ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ ಮೂರು ದಿನಗಳ ಅಮೆರಿಕ ಪ್ರವಾಸಕ್ಕೆ ತೆರಳಿದ್ದಾರೆ. ವಿಶ್ವದ ಬೇರೆ ನಾಯಕರೊಂದಿಗೆ ಅಮೆರಿಕದ ವಿಲ್ಮಿಂಗ್ಟನ್‌ಗೆ ಆಗಮಿಸಲಿರುವ ಪ್ರಧಾನಿ ಮೋದಿಯವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ತವರು ರಾಜ್ಯ ಡೆಲವಾರೆಯಲ್ಲಿ ನಡೆಯಲಿರುವ ಕ್ವಾಡ್ ಶೃಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಭಾರತ, ಆಸ್ಟ್ರೇಲಿಯ ಮತ್ತು ಜಪಾನ್ ನಾಯಕರಿಗೆ ಆತಿಥ್ಯ ನೀಡಲಿರುವ ಅಧ್ಯಕ್ಷ ಜೋ ಬೈಡನ್ ನಂತರ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಮೋದಿ ಅಮೆರಿಕ ಪ್ರವಾಸ ಕೈಗೊಳ್ಳುತ್ತಿರುವ ಸಂದರ್ಭದಲ್ಲಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಮಂತ್ರಿ ಕಚೇರಿ, ಪ್ರಧಾನಮಂತ್ರಿಗಳು ಕ್ವಾಡ್ ಶೃಂಗಸಭೆ, ಸಮುದಾಯ ಕಾರ್ಯಕ್ರಮ, ಭವಿಷ್ಯದ ಶೃಂಗಸಭೆ ಮತ್ತು ಇತರ ದ್ವಿಪಕ್ಷೀಯ ಸಭೆಗಳನ್ನು ಉದ್ದೇಶಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದೆ.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸಮೃದ್ಧಿಗಾಗಿ ಕೆಲಸ ಮಾಡುವ ಪ್ರಮುಖ ಗುಂಪಾಗಿ ಕ್ವಾಡ್ ಹೊರಹೊಮ್ಮಿದೆ ಎಂದು ಪ್ರಧಾನಿ ಮೋದಿ ಅವರು ಯುಎಸ್ ಭೇಟಿ ಸಂದರ್ಭದಲ್ಲಿ ಹೇಳಿದ್ದಾರೆ.
ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನಲ್ಲಿರುವ ನಸ್ಸೌ ವೆಟರನ್ಸ್ ಮೆಮೋರಿಯಲ್ ಕೊಲಿಸಿಯಂನಿಂದ ನಾಳೆ ಪ್ರಧಾನಮಂತ್ರಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮವಿದ್ದು ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ.