28 ವರ್ಷಗಳ ಬಳಿಕ ಲೆಬನಾನ್ ಮೇಲೆ ನಡೆದ ಭೀಕರ ದಾಳಿ
ಬೇರುತ್: ಲೆಬನಾನ್–ಇಸ್ರೇಲ್ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿರುವುದರಿಂದ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಆವರಿಸಿದೆ. ಲೆಬನಾನ್‌ನ ದಕ್ಷಿಣ ಹಾಗೂ ಪೂರ್ವ ಪ್ರಾಂತ್ಯದ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದ್ದು, ಇದಕ್ಕೆ ಪ್ರತೀಕಾರವಾಗಿ ಉತ್ತರ ಇಸ್ರೇಲ್‌ನ ಸೇನಾ ನೆಲೆಗಳ ಮೇಲೆ ಲೆಬನಾನ್ ನಡೆಸಿದೆ.
ಪೇಜರ್, ವಾಕಿಟಾಕಿ ಸ್ಫೋಟಕ್ಕೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದ ಇರಾನ್ ಬೆಂಬಲಿತ ಲೆಬನಾನ್ ಬಂಡುಕೋರ ಪಡೆಯ ಮೇಲೆ ಸೋಮವಾರ ಇಸ್ರೇಲ್ ಮಾರಣಾಂತಿಕ ದಾಳಿ ನಡೆಸಿದೆ. ಹಿಜ್ಜುಲ್ಲಾ ಉಗ್ರರ 800 ಸ್ಥಳಗಳ ಮೇಲೆ ಇಸ್ರೇಲ್ 200 ರಾಕೆಟ್ ದಾಳಿ ನಡೆಸಿದೆ. ಸಾವಿನ ಸಂಖ್ಯೆ 492ಕ್ಕೆ ಏರಿಕೆಯಾಗಿದ್ದು, ಗಾಯಗೊಂಡವರ ಸಂಖ್ಯೆ ಸುಮಾರು 1,500ಕ್ಕೆ ತಲುಪಿದೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ಹೇಳಿಕೊಂಡಿದೆ.
ಇದು 2006ರಲ್ಲಿ ಇಸ್ರೇಲ್-ಹಿಜ್ಜುಲ್ಲಾ ಕದನ ಆರಂಭವಾದ ಬಳಿಕ 28 ವರ್ಷಗಳಲ್ಲೇ ದೇಶದ ಅತಿದೊಡ್ಡ ಕರಾಳ ದಿನ ಎಂದು ಲೆಬನಾನ್ ಉಲ್ಲೇಖಿಸಿದೆ. ಲೆಬನಾನ್ ದಕ್ಷಿಣ, ಪೂರ್ವ ಪ್ರಾಂತ್ಯಗಳ ಮೇಲೆ ದಾಳಿ ನಡೆಸಿದ ಇಸ್ರೇಲ್ ಉತ್ತರ ಭಾಗದ ಮೂರು ಸೇನಾ ನೆಲೆಗಳ ಮೇಲೆ ಬಂಡುಕೋರರ ಪ್ರತಿ ದಾಳಿ ನಡೆಸಿದ್ದಾರೆ. ಹೈಫಾದಲ್ಲಿರುವ ಇಸ್ರೇಲ್ ರಾಫೆಲ್ ಡಿಫೆನ್ಸ್ ಇಂಡಸ್ಟ್ರೀಸ್ ಸಂಕೀರ್ಣದ ಮೇಲೂ ಬಾಂಬ್ ದಾಳಿ ನಡೆಸಲಾಗಿದೆ ಎಂದು ಲೆಬನಾನ್ ಹೇಳಿಕೊಂಡಿದೆ.
ಈ ದಾಳಿಯು ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಗುಡುಗಿರುವ ಇಸ್ರೇಲ್, ಹಿಜ್ಜುಲ್ಲಾ ಉಗ್ರರು ತಮ್ಮ ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟಿರುವ ಮನೆಗಳು ಮತ್ತು ಕಟ್ಟಡಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಲೆಬನಾನ್ ನಾಗರಿಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಹಮಾಸ್ ಮೇಲಿನ ಇಸ್ರೇಲ್ ಯುದ್ಧದಲ್ಲಿ ಹಿಜ್ಜುಲ್ಲಾ ಉಗ್ರರು, ಹಮಾಸ್‌ಗೆ ನೇರ ಬೆಂಬಲ ಘೋಷಿಸಿದ್ದಾರೆ. ಅದರ ಭಾಗವಾಗಿ ಆಗಾಗ್ಗೆ ಇಸ್ರೇಲ್ ಸೇನಾ ನೆಲೆಗಳು ಮತ್ತು ನಾಗರಿಕ ಪ್ರದೇಶಗಳ ಮೇಲೆ ರಾಕೆಟ್, ಕ್ಷಿಪಣಿ ಬಳಸಿ ದಾಳಿ ನಡೆಸುತ್ತಿದೆ. ಇದರಿಂದ ಸಿಟ್ಟಿಗೆದ್ದಿರುವ ಇಸ್ರೇಲ್, ಕಳೆದೊಂದು ವಾರದಿಂದ ಲೆಬನಾನ್‌ನಲ್ಲಿರುವ ಹಿಜ್ಜುಲ್ಲಾ ಉಗ್ರರ ಮೇಲೆ ಹಲವು ರೀತಿಯಲ್ಲಿ ದಾಳಿ ನಡೆಸಿದೆ.
ಕೆಲದಿನಗಳ ಹಿಂದೆ ಲೆಬನಾನ್‌ನ ಹಿಜ್ಜುಲ್ಲಾ ಉಗ್ರರು ಬಳಸುತ್ತಿದ್ದ ಪೇಜರ್ ಹಾಗೂ ವಾಕಿಟಾಕಿಗಳನ್ನು ಇಸ್ರೇಲ್ ಸ್ಫೋಟಿಸಿದ ನಂತರ ಸಂಘರ್ಷ ತೀವ್ರಗೊಂಡಿದೆ. ಇದು ಅನಿರ್ದಿಷ್ಟ ಯುದ್ಧಕ್ಕೆ ನಾಂದಿ ಹಾಡಿದೆ ಎಂದು ಹಿಜ್ಜುಲ್ಲಾ ಉಗ್ರರು ಘೋಷಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ 5 ಸಾವಿರ ರಾಕೆಟ್ ಉಡಾಯಿಸಿದಾಗಿಂದ ಇಸ್ರೇಲ್-ಹಮಾಸ್ ಉಗ್ರರ ನಡುವಿನ ಯುದ್ಧ ಆರಂಭವಾಗಿದ್ದು, ಇನ್ನೂ ಅಂತ್ಯ ಕಂಡಿಲ್ಲ.