ಅಂಗನವಾಡಿ ಶಿಕ್ಷಕಿ ಹುದ್ದೆಗೆ ಉರ್ದು ಕಡ್ಡಾಯ ಆದೇಶಕ್ಕೆ ವಿರೋಧ

ಒಂದು ಕೋಮಿನವರಿಗೆ ಮಾತ್ರ ಉದ್ಯೋಗ ಸಿಗಬೇಕೆಂಬ ಕುಟಿಲ ನೀತಿ ಎಂಬ ಆರೋಪ

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಅಂಗನವಾಡಿ ಶಿಕ್ಷಕಿಯರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಉರ್ದು ಭಾಷೆಯನ್ನು ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರದ ಆದೇಶ ವಿವಾದವನ್ನು ಸೃಷ್ಟಿಸಿದೆ. ಸರ್ಕಾರದ ನಡೆಗೆ ಕನ್ನಡ ಪರ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇತ್ತೀಚಿನ ಅಧಿಸೂಚನೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಅಂಗನವಾಡಿ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಕೋರಿತ್ತು. ಆ ಪ್ರದೇಶದಲ್ಲಿ ಮುಸ್ಲಿಂ ಸಮುದಾಯ ಹೆಚ್ಚಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಉರ್ದು ಕಡ್ಡಾಯವಾಗಿ ತಿಳಿದಿರಬೇಕು ಎಂದು ಹೇಳಲಾಗಿತ್ತು.































 
 

ಉರ್ದು ಭಾಷೆ ಕಡ್ಡಾಯಗೊಳಿಸಿರುವ ಸರ್ಕಾರ ನಿರ್ಧಾರಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕನ್ನಡ ನಾಡಿನಲ್ಲಿ ಉರ್ದು ಹೇರಿಕೆ ಮಾಡುತ್ತಿದೆ ಕಾಂಗ್ರೆಸ್ ಸರ್ಕಾರ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಅಂಗನವಾಡಿ ಶಿಕ್ಷಕರ ಹುದ್ದೆಗೆ ನೇಮಕಗೊಳ್ಳಲು ಉರ್ದು ಕಡ್ಡಾಯವಾಗಿ ಬರಬೇಕಂತೆ, ಹೀಗೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಧಿಕೃತ ಆದೇಶ ಹೊರಬಿದ್ದಿದೆ. ಸಿಎಂ ಸಿದ್ದರಾಮಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೆ, ಮೂಡಿಗೆರೆ ಇರುವುದು ಕರ್ನಾಟಕದಲ್ಲಿ, ಕರ್ನಾಟಕದಲ್ಲಿ ಕನ್ನಡ ಅಧಿಕೃತ ಭಾಷೆ, ಅಂತಹದರಲ್ಲಿ ಉರ್ದು ಕಡ್ಡಾಯ ಏಕೆ ಉತ್ತರಿಸಿ ಎಂದು ಕೇಳಿದೆ.

ಅಂಗನವಾಡಿ ಶಿಕ್ಷಕಿ ಕೆಲಸ ಸಿಗಬೇಕಾದರೆ ಉರ್ದು ಭಾಷೆ ಗೊತ್ತಿರಬೇಕು ಎಂಬ ರಾಜ್ಯದ ಕಾಂಗ್ರೆಸ್ ಸರಕಾರದ ಘೋಷಣೆ ಖಂಡನೀಯ. ಅಂಗನವಾಡಿ ಶಿಕ್ಷಕರ ನೇಮಕಾತಿಯಲ್ಲಿಯೂ ಮುಸ್ಲಿಂ ಸಮುದಾಯವನ್ನು ಓಲೈಸುವ, ಅವರಿಗೆ ಮಾತ್ರ ಕೆಲಸ ಸಿಗುವಂತೆ ದಾರಿ ಮಾಡಿಕೊಡುವ ಹಿಂಬಾಗಿಲ ಯತ್ನ ಮತ್ತೊಮ್ಮೆ ಕಾಂಗ್ರೆಸ್ಸಿಗರ ಕುಟಿಲ ನೀತಿ ಎತ್ತಿ ತೋರಿಸುತ್ತಿದೆ. ಅಸಹ್ಯ ರಾಜಕೀಯದ ಪರಮಾವಧಿ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.

ಕನ್ನಡಿಗರ ಮೇಲೆ ಉದ್ದೇಶಪೂರ್ವಕ ಉರ್ದು ಹೇರಿಕೆಯ ರಾಜ್ಯ ಸರ್ಕಾರದ ಕ್ರಮವು, ಟಿಪ್ಪು ಮತ್ತು ಹೈದರಾಲಿ ಮಾದರಿಯ ಕನ್ನಡ ದಮನ ನೀತಿಯ ಮುಂದುವರಿದ ಭಾಗವಾಗಿದೆ. ಟಿಪ್ಪುವನ್ನು ಪರಮ ಆದರ್ಶವನ್ನಾಗಿ ಅಂಗೀಕರಿಸಿರುವ, ಕಳೆದ 1 ವರ್ಷದಿಂದ ಒಂದು ಸಮುದಾಯದ ಅತಿಯಾದ ತುಷ್ಟೀಕರಣ ನೀತಿಯನ್ನು ಆಡಳಿತದ ಪರಮ ಧ್ಯೇಯವನ್ನಾಗಿ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರಗಳು ಕನ್ನಡದ ಅಸ್ಮಿತೆಗೆ, ಕನ್ನಡಿಗರಿಗೆ ಮಾಡುತ್ತಿರುವ ಅತಿ ದೊಡ್ಡ ಅಪಮಾನ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top