ವಿವಾಹಿತ ಮಹಿಳೆಯನ್ನು ಮತಾಂತರ ಮಾಡುವ ಯತ್ನ ನಡೆದ ಆರೋಪ
ಬೆಂಗಳೂರು: ವಿವಾಹಿತ ಮಹಿಳೆಯನ್ನು ಕೊಂದು ಮೃತದೇಹವನ್ನು ಕತ್ತರಿಸಿ ಫ್ರಿಜ್‌ನಲ್ಲಿ ತುಂಬಿಸಿಟ್ಟ ಪ್ರಕರಣದಲ್ಲಿ ಅನ್ಯಕೋಮಿನ ವ್ಯಕ್ತಯೊಬ್ಬನ ಹೆಸರನ್ನು ಕೊಲೆಯಾದ ಮಹಿಳೆಯ ಸಹೋದರಿ ಶಹೀದಾ ಎಂಬಾಕೆ ಉಲ್ಲೇಖಿಸಿದ್ದಾರೆ. ಉತ್ತರಖಂಡ ಮೂಲದ ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದ ಆಶ್ರಫ್ ಎಂಬ ಯುವಕನ ಜೊತೆ ಕೊಲೆಯಾದ ಮಹಾಲಕ್ಷ್ಮೀ ಓಡಾಡಿಕೊಂಡಿದ್ದಳು ಎಂದು ಸಹೋದರಿ ಹೇಳಿದ್ದಾರೆ. ಈಗ ಆಶ್ರಫ್‌ನ ಫೋನ್ ಕೂಡ ಸ್ವಿಚ್ ಆಫ್ ಆಗಿರುವುದು ಅನುಮಾನವನ್ನು ಇನ್ನಷ್ಟು ಹೆಚ್ಚಿಸಿದೆ.
ಕೊಲೆ ಪ್ರಕರಣದ ತನಿಖೆ ಮುಂದಿವರಿದಂತೆಲ್ಲ ಆಘಾತಕಾರಿಯಾದ ಮಾಹಿತಿಗಳು ಹೊರಬರುತ್ತಿವೆ. ಈ ಪ್ರಕರಣದಲ್ಲಿ ಮತಾಂತರದ ಯತ್ನ ನಡೆದಿರುವ ಶಂಕೆಯೂ ಶಂಕೆಯಿದ್ದು, ಈ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಒಂಟಿಯಾಗಿ ವಾಸವಾಗಿದ್ದ ಮಹಾಲಕ್ಷ್ಮೀ ಮಾಲ್ ಒಂದರಲ್ಲಿ ಸೇಲ್ಸ್‌ಗರ್ಲ್ ಆಗಿದ ದುಡಿಯುತ್ತಿದ್ದರು. ಗಂಡನಿಂದ ಬೇರ್ಪಟ್ಟಿದ್ದ ಆಕೆಯನ್ನು ನಿತ್ಯ ಓರ್ವ ವ್ಯಕ್ತಿ ಬೈಕಿನಲ್ಲಿ ಕರೆದುಕೊಂಡು ಹೋಗಿ ಬರುತ್ತಿದ್ದ. ಈತ ಆಶ್ರಫ್ ಎನ್ನಲಾಗಿದೆ.
ಉತ್ತರಾಖಂಡದ ಆಶ್ರಫ್ ಜೊತೆಗೆ ಮಹಾಲಕ್ಷ್ಮೀಯ ಒಡನಾಟವೇ ಆಕೆ ಗಂಡನಿಂದ ಬೇರ್ಪಡಲು ಕಾರಣ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಗಂಡ-ಹೆಂಡತಿ ನಡುವೆ ನಿತ್ಯ ಜಗಳ ನಡೆಯುತ್ತಿತ್ತು. ಕೊನೆಗೆ ಮಹಾಲಕ್ಷ್ಮೀ ಗಂಡ ಮತ್ತು 4 ವರ್ಷದ ಮಗುವನ್ನು ಬಿಟ್ಟು ವೈಯಾಲಿಕಾವಲ್‌ನ ಸಿಂಗಲ್ ಬೆಡ್‌ರೂಮ್ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಆಕೆಯ ಗೆಳೆಯ ಎನ್ನಲಾಗಿರುವ ಆಶ್ರಫ್ ಬೆಂಗಳೂರಿನಲ್ಲಿ ಸೆಲೂನ್ ಒಂದರಲ್ಲಿ ಕ್ಷೌರಿಕನಾಗಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿಗಳು ಸಿಕ್ಕಿವೆ.
ಇವನಲ್ಲದೆ ಮಹಾಲಕ್ಷ್ಮೀಯ ಸಹೋದ್ಯೋಗಿಗಳಾದ ಮುಕ್ತಿ, ಶಶಿಧರ್ ಮತ್ತು ಸುನಿಲ್ ಎಂಬವರ ಮೇಲೆ ಅನುಮಾನ ವ್ಯಕ್ತಪಡಿಸಲಾಗಿದೆ. ಇವರ ಜೊತೆ ಮಹಾಲಕ್ಷ್ಮೀ ಕೆಲಸದ ವಿಚಾರವಾಗಿ ಜಗಳ ಮಾಡಿಕೊಂಡಿದ್ದರು ಎನ್ನಲಾಗಿದೆ.
30 ಅಲ್ಲ 59 ಪೀಸ್
ಮಹಾಲಕ್ಷ್ಮೀ ದೇಹವನ್ನು 30 ತುಂಡು ಮಾಡಿ ಫ್ರಿಜ್‌ನಲ್ಲಿಡಲಾಗಿತ್ತು ಎಂದು ಆರಂಭದಲ್ಲಿ ವರದಿಯಾಗಿತ್ತು. ಆದರೆ 30 ಅಲ್ಲ ಬರೋಬ್ಬರಿ 59 ತುಂಡು ಮಾಡಿ ಫ್ರಿಜ್‌ನೊಳಗೆ ತುಂಬಿಸಿಡಲಾಗಿತ್ತು. ಈ ತುಂಡುಗಳನ್ನು ಜೋಡಿಸಿ ಪೋಸ್ಟ್‌ಮಾರ್ಟಂ ಮಾಡುವುದೇ ಸವಾಲಾಗಿ ಪರಿಣಮಿಸಿದೆ. ಹಂತಕ ಮೃತದೇಹವನ್ನು ಹೊರಗೆ ಸಾಗಿಸುವ ಪ್ರಯತ್ನವನ್ನೂ ಮಾಡಿದ್ದ ಎನ್ನುವುದಕ್ಕೆ ಮನೆಯಲ್ಲಿ ಸಿಕ್ಕಿದ ಒಂದು ಸೂಟ್‌ಕೇಸ್ ಸಾಕ್ಷಿ ನುಡಿಯುತ್ತಿದೆ. ಆದರೆ ಕೊನೆಯ ಕ್ಷಣದಲ್ಲಿ ಆತ ತನ್ನ ಪ್ಲ್ಯಾನ್ ಬದಲಾಯಿಸಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಭಾನುವಾರ ಮಹಾಲಕ್ಮೀ ಕೊಲೆ ಕೇಸ್‌ನ ಪ್ರಮುಖ ವಿಡಿಯೋ ಸೋರಿಕೆಯಾಗಿದೆ. ಆಕೆಯ ತಾಯಿ ಮನೆಯ ಬಾಗಿಲು ತೆಗೆದು ಒಳಗೆ ಹೋಗುವ ವೇಳೆ ಅದನ್ನು ವಿಡಿಯೋ ಮಾಡಿದ್ದಾರೆ. ಈ ವೇಳೆ ಫ್ರಿಜ್‌ನ ಎದುರು ಖಾಲಿ ಸೂಟ್‌ಕೇಸ್ ಕಂಡಿದೆ.
ಕಪ್ಪುಬಣ್ಣದ ಸೂಟ್‌ಕೇಸ್ ಫ್ರಿಜ್ ಎದುರೇ ಇತ್ತು. ಕೊಲೆ ಮಾಡಿದ ಬಳಿಕ ಮನೆಯನ್ನು ಪೂರ್ತಿ ಕ್ಲೀನ್ ಮಾಡಿದ್ದ. ರಕ್ತವನ್ನು ಟಾಯ್ಲೆಟ್‌ನಲ್ಲಿ ಹಾಕಿರಬಹುದು ಎನ್ನಲಾಗಿದೆ. ದೇಹವನ್ನು ಕಟ್ ಮಾಡಿದ್ದರೂ, ಮನೆಯಲ್ಲಿ ರಕ್ತ ಚೆಲ್ಲಿರಲಿಲ್ಲ. ರಕ್ತವನ್ನು ಆರೋಪಿ ಬಟ್ಟೆಯಿಂದ ಒರೆಸಿ ಹೋಗಿದ್ದಾನೆ. ಒರೆಸಿರುವ ಬಟ್ಟೆಯನ್ನೂ ಆರೋಪಿ ಅಲ್ಲಿಯೇ ಬಿಟ್ಟಿದ್ದಾನೆ.