ಪುತ್ತೂರು: ಉತ್ತರಕರ್ನಾಟಕದ ೧೪ ಜಿಲ್ಲೆಗಳಲ್ಲಿ ಸುಮಾರು ಮಹಿಳೆಯರನ್ನು ಕಾಡುತ್ತಿರುವ ಅನಿಷ್ಟ ಪದ್ಧತಿ ದೇವದಾಸಿ. ಈ ಸಾಕ್ಷ್ಯಚಿತ್ರದಲ್ಲಿ ಅನೇಕ ಮಹಿಳೆಯರ ನೋವನ್ನು ಸಮಾಜದ ಮುಂದೆ ತೆರೆದಿಡುವ ಪ್ರಯತ್ನ ಮಾಡಲಾಗಿದೆ. ಸರಕಾರ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅವರ ಬದುಕಿಗೆ ನೆರವಾಗುವುದೇ ಇದರ ಮೂಲ ಉದ್ದೇಶ ಎಂದು ’ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್’ಸಾಕ್ಷ್ಯಚಿತ್ರದ ನಿರ್ಮಾಪಕಿ ಡಾ. ಪೂರ್ಣಿಮಾ ರವಿ ಹೇಳಿದರು.
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ( ಸ್ವಾಯತ್ತ) ಪುತ್ತೂರು, ಮಾನವಿಕ ವಿಭಾಗ, ಕನ್ನಡ ಸಂಘ, ಲಿಟರರಿಕ್ಲಬ್, ಹಿಂದಿ ಸಂಘ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ದೇವದಾಸಿಯರ ಬದುಕಿನಕುರಿತಾದ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದ (ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್) ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದೆ 10 ವರ್ಷದ ಒಳಗಿನ ಮಕ್ಕಳನ್ನು ದೇವರ ಸೇವೆಗಾಗಿ ಸಮರ್ಪಿಸುತ್ತಿದ್ದರು. ಇದಕ್ಕೆ ಒಂದು ಗೌರವದ ಸ್ಥಾನ ಇದ್ದದ್ದನ್ನು ನಾವು ಇತಿಹಾಸದಲ್ಲಿ ಕಾಣಬಹುದು. ಆದರೆ ವರ್ಷ ಕಳೆದಂತೆ ಈ ಆಚರಣೆಯು ಅಮಾನವೀಯ ಸ್ವರೂಪವನ್ನು ಪಡೆದುಕೊಂಡು ಬಂದಿತು.1987ರಲ್ಲಿ ಕರ್ನಾಟಕ ಸರಕಾರ ದೇವದಾಸಿ ಪದ್ಧತಿಯನ್ನು ನಿಷೇಧ ಮಾಡಿದ್ದರೂ ಕೂಡ, ಇಂದು ಹಲವು ಕಡೆಗಳಲ್ಲಿ ಮರೆಯಲ್ಲಿ ಈ ಪದ್ಧತಿ ಇದೆ ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್. ಮಾತನಾಡಿ, ಶಿಕ್ಷಣ ಸಂಸ್ಥೆ ಮತ್ತು ವಿಭಾಗಗಳು ಮಾಡಬೇಕಾದ ಮುಖ್ಯವಾದ ಕೆಲಸವನ್ನು ಈ ಸಾಕ್ಷ್ಯಚಿತ್ರ ಮಾಡಿದೆ. ಸಾಮಾಜಿಕ ವ್ಯವಸ್ಥೆ ಸಮಸ್ಯೆಯಾಗಿ ಬದಲಾದದ್ದು ಹಾಗೂ ಮುಂದೆ ಏನು ಮಾಡಬೇಕು ಎಂಬ ಅರಿವನ್ನು ತಿಳಿಸಿಕೊಟ್ಟಿದೆ. ದೇವದಾಸಿ ಎಂಬುದು ನಿಷ್ಕಲ್ಮಷ ಮನಸ್ಸಿನಿಂದ ದೇವರಿಗೆ ಅರ್ಪಿಸುವುದು. ಆದರೆ ಕಾಲ ಬದಲಾದಂತೆ ಅದನ್ನು ವಕ್ರದೃಷ್ಟಿಯಿಂದ ನೋಡುವುದನ್ನು ಕಾಣಬಹುದು. ನಾವು ಇಂತಹ ಹಲವಾರು ಸಮಸ್ಯೆಗಳನ್ನು ಕಣ್ಣುತೆರೆಯುವಂತೆ ಮಾಡಿದರೆ ಒಳ್ಳೆಯ ಸಮಾಜಕಟ್ಟಲು ಸಾಧ್ಯ ಎಂದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್, ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ದುರ್ಗಾರತ್ನ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಿದ್ಯಾ ಎಸ್. ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸಂಶೀನ ಸ್ವಾಗತಿಸಿ, ಮೋಕ್ಷ ವಂದಿಸಿದರು. ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು.