ಉತ್ತರ ಭಾರತೀಯರು ಬೆಂಗಳೂರು ಬಿಟ್ಟು ಹೋದರೆ ಕನ್ನಡಿಗರು ಕಂಗಾಲು ಎಂದು ಹೇಳಿದ್ದ ಯುವತಿ
ಬೆಂಗಳೂರು: ಉತ್ತರ ಭಾರತೀಯರು ಬೆಂಗಳೂರು ತೊರೆದರೆ ಈ ನಗರ ಖಾಲಿಯಾಗುತ್ತದೆ ಎಂದು ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡಿ ದುರಹಂಕಾರ ಪ್ರದರ್ಶಿಸಿದ್ದ ಉತ್ತರ ಭಾರತ ಮೂಲದ ಸುಗಂಧಾ ಶರ್ಮಾ ಎಂಬಾಕೆಯನ್ನು ಆಕೆಯ ಕಂಪನಿ ನೌಕರಿಯಿಂದ ಕಿತ್ತುಹಾಕಿದೆ.
ರೀಲ್ಸ್ ಹುಚ್ಚಾಟದ ಸುಗಂಧಾ ಶರ್ಮ ಕೆಲದಿನಗಳ ಹಿಂದೆ ಕನ್ನಡಿಗರನ್ನು ನಾನಾ ರೀತಿಯಲ್ಲಿ ನಿಂದಿಸಿದ ವಿಡಿಯೋವನ್ನು ಇನ್‌ಸ್ಟಾಗ್ರಾಂಗೆ ಅಪ್‌ಲೋಡ್ ಮಾಡಿದ್ದರು. ಈ ವಿಡಿಯೋ ಭಾರಿ ವೈರಲ್ ಆಗಿ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿತ್ತು. ಉತ್ತರ ಭಾರತೀಯರು ಬೆಂಗಳೂರು ಬಿಟ್ಟು ಹೋದರೆ ಕನ್ನಡಿಗರಿಗೆ ನಷ್ಟ. ನಿಮ್ಮ ಪಿಜಿಗಳೆಲ್ಲ ಖಾಲಿಯಾಗುತ್ತವೆ, ನಿಮ್ಮ ಕ್ಲಬ್, ಪಬ್‌ಗಳು ಗಿರಾಕಿಗಳಿಲ್ಲದೆ ಬಾಗಿಲು ಮುಚ್ಚಬೇಕಾಗುತ್ತದೆ, ಪಂಜಾಬಿ ಸಂಗೀತಕ್ಕೆ ಕುಣಿಯುವ ಚೆಂದದ ಹುಡುಗಿಯರು ಕಾಣಿಸುವುದಿಲ್ಲ. ಯೋಚಿಸಿ ಮಾತನಾಡಿ. ಉತ್ತರ ಭಾರತೀಯರು ಬೆಂಗಳೂರು ತೊರೆಯಬೇಕು ಎನ್ನುವ ನಿಮ್ಮ ಆಸೆ ನಿಜವಾದರೆ ಬೆಂಗಳೂರಿನ ಕಳೆಯೇ ಹೋಗಿಬಿಡುತ್ತದೆ ಎಂದು ರೀಲ್ಸ್‌ನಲ್ಲಿ ಹುಚ್ಚುಹುಚ್ಚಾಗಿ ಹೇಳಿಕೊಂಡಿದ್ದಳು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕನ್ನಡಿಗರು ಶರ್ಮಾಗೆ ಬೆಂಗಳೂರನ್ನು ತೊರೆಯುವಂತೆ ಚಾಲೆಂಜ್ ಹಾಕಿದ್ದರು. ಕೆಲವೇ ಗಂಟೆಗಳಲ್ಲಿ ಈ ವಿಡಿಯೊ ವೈರಲ್ ಆಗಿದ್ದು, ಸುಗಂಧಾ ವಿರುದ್ಧ ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ಕಿಡಿಕಾರಿದ್ದರು. ಭಾಷೆ ನೆಪದಲ್ಲಿ ಜನರ ನಡುವೆ ಕಂದಕ ಸೃಷ್ಟಿಸಲು ಯತ್ನಿಸುತ್ತಿರುವ ಈಕೆಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೂ ಟ್ಯಾಗ್ ಮಾಡಿದ್ದರು.
ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಯುವತಿ ಕೆಲಸ ಮಾಡುವ ಕಂಪನಿಗೆ ಹೋಗಿ ಆಕೆಯ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಕಂಪನಿಯೇ ಆಕೆಯನ್ನು ಕೆಲಸದಿಂದ ಕಿತ್ತುಹಾಕಿರುವುದು ಬಯಲಿಗೆ ಬಂದಿದೆ. ಸದ್ಯ ಮತ್ತೊಂದು ಖಾಸಗಿ ಕಂಪನಿಗೆ ಆಕೆ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಆ ಕಂಪನಿಗೂ ಭೇಟಿ ನೀಡಿ ಕೆಲಸದಿಂದ ತೆಗದುಹಾಕುವಂತೆ ಮನವಿ ಮಾಡಲಿದ್ದೇವೆ ಎಂದು ರೂಪೇಶ್ ರಾಜಣ್ಣ ಎಚ್ಚರಿಸಿದ್ದಾರೆ.