ಅನಾಹುತಗಳ ಸರಮಾಲೆ ಸೃಷ್ಟಿಸಿದ ಮಳೆ
ಮುಂಬಯಿ: ಮುಂಬಯಿ ಮಹಾನಗರ ಸೇರಿ ಮಹಾರಾಷ್ಟ್ರದ ವಿವಿಧೆಡೆ ನಿನ್ನೆಯಿಂದೀಚೆಗೆ ಸುರಿಯುತ್ತಿರುವ ಮಹಾಮಳೆ ಅನಾಹುತಗಳ ಸರಮಾಲೆಯನ್ನು ಸೃಷ್ಟಿಸಿದೆ. ಮಳೆಗೆ ಮುಂಬಯಿಯಲ್ಲಿ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ. ಬುಧವಾರ ಸಂಜೆ ಹೊತ್ತಿಗೆ ಮಳೆ ಶುರುವಾಗಿದ್ದು, ಸತತವಾಗಿ 5 ತಾಸು ಸುರಿದಿದೆ. ಮುಂಬಯಿ ಮಹಾನಗರ ಪ್ರದೇಶದ ಕೆಲವು ಭಾಗಗಳಲ್ಲಿ 200 ಮಿ.ಮೀ ಗಿಂತ ಹೆಚ್ಚು ಮಳೆಯಾಗಿದೆ.
ಭಾರಿ ಮಳೆಯ ಹಿನ್ನೆಲೆಯಲ್ಲಿ ನಿನ್ನೆಯೇ ಮುಂಬಯಿ ಮತ್ತು ಥಾಣೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರೈಲು, ರಸ್ತೆ ಸಂಚಾರ ವ್ಯತ್ಯಯಗೊಂಡು ಜನರು ತಡರಾತ್ರಿಯವರೆಗೂ ಬಸ್ ನಿಲ್ದಾಣ, ರಸ್ತೆಗಳಲ್ಲಿ ಬಾಕಿಯಾಗಿದ್ದರು. ರೈಲು ನಿಲ್ದಾಣಗಳಲ್ಲಿ ಕಿಕ್ಕಿರಿದ ಜನಸಂದಣಿ ಕಂಡುಬಂತು.
ಭಾರೀ ಮಳೆಗೆ 45 ವರ್ಷದ ಮಹಿಳೆಯೊಬ್ಬರು ಅಂಧೇರಿ ಪೂರ್ವದ ಚರಂಡಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕಲ್ಯಾಣ್‌ನಲ್ಲಿ ಕಲ್ಲು ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಖೋಪೋಲಿಯ ಜೆನಿತ್ ಜಲಪಾತದ ಬಳಿ ಮತ್ತೋರ್ವ ಮಹಿಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಇಂದು ಕೂಡ ಮೋಡ ಕವಿದ ವಾತಾವರಣವಿದ್ದು, ಭಾರಿ ಮಳೆ ಸುರಿಯುವ ಸಾಧ್ಯತೆಗಳು ಇವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪುಣೆಯಲ್ಲಿ ಭಾರತೀಯ ಹವಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿ, ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಮೂನ್ಸೂಚನೆ ನೀಡಿದೆ. ಪುಣೆ ನಗರದಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ.