ಮೃತದೇಹವನ್ನು 50 ತುಂಡು ಮಾಡಿ ಫ್ರಿಜ್‌ನಲ್ಲಿಟ್ಟಿದ್ದ ಪ್ರಕರಣ
ಬೆಂಗಳೂರು : ನಗರದ ವೈಯಾಲಿಕಾವಲ್‌ನಲ್ಲಿ ನೇಪಾಳ ಮೂಲದ ಮಹಾಲಕ್ಷ್ಮಿ ಎಂಬ ವಿವಾಹಿತ ಮಹಿಳೆಯನ್ನು ಕೊಂದು ಮೃತದೇಹವನ್ನು 50ಕ್ಕೂ ಹೆಚ್ಚು ತುಂಡು ಮಾಡಿ ಫ್ರಿಜ್‌ನಲ್ಲಿ ತುಂಬಿಸಿಟ್ಟು ಹೋಗಿದ್ದ ಹಂತಕ ತನ್ನ ಹುಟ್ಟೂರಾದ ಒಡಿಶಾಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವನು ಬರೆದಿಟ್ಟಿರುವ ಡೆತ್‌ನೋಟ್ ಪೊಲೀಸರಿಗೆ ಸಿಕ್ಕಿದ್ದು, ಅದರಲ್ಲಿ ಕೊಲೆಯ ರಹಸ್ಯ ಬಹಿರಂಗವಾಗಿದೆ.
ಕಳೆದ ಸೆ.21ರಂದು ಬೆಳಕಿಗೆ ಬಂದ ಈ ಕೊಲೆ ನಗರವನ್ನು ಬೆಚ್ಚಿಬೀಳಿಸಿತ್ತು. ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಕೊಲೆಗಾರನ ಬೆನ್ನತ್ತಿದಾಗ ಕೊನೆಗೆ ಆತ ಒಡಿಶಾದವ ಮತ್ತು ಮಹಾಲಕ್ಷ್ಮಿ ನೌಕರಿ ಮಾಡುತ್ತಿದ್ದ ಕಂಪನಿಯಲ್ಲಿ ಆಕೆಯ ಮೇಲಧಿಕಾರಿಯಾಗಿದ್ದ ಮುಕ್ತಿರಂಜನ್ ರಾಯ್ ಎಂಬ ಮಾಹಿತಿ ಸಿಕ್ಕಿತ್ತು. ಈ ಸುಳಿವು ಬೆನ್ನತ್ತಿ ಬೆಂಗಳೂರು ಪೊಲೀಸರು ಒಡಿಶಾಕ್ಕೆ ಹೋಗಿದ್ದರು. ಆದರೆ ಪೊಲೀಸರು ಅಲ್ಲಿಗೆ ತಲುಪುವಷ್ಟರಲ್ಲಿ ಆರೋಪಿ ನೇಣಿಗೆ ಶರಣಾಗಿದ್ದ.
ಸಾಯುವ ಮೊದಲು ಆತ ಡೆತ್‌ನೋಟ್ ಬರೆದಿಟ್ಟಿದ್ದು, ಅದರಲ್ಲಿ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಯಾವ ರೀತಿ ಕೊಲೆ ಮಾಡಿದ? ಏಕೆ ಕೊಲೆ ಮಾಡಿದ ಎಂಬ ವಿಚಾರಗಳ ಬಗ್ಗೆ ಮೃತ ಆರೋಪಿ ಸತ್ಯ ಬಿಚ್ಚಿಟ್ಟಿದ್ದಾನೆ.
ಮಹಾಲಕ್ಷ್ಮಿ ಕೆಲಸ ಮಾಡ್ತಿದ್ದ ಮಾಲ್‌ನಲ್ಲಿ ಮುಕ್ತಿರಂಜನ್ ರಾಯ್ ಸ್ಟೋರ್ ಮ್ಯಾನೇಜರ್ ಆಗಿದ್ದ. ಅಲ್ಲಿ ಕೆಲಸಕ್ಕೆ ಸೇರಿದ್ದ ಮಹಾಲಕ್ಷ್ಮಿ ಮೇಲೆ ಅವನಿಗೆ ಅನುರಾಗ ಉಂಟಾಗಿತ್ತು. ಆಕೆಯೂ ಅದಕ್ಕೆ ಸ್ಪಂದಿಸಿದ್ದಳು. ಆದರೆ ಆಕೆ ಇನ್ನೂ ಕೆಲವು ಯುವಕರೊಂದಿಗೆ ಆತ್ಮೀಯತೆಯಿಂದ ಇರುವುದು ಅವನಿಗೆ ಇಷ್ಟವಾಗುತ್ತಿರಲಿಲ್ಲ. ಈ ಕಾರಣಕ್ಕೆ ಅವರ ನಡುವೆ ಜಗಳವಾಗುತ್ತಿತ್ತು. ಸೆ.3ರಂದು ಇದೇ ರೀತಿ ಜಗಳವಾದಾಗ ಆಕೆ ಮುಕ್ತಿರಂಜನ ರಾಯ್ ಮೇಲೆ ಹಲ್ಲೆ ಮಾಡಿದ್ದಾಳೆ. ಇದರಿಂದ ಕೋಪಗೊಂಡು ಆಕೆಯನ್ನು ಕೊಂದಿದ್ದಾನೆ. ಕೊಂದ ಬಳಿಕ ಶವವನ್ನು ಏನು ಮಾಡಬೇಕೆಂದು ಗೊತ್ತಾಗದೆ ಬಳಿಕ 50ಕ್ಕೂ ಹೆಚ್ಚು ತುಂಡು ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದಾನೆ. ಆಕೆಯ ವರ್ತನೆಯಿಂದ ಬೇಸತ್ತು ಕೃತ್ಯ ಎಸಗಿದ್ದೇನೆ ಎಂದು ಡೆತ್ನೋಟ್ನಲ್ಲಿ ಕೊಲೆ ಮಾಡಲು ಕಾರಣವೇನೆಂಬುದನ್ನು ರಂಜನ್ ಬಹಿರಂಗಪಡಿಸಿದ್ದಾನೆ.
ಸ್ಮಶಾನದಲ್ಲಿ ಆರೋಪಿ ಆತ್ಮಹತ್ಯೆ
ಒಡಿಶಾದ ಫಂಡಿ ಎಂಬ ಗ್ರಾಮದ ನಿವಾಸಿಯಾದ ಮುಕ್ತಿರಂಜನ್ ರಾಯ್ ಮಂಗಳವಾರ ಬೆಳಗ್ಗೆಯಷ್ಟೇ ಮನೆಗೆ ಬಂದಿದ್ದನಂತೆ. ಕೆಲಕಾಲ ಮನೆಯಲ್ಲೇ ಇದ್ದ ಈತ ರಾತ್ರಿ ಸ್ಕೂಟಿಯಲ್ಲಿ ಹೊರಗಡೆ ತೆರಳಿದ್ದ. ಲ್ಯಾಪ್‌ಟಾಪ್ ಸಮೇತ ಹೋದ ಆತ ಬಳಿಕ ಎಲ್ಲಿ ಹೋದ ಎಂಬುದು ಯಾರಿಗೂ ತಿಳಿದಿರಲಿಲ್ಲ. ನಿನ್ನೆ ಕುಳೆಪಾದ ಎಂಬಲ್ಲಿರುವ ಸ್ಮಶಾನದಲ್ಲಿ ಆತನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.