ಪುತ್ತೂರು: ಚೆಸ್ ಭಾರತದಅತ್ಯಂತ ಪ್ರಾಚೀನಕ್ರೀಡೆ. ಕ್ರಮೇಣ ವಿದೇಶಗಳಲ್ಲೂ ಕ್ರೀಡೆಯಕೀರ್ತಿ ಪಸರಿಸಿ, ವಿಶ್ವಕೀರ್ತಿಯನ್ನು ಹೊಂದಿದೆ. ಇಂತಹ ವಿಶ್ವವಿಖ್ಯಾತ ಕ್ರೀಡೆಯನ್ನು ಆಡುವ ಕೌಶಲ್ಯವನ್ನು ಅಳವಡಿಸಿಕೊಂಡವರಿಗೆ ಬಾಲ್ಯದಲ್ಲಿಯೇ ಪ್ರೋತ್ಸಾಹಿಸುವ ಕೆಲಸವನ್ನು ವಿವೇಕಾನಂದ ಮಾಡುತ್ತಿದೆ ಎಂದು ಪುತ್ತೂರು ಜಿ. ಎಲ್.ಆಚಾರ್ಯಜುವ್ಯೆಲ್ಸ್ ನ ಮಾಲಕ ಲಕ್ಷ್ಮೀಕಾಂತ ಬಿ. ಆಚಾರ್ಯ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದ (ಸ್ವಾಯತ್ತ) ಸುವರ್ಣ ಮಹೋತ್ಸವ ವೇದಿಕೆಯಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ಮತ್ತುಕ್ರೀಡಾ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ನಡೆದ ಅಂತರ್ ಜಿಲ್ಲೆ, ಅಂತರ್ ಕಾಲೇಜು ಮಟ್ಟದ 43ನೇ ಮಾನ್ಸೂನ್ ಚೆಸ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಚೆಸ್‌ಆಟವು ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಮೆದುಳಿನ ಸರ್ವತೋಮುಖ ಬೆಳವಣಿಗೆಗೂ ಸಹಕಾರಿಯಾಗಿದೆ. ಹೆತ್ತವರು ಲಭಿಸುವ ಸಮಯದಲ್ಲೆಲ್ಲ ಮಕ್ಕಳನ್ನು ಚೆಸ್ ಆಟದತ್ತ ಗಮನ ಸೆಳೆಯಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ, ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳೀಕೃಷ್ಣ ಕೆ. ಎನ್ ಮಾತನಾಡಿ, ಯುದ್ಧದ ಒಂದು ಕಾರವಾದ ಚದುರಂಗ ಇಂದು ಚೆಸ್‌ಆಟವೆಂದು ಮರುನಾಮಕರಣಕೊಂಡು ವಿಶೇಷವಾದ ಮಹತ್ತ್ವವನ್ನು ಹೊಂದಿದೆ. ಹಿಂದೆ ಮನೆಮನೆಗಳಲ್ಲಿ ಆಟ ಆಡುತ್ತಿದ್ದರು. ಇಂದು ಶಿಕ್ಷಣ ಸಂಸ್ಥೆಗಳಲ್ಲಿ ಕಲಿಸಿಕೊಡಲಾಗುತ್ತದೆ. ಮಾತ್ರವಲ್ಲದೆ ಆಟವನ್ನು ಆಡಲು ಕಲಿಸಲೆಂದೇ ವಿಶೇಷವಾದ ತರಬೇತುದಾರರೂ ಇದ್ದಾರೆ. ಹಾಗಾಗಿ ಚೆಸ್ ಆಟದ ಮಾನ್ಯತೆ ಮತ್ತು ಹೆಚ್ಚಾಗಿದೆ ಎಂದರು.
ಚೆಸ್ ಆಟದಲ್ಲಿನ ತೀಕ್ಷ್ಣತೆಗಳು ಜೀವನಕ್ಕೆ ಪಾಠವಾಗಬೇಕು. ಆಟದಲ್ಲಿ ಎದುರಿಸುವ ಸವಾಲುಗಳು ಜೀವನದಲ್ಲೂಎದುರಾಗುತ್ತವೆ. ಆಟದಲ್ಲಿ ಕಲಿತುಕೊಂಡಂತಹ ಅಂಶಗಳನ್ನು ಜೀವನದೊಳಗೆ ಅಳವಡಿಸಬೇಕು ಎಂದರು.
ಪಂದ್ಯಾಟದಲ್ಲಿ ಬಿಬಿ ಹೆಗಡೆ ಕಾಲೇಜು ಕುಂದಾಪುರದ ವಿದ್ಯಾರ್ಥಿ ನಿಶಾಂತ್‌ಡಿಸೋಜ ಪ್ರಥಮ, ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ್ ದ್ವಿತೀಯ, ಎಸ್. ಡಿ. ಎಮ್ ಕಾಲೇಜು ಉಜಿರೆಯ ವಿದ್ಯಾರ್ಥಿ ಪವನ್ ಸಿ. ರಾವ್ ತೃತೀಯ ಸ್ಥಾನ ಪಡೆದುಕೊಂಡರು. ಉತ್ತಮ ಮಹಿಳಾ ಆಟಗಾರಾರು ಪ್ರಶಸ್ತಿಯನ್ನು ಪುತ್ತೂರು ಇಂಜಿನಿಯರ್ ಕಾಲೇಜಿನ ವಿದ್ಯಾರ್ಥಿನಿಯರಾದ ದೀಪ್ತಿ ಲಕ್ಷ್ಮೀ ಕೆ, ಅರ್ಪಿತ ಬಾಲಚಂದ್ರ ನಾಯಕ್, ಮಡಂತ್ಯಾರಿನ ಸೇಕ್ರೆಡ್ ಹಾರ್ಟ್‌ಕಾಲೇಜಿನ ವಿದ್ಯಾರ್ಥಿನಿ ಅನಿತ ಪಡೆದುಕೊಂಡರು.
ಪುತ್ತೂರು ಜಿ. ಎಲ್.ಆಚಾರ್ಯ ಜುವ್ಯೆಲ್ಸ್ ನ ಮಾಲಕ ಲಕ್ಷ್ಮೀಕಾಂತ ಬಿ ಆಚಾರ್ಯಅವರನ್ನು ಸನ್ಮಾನಿಸಲಾಯಿತು. ತೀರ್ಪುಗಾರರಾಗಿ ಸಹಕರಿಸಿದ ಅವನಿ ಉಡುಪಿ ಅವರನ್ನು ಗೌರವಿಸಲಾಯಿತು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ರವಿಕಲಾ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಉಪ ನಿರ್ದೇಶಕ ಯತೀಶ್ ಕುಮಾರ್ ಬಿ. ಸ್ವಾಗತಿಸಿ, ದೈಹಿಕ ಶಿಕ್ಷಣ ಮುಖ್ಯ ನಿರ್ದೇಶಕ ರವಿಶಂಕರ್ ಪ್ರಶಸ್ತಿ ವಿಜೇತರ ಪಟ್ಟಿ ಓದಿ, ವಂದಿಸಿದರು. ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಮಧುಕುಮಾರ್ ಕಾರ್ಯಕ್ರಮ ನಿರೂಪಿಸಿದರು.