ತಾಲೂಕು ಮಟ್ಟದ ಗ್ರಾಮೀಣ ದಸರಾ ಕ್ರೀಡಾಕೂಟ | ಯುವಕ-ಯುವತಿ ಮಂಡಲವನ್ನು ಕಡೆಗಣಿಸಲಾಗಿದೆಯೇ | ಯಾವುದೇ ಪ್ರಚಾರವಿಲ್ಲದೆ ಕ್ರೀಡಾಕೂಟ ಆಯೋಜನೆ

ಪುತ್ತೂರು; ಮಾಧ್ಯಮ ಸಹಿತ ಯುವಕ-ಯುವತಿ ಮಂಡಲಗಳನ್ನು ಕಡೆಗಣಿಸಿ ಈ ಬಾರಿಯ ಪುತ್ತೂರು ತಾಲೂಕು ದಸರಾ ಕ್ರೀಡಾಕೂಟವನ್ನು ನಗರದ ಕೊಂಬೆಟ್ಟು ತಾಲ್ಲೂಕು ಕ್ರೀಡಾಂಗಣದಲ್ಲಿ ಶನಿವಾರ ನಡೆಸಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಶನಿವಾರ ತಾಲ್ಲೂಕು ಮಟ್ಟದ ದಸರಾ ಗ್ರಾಮೀಣ ಕ್ರೀಡಾಕೂಟವನ್ನು  ಆಯೋಜನೆ ಮಾಡಲಾಗಿತ್ತು. ಗ್ರಾಮೀಣ ಭಾಗದ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಬೇಕಾಗಿದ್ದ ಈ ಕ್ರೀಡಾಕೂಟ ಕೇವಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಕೂಟವಾಗಿ ಬದಲಾಗಿತ್ತು. ದಸರಾ ಗ್ರಾಮೀಣ ಕ್ರೀಡಾಕೂಟದಲ್ಲಿ ಪ್ರತೀ ವರ್ಷವೂ ಗ್ರಾಮೀಣ ಪ್ರದೇಶಗಳ ಯುವಕ-ಯುವತಿ ಮಂಡಲಗಳ ಸದಸ್ಯರು ಹೆಚ್ಚಾಗಿ ಭಾಗವಹಿಸುತ್ತಿದ್ದರು. ಯುವಜನಸೇವಾ ಕ್ರೀಡಾ ಇಲಾಖೆ, ತಾಲ್ಲೂಕು ಪಂಚಾಯಿತಿ ಹಾಗೂ ಶಿಕ್ಷಕರ ಸಹಯೋಗದಲ್ಲಿ ದಸರಾ ಕ್ರೀಡಾಕೂಟವನ್ನು ಹಬ್ಬದ ಮಾದರಿಯಲ್ಲಿ ನಡೆಸಲಾಗುತ್ತಿತ್ತು. ಸಾಕಷ್ಟು ದಿನಗಳ ಮೊದಲೇ ಸುದ್ದಿಗೋಷ್ಠಿ ನಡೆಸಿ ಮಾದ್ಯಮಗಳ ಮೂಲಕ  ಕ್ರೀಡಾ ಕೂಟದ ಬಗ್ಗೆ ಗ್ರಾಮೀಣ ಭಾಗದ ಯುವಕ-ಯುವತಿ ಮಂಡಲಗಳಿಗೆ ಮಾಹಿತಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಯಾವುದೇ ಪ್ರಚಾರ ನೀಡದೆ ಗುಟ್ಟಾಗಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ನಡೆಸಲಾಗಿದೆ. ಕಾಟಾಚಾರಕ್ಕೆ ಸೀಮಿತವಾಗಿ ಕ್ರೀಡಾ ಕೂಟ ನಡೆಸಿರುವುದರಿಂದ ಗ್ರಾಮೀಣ ಪ್ರದೇಶದ ಕ್ರೀಡಾಸಕ್ತ ಯುವಕ -ಯುವತಿಯರು ಕ್ರೀಡಾಕೂಟದಿಂದ ವಂಚಿತರಾಗುವಂತಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಗ್ರಾಮೀಣ ಪ್ರದೇಶದ ಬಹುತೇಕ ಯುವಕ-ಯುವತಿ ಮಂಡಲದವರು ಈ ಬಾರಿಯ ಕ್ರೀಡಾ ಕೂಟದಲ್ಲಿ ಕಾಣಿಸಿಕೊಳ್ಳಲಿಲ್ಲ. ಬದಲಾಗಿ ಹೆಚ್ಚಿನ ಸ್ಪರ್ಧಿಗಳು ಕಾಲೇಜಿನ ಹೆಸರಲ್ಲಿಯೇ ಭಾಗಿಯಾಗಿರುವುದು ಕಂಡುಬಂತು.































 
 

ಅವ್ಯವಸ್ಥೆಯ ಆಗರ;

ಕೊಂಬೆಟ್ಟು ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜನೆಗೊಂಡ ಏಕ ದಿನದ ಈ ದಸರಾ ಕ್ರೀಡಾಕೂಟ ಅವ್ಯವಸ್ಥೆಯ ಆಗರವಾಗಿತ್ತು. ಎತ್ತರ ಜಿಗಿತ ಮತ್ತು ಉದ್ದ ಜಿಗಿತ ಸ್ಪರ್ಧೆಗಳ ಅಂಕಣಗಳನ್ನು ಹೊಯಿಗೆ ಅಳವಡಿಸಿ ಕನಿಷ್ಟ ಸಮತಟ್ಟು ಮಾಡುವ ಕೆಲಸವೂ ನಡೆದಿಲ್ಲ. ಸಮತಟ್ಟು ಇಲ್ಲದ ಅಂಕಣದಲ್ಲಿ ಜಿಗಿದು ನೋವುಣ್ಣುವ ಅನಿವಾರ್ಯತೆ ಸ್ಪರ್ಧಿಗಳಿಗೆ ಎದುರಾಯಿತು. ಖೋ-ಖೋ ಅಂಕಣದಲ್ಲಿ ಹೊಂಡ ಗುಂಡಿಗಳೇ ತುಂಬಿತ್ತು. ಮಳೆಗಾಲದಲ್ಲಿ ದುಸ್ಥಿತಿಗೆ ಬಂದಿದ್ದ ಓಟದ ಟ್ರ್ಯಾಕ್ ಸರಿಪಡಿಸುವ ಕೆಲಸವನ್ನೇ ಮಾಡಿಲ್ಲ. ಇವೆಲ್ಲಾ ಅವ್ಯವಸ್ಥೆಗಳಿಂದಾಗಿ ನೊಂದ ಸ್ಪರ್ಧಾಳುಗಳು ಸಂಘಟಕರ ಕಾರ್ಯ ವೈಖರಿಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದುದು ಕಂಡು ಬಂತು.

ಕ್ರೀಡಾ ಕೂಟದ ಜವಾಬ್ದಾರಿ ಹೊಂದಿರುವ ಇಲಾಖೆಯ ಅಧಿಕಾರಿ, ನೋಡಲ್ ಅಧಿಕಾರಿ ಸಹಿತ ಎಲ್ಲರೂ `ಸಮಯಾವಕಾಶ ಇಲ್ಲದ ಕಾರಣದಿಂದಾಗಿ  ಸಮಸ್ಯೆಯಾಗಿದೆ’ ಎಂದು ತಮ್ಮ ಜಬಾಬ್ದಾರಿಗಳಿಂದ ನುಣುಚಿಕೊಂಡಿದ್ದು, ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವೊಂದನ್ನು ಬೇಕಾಬಿಟ್ಟಿಯಾಗಿ ನಡೆಸಿದ ಕುಖ್ಯಾತಿಗೆ ಈ ಬಾರಿ ಯುವಜನಸೇವಾ ಕ್ರೀಡಾ ಇಲಾಖೆ ಪಾತ್ರವಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top