು ಮಲೆನಾಡಿನ ಶಾಸಕರು, ಸಂಸದರು ಕೂಡ ಕಸ್ತೂರಿ ರಂಗನ್‌ ವರದಿಯನ್ನು ಯಥಾವತ್‌ ಜಾರಿಗೊಳಿಸಿದರೆ ಸಾವಿರಾರು ಜನರು ನಿರಾಶ್ರಿತರಾಗುವ ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೆಲ್ಲ ಪರಿಗಣಿಸಿ ಸರಕಾರ ನಿನ್ನೆ ನಡೆದ ಸಂಪುಟ ಸಭೆಯಲ್ಲಿ ವರದಿಯನ್ನು ಜಾರಿಗೊಳಿಸದಿರಲು ತೀರ್ಮಾನಿಸಿ ಈ ಕುರಿತಾದ ಶಿಫರಸ್ಸನ್ನು ಕೇಂದ್ರಕ್ಕೆ ಕಳಹಿಸಲು ನಿರ್ಧರಿಸಿದೆ. ಹಿಂದಿನ ಬಿಜೆಪಿ ಸರ್ಕಾರವೂ ವರದಿ ಜಾರಿಯನ್ನು ವಿರೋಧಿಸಿತ್ತು.
ಕರ್ನಾಟಕದಲ್ಲಿ ಹಾದು ಹೋಗಿರುವ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಹನ್ನೊಂದು ಜಿಲ್ಲೆಗಳ ಜನರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕಸ್ತೂರಿ ರಂಗನ್‌ ವರದಿಯನ್ನು ಅನುಷ್ಠಾನಗೊಳಿಸದೆ ಸಂಪೂರ್ಣವಾಗಿ ವಿರೋಧಿಸುವ ನಿರ್ಧಾರಕ್ಕೆ ಬರಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಕಸ್ತೂರಿ ರಂಗನ್‌ ವರದಿಯನ್ನು ಸಂಪೂರ್ಣವಾಗಿ ವಿರೋಧಿಸಲು ನಿರ್ಣಯಿಸಿದೆ.
ಕಸ್ತೂರಿ ರಂಗನ್‌ ವರದಿ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿರುವುದರಿಂದ ಅಭಿಪ್ರಾಯ ತಿಳಿಸುವಂತೆ ಕರ್ನಾಟಕ ಸರ್ಕಾರವನ್ನು ಕೋರಿತ್ತು. 60 ದಿನಗಳಲ್ಲಿ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಲ್ಲಿಸುವಂತೆ ರಾಜ್ಯಗಳಿಗೆ ಸೂಚಿಸಿದ್ದರ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ನಿರ್ಧಾರವನ್ನು ತಿಳಿಸಲಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದ್ದಾರೆ.
ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಆಗಬಹುದಾದ ತೊಂದರೆ ಗಮನದಲ್ಲಿಟ್ಟುಕೊಂಡು ಈ ನಿರ್ಣಯ ಆಗಿದೆ ಎಂದು ಪಾಟೀಲ್‌ ಹೇಳಿದ್ದಾರೆ.
ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಾದ್ಯಂತ ಪಶ್ಚಿಮ ಘಟ್ಟಗಳ 56,825.7 ಚದರ ಕಿಲೋಮೀಟರ್‌ಗಳನ್ನು ಪರಿಸರ ಸೂಕ್ಷ್ಮ ಎಂದು ಘೋಷಿಸಲು ಕೇಂದ್ರ ಪರಿಸರ ಸಚಿವಾಲಯವು 2014ರ ಮಾರ್ಚ್‌ನಿಂದ ಆರು ಕರಡು ಅಧಿಸೂಚನೆಗಳನ್ನು ಹೊರಡಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top