ಖಾಸಗಿ ಸಮಾರಂಭಗಳಿಗೆ ನೀತಿ ಸಂಹಿತೆಯಡಿ ಅನುಮತಿ ಅಗತ್ಯವಿಲ್ಲ

ವಿಧಾನ ಪರಿಷತ್‌ ಚುನಾವಣೆಗಾಗಿ ಜಾರಿಯಾದ ನೀತಿ ಸಂಹಿತೆ

ಉಡುಪಿ: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ದೈವಾರ್ಷಿಕ ಚುನಾವಣಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾದ ಬೆನ್ನಿಗೆ ನೀತಿ ಸಂಹಿತೆ ಜಾರಿಗೆ ಬಂದಿದೆ. ಆದರೆ ಈ ನೀತಿ ಸಂಹಿತೆಯಡಿ ಮದುವೆ ಮತ್ತಿತರ ಖಾಸಗಿ ಕಾರ್ಯಕ್ರಮಗಳಿಗೆ ಪೂರ್ವಾನುಮತಿ ಪಡೆದುಕೊಳ್ಳುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಆದರೆ ಈ ಸಮಾರಂಭಗಳಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆಗಳನ್ನು ಉಲ್ಲಂಘನೆಯಾಗದಂತೆ ಆಯೋಜಕರು ನೋಡಿಕೊಳ್ಳಬೇಕು ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಹೇಳಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಖಾಲಿಯಾಗಿರುವ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರಕ್ಕೆ ಉಪಚುನಾವಣೆ ನಡೆಸುವ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ. ಅ.21ರಂದು ಚುನಾವಣೆ ನಡೆಯಲಿದ್ದು, ನೀತಿ ಸಂಹಿತೆ ಉಲ್ಲಂಘನೆ ತಡೆಗಟ್ಟುವ ಸಲುವಾಗಿ ತಾಲೂಕು ಮಟ್ಟದಲ್ಲಿ ವಿವಿಧ ತಂಡಗಳನ್ನು ರಚಿಸಲಾಗಿದೆ. ಮಾದರಿ ನೀತಿ ಸಂಹಿತೆ ಅಕ್ಟೋಬರ್ 28ರ ವರೆಗೆ ಜಾಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯ ವ್ಯಾಪ್ತಿಯಲ್ಲಿ ಚುನಾವಣಾ ಸಭೆ, ಸಮಾರಂಭಗಳು ನಡೆಸುವ ಬಗ್ಗೆ ಮತ್ತು ಚುನಾವಣಾ ವಾಹನ ಪ್ರಚಾರದ ಬಗ್ಗೆ ಜಿಲ್ಲೆಯೊಳಗೆ ಸಂಚರಿಸಲು ಅನುಮತಿಯನ್ನು ಕೋರಿ ಬರುವ ಅರ್ಜಿಗಳನ್ನು ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯ ಏಕಗವಾಕ್ಷಿ ಕೇಂದ್ರದಲ್ಲಿ ಪಡೆದುಕೊಳ್ಳಬಹುದಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲು ಸ್ಪರ್ಧಿಸುವ ಅಭ್ಯರ್ಥಿ ಮತ್ತು ಅಭ್ಯರ್ಥಿ ಪರ ಏಜೆಂಟರಿಗೆ ಮಾತ್ರ ಸಂಚರಿಸಲು ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರದ ಚುನಾವಣಾಧಿಕಾರಿಯವರ ಕಚೇರಿಯ 1ನೇ ಮಹಡಿಯಲ್ಲಿ ತೆರೆಯಲಾದ ಏಕಗವಾಕ್ಷಿ ಕೇಂದ್ರದಲ್ಲಿ ಮುಂಚಿತವಾಗಿ ಮಾಹಿತಿ ನೀಡಿ ಹಾಗೂ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬಹುದು.
ರಾಜಕೀಯ ರಹಿತವಾದ ಇತರ ಸಾರ್ವಜನಿಕ, ಸಭೆ ಸಮಾರಂಭಗಳನ್ನು ನಡೆಸುವ ಅಯೋಜಕರು ಜಿಲ್ಲೆಯ ಎಲ್ಲ ತಾಲೂಕು ಕಚೇರಿಯ ಏಕಗವಾಕ್ಷಿ ಕೇಂದ್ರದಲ್ಲಿ ಮುಂಚಿತವಾಗಿ ಮಾಹಿತಿ ನೀಡಿ, ಅರ್ಜಿ ಸಲ್ಲಿಸಿ, ತಾಲೂಕು ತಹಶೀಲ್ದಾರರಿಂದ ಅನುಮತಿ ಪಡೆದುಕೊಳ್ಳಬಹುದಾಗಿದೆ.
ಮದುವೆ ಮತ್ತು ಇನ್ನಿತರ ಖಾಸಗಿ ಕಾರ್ಯಕ್ರಮಗಳನ್ನು ನಡೆಸಲು ಅನುಮತಿಯನ್ನು ಪಡೆಯುವ ಅವಶ್ಯಕತೆ ಇರುವುದಿಲ್ಲ. ಆದರೆ ಈ ಸಮಾರಂಭಗಳಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆಗಳನ್ನು ಉಲ್ಲಂಘನೆಯಾಗದಂತೆ ಆಯೋಜಕರು ನೋಡಿಕೊಳ್ಳಬೇಕು ಎಂದು ಮಮತಾ ದೇವಿ ಜಿ.ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top