ಬೆಂಬಲ ಕೊಡಿ, ನನ್ನದೇನೂ ತಪ್ಪಿಲ್ಲ ಎಂದು ಪ್ರತಿಪಾದನೆ
ಬೆಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ಎಸಗಿರುವುದು ಬಯಲಾದ ಬಳಿಕ ಹೇಗಾದರೂ ಮುಖ್ಯಮಂತ್ರಿ ಪಟ್ಟ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಸಿದ್ದರಾಮಯ್ಯ ನಿನ್ನೆ ಕೋರ್ಟ್ ತೀರ್ಪು ಹೊರಬಿದ್ದ ಬೆನ್ನಿಗೆ ಕಾಂಗ್ರೆಸ್ ಹೈಕಮಾಂಡ್‌ಗೆ ಇನ್ನೊಂದು ವರದಿ ರವಾನಿಸಿದ್ದಾರೆ. ತನಿಖೆ ಆಗಲಿ, ನಾನು ತನಿಖೆ ಎದುರಿಸುತ್ತೇನೆ. ನನಗೆ ಯಾವುದೇ ಭಯವಿಲ್ಲ. ರಾಜೀನಾಮೆ ಕೊಡದೆ ನಾನು ತನಿಖೆ ಎದುರಿಸುತ್ತೇನೆ. ನಿಮ್ಮ ಸಹಕಾರ ಬೇಕು ಎಂದು ವರದಿಯಲ್ಲಿ ಹೈಕಮಾಂಡ್‌ನ ಸಹಕಾರ ಕೇಳಿದ್ದಾರೆ.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಲು ಹೈಕೋರ್ಟ್ ಆದೇಶ ಹೊರಡಿಸಿರುವುದು ಸಿದ್ದರಾಮಯ್ಯನವರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದ್ದು, ಅವರ ರಾಜೀನಾಮೆಗೆ ಒತ್ತಾಯ ಬಲವಾಗುತ್ತಿದೆ. ಇದರ ಬೆನ್ನಲ್ಲೇ ಹೈಕಮಾಂಡ್‌ಗೆ ಸಿದ್ದರಾಮಯ್ಯ ವರದಿ ಕೊಟ್ಟಿದ್ದಾರೆ.
ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಮೂಲಕ ಕೋರ್ಟ್ ಆದೇಶದ ಬಗ್ಗೆ ಸಿಎಂ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ. ಬುಧವಾರ ಕೇರಳದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದರು. ಕಾರ್ಯಕ್ರಮ ಮುಗಿದ ಬಳಿಕ ತಮ್ಮ ಕೇಸ್ ಬಗ್ಗೆ ಸಂಪೂರ್ಣ ವಿವರಣೆ ಕೊಟ್ಟಿದ್ದಾರೆ. ಕೇಸ್ ಬಗ್ಗೆ ಮಾಹಿತಿ ಜೊತೆಗೆ ಹೈಕಮಾಂಡ್ ಸಹಕಾರ ಕೇಳಿದ್ದಾರೆ.
ಹೈಕೋರ್ಟ್ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಿದ್ಧತೆ ಮಾಡಿದ್ದೇನೆ. ಈ ಸಂಬಂಧ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತಿದ್ದೇನೆ. ಮೇಲ್ಮನವಿಯಲ್ಲಿ ನ್ಯಾಯ ಸಿಗುವ ವಿಶ್ವಾಸ ಇದೆ. ಕೇಂದ್ರ ಸರ್ಕಾರ, ಬಿಜೆಪಿ-ಜೆಡಿಎಸ್‌ನವರು ನನ್ನ ಮತ್ತು ನಮ್ಮ ಸರ್ಕಾರದ ವಿರುದ್ಧ ಷಡ್ಯಂತ್ರ ಮಾಡ್ತಿದ್ದಾರೆ.
ನಮ್ಮ ಸರ್ಕಾರವನ್ನ ಅಸ್ಥಿರಗೊಳಿಸಲು ರಾಜ್ಯಪಾಲರನ್ನು ಬಳಕೆ ಮಾಡಿಕೊಂಡಿದ್ದಾರೆ. ವಿಪಕ್ಷಗಳ ಸರ್ಕಾರ ಕೆಡವುದು ಕೇಂದ್ರದ ಅಜೆಂಡಾ. ಇದನ್ನು ರಾಜ್ಯದಲ್ಲೂ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಅವಕಾಶ ಕೊಡೋದು ಬೇಡ. ಮುಡಾ ಕೇಸ್‌ನಲ್ಲಿ ಪ್ರಾರಂಭದಲ್ಲಿ ಕೊಟ್ಟ ಬೆಂಬಲವನ್ನು ಈಗಲೂ ಕೊಡಿ.
ಮುಡಾ ಕೇಸ್‌ನಲ್ಲಿ ನನ್ನದೇನೂ ತಪ್ಪಿಲ್ಲ. ಹೀಗಾಗಿ ನನಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದಿದ್ದಾರೆ.