ನಕಲಿ ಆಭರಣಗಳನ್ನು ದೇವರಿಗೆ ಹಾಕಿ ಕಣ್ಣಿಗೆ ಮಣ್ಣೆರಚಿದ್ದ ಅರ್ಚಕ
ಉಡುಪಿ: ನಿತ್ಯ ದೇವರನ್ನು ಅಲಂಕರಿಸಿ ಪೂಜಿಸುವ ಅರ್ಚಕನೇ ದೇವರ ವಿಗ್ರಹದ ಮೇಲಿದ್ದ ಲಕ್ಷಾಂತರ ರೂ. ಬೆಲೆಬಾಳುವ ಅಭರಣಗಳನ್ನು ಕದ್ದ ಘಟನೆ ಗಂಗೊಳ್ಳಿಯಯಲ್ಲಿ ಸಂಭವಿಸಿದೆ. ಗಂಗೊಳ್ಳಿ ಖಾರ್ವಿಕೇರಿಯ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನದ 21 ಲಕ್ಷ ಮೌಲ್ಯದ ಚಿನ್ನದ ಅಭರಣಗಳನ್ನು ಕಳವುಗೈದು ಮತ್ತು ಕೆಲವು ನಕಲಿ ಚಿನ್ನಾಭರಣಗಳನ್ನು ದೇವರ ಮೂರ್ತಿ ಮೇಲೆ ಹಾಕಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದೇವಳದ ಅರ್ಚಕನನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ಶಿರಸಿ ತಾಲೂಕಿನ ಸಾಲಕಣಿ ಗ್ರಾಮದ ಮೂರೆಗಾರ ಎಂಬಲ್ಲಿನ ನರಸಿಂಹ ಭಟ್ (43) ಬಂಧಿತ ಆರೋಪಿ.
ಮಹಾಂಕಾಳಿ ದೇವಸ್ಥಾನದಲ್ಲಿ ದೇವಿಯ ಮೂರ್ತಿಗೆ ಆಡಳಿತ ಮಂಡಳಿ ಹಾಗೂ ಭಕ್ತಾದಿಗಳು ಸೇವೆ, ಹರಕೆ ರೂಪದಲ್ಲಿ ನೀಡಿದ ಚಿನ್ನಾಭರಣಗಳು ಪ್ರತಿದಿನ ದೇವರ ಮೂರ್ತಿಯ ಮೇಲೆ ಇರುತ್ತಿದ್ದವು. ಸೆ.21ರಂದು ಸಂಜೆ ದೇವಸ್ಥಾನದ ಗರ್ಭಗುಡಿಯಲ್ಲಿ ಪೂಜೆ ಮಾಡುತ್ತಿದ್ದ ಅರೊಪಿ ಅರ್ಚಕನಲ್ಲಿ ನವರಾತ್ರಿ ಉತ್ಸವದ ಸಲುವಾಗಿ ದೇವರ ಮೈಮೇಲಿದ್ದ ಚಿನ್ನಾಭರಣಗಳನ್ನು ಶುದ್ಧ ಮಾಡಲು ನೀಡುವಂತೆ ಹೇಳಿ ಪಡೆದುಕೊಂಡಾಗ ಆ ಆಭರಣಗಳು ಈ ಹಿಂದೆ ಇದ್ದ ಆಭರಣಗಳಂತೆ ಇರದೆ ಬೇರೆ ರೀತಿಯಲ್ಲಿ ಇದ್ದ ಹಾಗೂ ಅಸಲಿ ಚಿನ್ನದಂತೆ ಕಂಡುಬಂದಿಲ್ಲ. ಈ ಬಗ್ಗೆ ಅಸಲಿ ಚಿನ್ನಾಭರಣಗಳನ್ನು ತಾನು ತೆಗೆದಿರುವುದಾಗಿ ಒಪ್ಪಿಕೊಂಡು ಅವುಗಳನ್ನು ತಾನು ಸ್ವಂತಕ್ಕೆ ಬಳಸಿಕೊಂಡ ಬಗ್ಗೆ ತಿಳಿಸಿದ್ದಾನೆ.
ಅಂದಾಜು 3.20 ಲಕ್ಷ ರೂ. ಮೌಲ್ಯದ 40 ಗ್ರಾಂ ತೂಕದ ಚಿನ್ನದ ಜೋಬಿನ ಸರ, 5.84 ಲಕ್ಷ ರೂ. ಮೌಲ್ಯದ 73 ಗ್ರಾಂ ತೂಕದ ಹವಳ ಸೇರಿದ ಚಿನ್ನದ ಕಾಸಿನ ತಾಳಿ ಸರ, 5.84 ಲಕ್ಷ ರೂ. ಮೌಲ್ಯದ 73 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, 5.12 ಲಕ್ಷ ರೂ. ಮೌಲ್ಯದ 64 ಗ್ರಾಂ ತೂಕದ ಚಿನ್ನದ ನಕ್ಲೇಸ್, 48 ಸಾವಿರದ 6 ಗ್ರಾಂ ತೂಕದ 3 ಚಿನ್ನದ ತಾಳಿ, 64 ಸಾವಿರದ 8 ಗ್ರಾಂ ತೂಕದ ಚಿನ್ನದ ಚೈನ್ ಸರ ಸಹಿತ ಒಟ್ಟು ರೂ 21.12 ಲಕ್ಷ ರೂ. ಮೌಲ್ಯದ 264 ಗ್ರಾಂ (33 ಪವನ್) ತೂಕದ ಚಿನ್ನಾಭರಣಗಳನ್ನು ಕಳವುಗೈದಿದ್ದಾನೆ.
ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಿಗೆ ಮತ್ತು ಭಕ್ತರಿಗೆ ಸಂಶಯ ಬರಬಾರದೆಂಬ ಉದ್ದೇಶದಿಂದ ಕೆಲವು ನಕಲಿ ಚಿನ್ನಾಭರಣಗಳನ್ನು ದೇವರ ಮೂರ್ತಿಯ ಮೇಲೆ ಹಾಕಿದ್ದ ಎನ್ನಲಾಗಿದೆ. ಕಳವು ಮಾಡಿದ ಚಿನ್ನಾಭರಣಗಳನ್ನು ತನ್ನ ಸ್ವಂತಕ್ಕೆ ಬೇರೆ ಬೇರೆ ಬ್ಯಾಂಕುಗಳಲ್ಲಿ ಅಡಮಾನ ಇಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ನರಸಿಂಹ ಭಟ್ ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನಕ್ಕೆ ಕಳೆದ ಮೇ 16ರಿಂದ ಅರ್ಚಕನಾಗಿ ನೇಮಕಗೊಂಡಿದ್ದ. ಮಾಸಿಕ ಸಂಬಳ ಹಾಗೂ ವಾಸಕ್ಕೆ ಮನೆಯನ್ನು ನೀಡಿ ಬಾಡಿಗೆ ಪಾವತಿಸಲಾಗುತ್ತಿತ್ತು. ಗಂಗೊಳ್ಳಿ ಪಿಎಸ್‌ಐ ಹರೀಶ್ ಆರ್. ನೇತೃತ್ವದಲ್ಲಿ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿದ್ದು ಹೆಚ್ಚಿನ ತನಿಖೆ ಮುಂದುವರಿದಿದೆ.