ಇಂಫಾಲ: ಮಣಿಪುರದ ಗ್ರಾಹಕ ವ್ಯವಹಾರಗಳ ಸಚಿವ ಎಲ್. ಸುಸಿಂದ್ರೋ ಅವರ ಆಪ್ತ ಸಹಾಯಕನನ್ನು(ಪಿಎ) ಇಂಫಾಲ ಪೂರ್ವ ಜಿಲ್ಲೆಯ ಅವರ ನಿವಾಸದ ಬಳಿಯೇ ದುಷ್ಕರ್ಮಿಗಳ ಗುಂಪೊಂದು ಅಪಹರಿಸಿದೆ.
ಎಸ್. ಸೊಮೊರೆಂಡ್ರೊ (43) ಅಪಹರಣವಾಗಿರುವ ಪಿಎ. ಘಟನೆಯ ಹೊಣೆಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ. ದುಷ್ಕರ್ಮಿಗಳ ಗುಂಪಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಗುರುವಾರ ರಾತ್ರಿ ಬಿಷ್ಣುಪುರ ಜಿಲ್ಲೆಯ ಮಾಜಿ ಮುಖ್ಯ ಕಾರ್ಯದರ್ಶಿ ಓಯಿನಮ್ ನಬಕಿಶೋರ್ ಅವರ ನಿವಾಸದ ಮೇಲೂ ಶಸ್ತ್ರಸಜ್ಜಿತ ದಾಳಿಕೋರರು ಕನಿಷ್ಠ 5 ಸುತ್ತು ಗುಂಡು ಹಾರಿಸಿದ್ದ ಘಟನೆ ನಡೆದಿತ್ತು. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿರಲಿಲ್ಲ. ಇದಾದ ಮರುದಿನವೇ ಸಚಿವರ ಆಪ್ತ ಸಹಾಯಕನನ್ನು ಕಿಡ್ನ್ಯಾಪ್ ಮಾಡಿರುವ ಘಟನೆ ನಡೆದಿದೆ.