ಪೋಕ್ಸೊ ಅಡಿ ಮರಣ ದಂಡನೆ ವಿಧಿಸಿದ ದೇಶದ ಮೊದಲ ಪ್ರಕರಣ
ಗುವಾಹಟಿ: ಇಲ್ಲಿನ ಸರ್ಕಾರಿ ವಸತಿ ಶಾಲೆಯೊಂದರಲ್ಲಿ 2014ರಿಂದ 2022ರ ನಡುವೆ 21 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಹಾಸ್ಟೆಲ್ ವಾರ್ಡನ್ ಯುಮ್ಕೆನ್ ಬಾಗ್ರಾ ಎಂಬಾತನಿಗೆ ಅರುಣಾಚಲ ಪ್ರದೇಶದ ವಿಶೇಷ ನ್ಯಾಯಾಲಯ ಗುರುವಾರ ಗಲ್ಲು ಶಿಕ್ಷೆ ವಿಧಿಸಿದೆ.
ಮಕ್ಕಳು ದೂರು ನೀಡಿದರೂ ಅಪರಾಧವನ್ನು ವರದಿ ಮಾಡುವಲ್ಲಿ ವಿಫಲರಾದ ಮಾಜಿ ಮುಖ್ಯಶಿಕ್ಷಕ ಸಿಂಗ್ತುಂಗ್ ಯೋರ್ಪೆನ್ ಮತ್ತು ಹಿಂದಿ ಶಿಕ್ಷಕಿ ಮಾರ್ಬೊಮ್ ನ್ಗೊಮ್ದಿರ್ ಅವರಿಗೆ ಪೋಕ್ಸೊ ಕಾಯ್ದೆ ಅಡಿ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ವಿಶೇಷ ನ್ಯಾಯಾಧೀಶರಾದ ಜಾವೆಪ್ಲು ಚೈ ತೀರ್ಪು ಪ್ರಕಟಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಮತ್ತು POCSO ಕಾಯ್ದೆ ಅಡಿಯಲ್ಲಿ ಮೂವರನ್ನು ದೋಷಿಗಳೆಂದು ಘೋಷಿಸಿದ್ದಾರೆ. ವಿದ್ಯಾರ್ಥಿಗಳು ದೂರು ನೀಡಿದರೂ ಸಹ ಶಾಲೆಯ ಖ್ಯಾತಿಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಮೌನವಾಗಿರುವಂತೆ ಕೇಳಿಕೊಂಡಿದ್ದರು ಎಂಬ ಕಾರಣಕ್ಕೆ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ.
ಈ ಕುರಿತು ಮಾತನಾಡಿರುವ 21 ಮಕ್ಕಳ ಪರ ವಕೀಲ ಓಯಾಮ್ ಬಿಂಗೆಪ್, ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿರುವುದು ಸಂತೋಷವಾಗಿದೆ. ಇದು ದೇಶದಲ್ಲಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ನೀಡಲಾದ ಮೊದಲ ಮರಣದಂಡನೆ ಪ್ರಕರಣವಾಗಿದೆ. ಇದರಲ್ಲಿ ಸಂತ್ರಸ್ತರು ಸತ್ತಿಲ್ಲ, ದೌರ್ಜನ್ಯ ಎಸಗಿದವರು ಸಾಯುತ್ತಾರೆ ಎಂದು ಹೇಳಿದ್ದಾರೆ.