ಚೇತನ್ ಭಗತ್ ಮತ್ತು 3 ಈಡಿಯಟ್ಸ್

ಒಂದು ಕಾದಂಬರಿಯಿಂದ ಸ್ಟಾರ್‌ ಲೇಖಕ ಆದ ಚೇತನ್‌ ಭಗತ್‌

ಇಂದು ಭಾರತದ ಅತ್ಯಂತ ದೊಡ್ಡ ಸೆಲೆಬ್ರಿಟಿ ಕಾದಂಬರಿಕಾರ ಯಾರು ಎಂದು ಕೇಳಿದರೆ ಗೂಗಲ್ ಕೊಡುವ ಉತ್ತರ ಚೇತನ್ ಭಗತ್. ಆತನ ಪ್ರತಿ ಕಾದಂಬರಿಯೂ ಭಾರತದ ಅತಿ ಹೆಚ್ಚು ಸೇಲ್ ಆಗುವ ಪುಸ್ತಕಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಅದೇ ರೀತಿ ಆತನ ಐದು ಕಾದಂಬರಿಗಳು ಬಾಲಿವುಡ್‌ನ ಅತ್ಯಂತ ಯಶಸ್ವೀ ಸಿನಿಮಾ ಆಗಿವೆ. ಅದರಲ್ಲೂ ಆತನ ಮೊದಲ ಕಾದಂಬರಿ ಭಾರತದ ಅತ್ಯಂತ ಯಶಸ್ವಿ ಸಿನಿಮಾ ಆದದ್ದು ಹೇಗೆ ಎಂದು ಇಂದು ನಾನು ಬರೆಯಬೇಕು.

ಚೇತನ್ ಭಗತ್ IIT ಮತ್ತು IIM ಪದವೀಧರ





























 
 

ಎಸ್ಎಸ್ಎಲ್‌ಸಿಯವರೆಗೆ ಸಾಮಾನ್ಯ ವಿದ್ಯಾರ್ಥಿ ಆಗಿದ್ದ ಚೇತನ್ ಭಗತ್ ಮುಂದೆ ಅಸಾಮಾನ್ಯ ಬುದ್ಧಿಮತ್ತೆಯನ್ನು ಪಡೆದರು. ಡೆಲ್ಲಿ ಐಐಟಿಯಿಂದ ಚಿನ್ನದ ಪದಕದ ಜೊತೆಗೆ ಬಿ.ಟೆಕ್ ಪದವಿ (ಮೆಕ್ಯಾನಿಕಲ್), ಅಹಮದಾಬಾದ್ ಐಐಎಂನಿಂದ MBA ಪದವಿ ಪಡೆದರು. ಆರಂಭದ ಆರು ತಿಂಗಳು ಕೆನಡಾದಲ್ಲಿ ಉದ್ಯೋಗ ಮಾಡಿದ ಅವರು ಮುಂದೆ ಹಾಂಗ್‌ಕಾಂಗ್‌ನ ಒಂದು ದೊಡ್ಡ ವಾಣಿಜ್ಯ ಸಂಸ್ಥೆಯಲ್ಲಿ ದೊಡ್ಡ ಹುದ್ದೆಯನ್ನು ಸಂಪಾದನೆ ಮಾಡಿದರು. ಸಂಬಳವೂ ದೊಡ್ಡದಾಗಿ ಇತ್ತು.

ಆದರೆ ಬಾಸ್ ಜೊತೆಗೆ ಭಿನ್ನಾಭಿಪ್ರಾಯ ಬಂದು ಕೆಲಸದಲ್ಲಿ ಅವರು ಆಸಕ್ತಿ ಕಳೆದುಕೊಂಡರು. ಆಗ ತಮ್ಮ ಬಾಲ್ಯದ ಪ್ಯಾಶನ್ ಆಗಿದ್ದ ಬರವಣಿಗೆ ಅವರ ಏಕತಾನತೆಯನ್ನು ದೂರ ಮಾಡಿತು. ತಮ್ಮ ದೆಹಲಿ ಐಐಟಿಯ ಅನುಭವವನ್ನು ಹೆಪ್ಪುಗಟ್ಟಿಸಿ ಒಂದು ಕಾದಂಬರಿಯನ್ನು ಬರೆದು ಮುಗಿಸಿದರು.

‘5 ಪಾಯಿಂಟ್ ಸಮ್ ಒನ್’ ಆ ಕಾದಂಬರಿ

ಈ ಮಧ್ಯೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಹಿಂದಿರುಗಿದರು. ಬರವಣಿಗೆಯ ಮೂಲಕವೇ ಬದುಕು ಕಟ್ಟಿಕೊಳ್ಳುವ ಭರವಸೆ ಅವರಿಗೆ ಇತ್ತು. ಆದರೆ ಭಾರತದಲ್ಲಿ ಅವರ ಪುಸ್ತಕವನ್ನು ಪಬ್ಲಿಷ್ ಮಾಡಲು ಪ್ರಕಾಶಕರು ದೊರೆಯಬೇಕು ಅಲ್ವಾ? ಅದು ಭಾರಿ ಸವಾಲಿನ ಕೆಲಸ ಆಗಿತ್ತು. ಅದಕ್ಕಾಗಿ ಚೇತನ್ ಭಗತ್ ತನ್ನ ಕಾದಂಬರಿಯ 15 ಡ್ರಾಫ್ಟ್‌ಗಳನ್ನು ಮಾಡಿ ಹಲವಾರು ಪ್ರಕಾಶಕರಿಗೆ ಕಳುಹಿಸಿಕೊಟ್ಟರು. ಹಲವು ತಿಂಗಳ ನಂತರ ‘ರೂಪಾ ಪಬ್ಲಿಕೇಶನ್’ ಸಂಸ್ಥೆ ಅವರ ಪುಸ್ತಕವನ್ನು ಪ್ರಿಂಟ್ ಮಾಡಿತ್ತು. ಮುಂದೆ ಎದುರಾದದ್ದು ಮಾರ್ಕೆಟಿಂಗ್ ಸಮಸ್ಯೆ. ಹಲವು ಪುಸ್ತಕಗಳ ಅಂಗಡಿಗೆ ಪುಸ್ತಕವನ್ನು ಉಚಿತವಾಗಿ ಕೊಟ್ಟು ಮಾರಿ ದುಡ್ಡು ಕೊಡಿ ಎಂದರು. ಆದರೂ ಪುಸ್ತಕ ಮಾರ್ಕೆಟ್ ಆಗಲಿಲ್ಲ. ಯಾವ ವಿಮರ್ಶಕರೂ ಅವರ ಪುಸ್ತಕದ ಕಡೆಗೆ ಇಣುಕಿ ಕೂಡ ನೋಡಲಿಲ್ಲ. ಆದರೂ ಚೇತನ್ ಭಗತ್ ನಿರಾಶರಾಗಲಿಲ್ಲ. ಅವರಿಗೆ ಅವರ ಪುಸ್ತಕದ ಮೇಲೆ ನಂಬಿಕೆ ಇತ್ತು.

ಸಿನಿಮಾ ಮಾಡುವ ಪ್ರಯತ್ನ

ಕೊನೆಗೂ ಅವರು ಧೈರ್ಯ ಮಾಡಿ ಮುಂಬಯಿಯಲ್ಲಿ ಇದ್ದ ಖ್ಯಾತ ಸಿನಿಮಾ ನಿರ್ದೇಶಕ ರಾಜಕುಮಾರ್ ಹಿರಾನಿ ಅವರಿಗೆ ಕಥೆಯನ್ನು ಕೊಟ್ಟು ‘ಚೆನ್ನಾಗಿದೆ, ಸಿನೆಮಾ ಮಾಡಬಹುದು’ ಅಂದರು. ರಾಜಕುಮಾರ್ ಹಿರಾನಿ ‘ಆಯ್ತು ನೋಡೋಣ’ ಅಂದರು. ಅವರೂ ಮೂರು ತಿಂಗಳು ಪುಸ್ತಕ ತೆರೆದು ನೋಡಲೇ ಇಲ್ಲ.

ವರದಾನ ಆಯ್ತು ಭಾರಿ ಮಳೆ

ಆದರೆ ಒಮ್ಮೆ ಮುಂಬಯಿಯಲ್ಲಿ ಭಾರಿ ಗಾಳಿ ಮಳೆ ಸುರಿದು 15 ದಿನಗಳ ಕಾಲ ಶೂಟಿಂಗ್ ನಿಂತು ಹೋಯಿತು. ಆಗ ಹಿರಾನಿ ಪುಸ್ತಕ ತೆರೆದು ಚೇತನ್ ಭಗತ್ ಕಾದಂಬರಿ ಓದುತ್ತಾ ಹೋದರು. ಅದರಲ್ಲಿ ಅದ್ಭುತವಾದ ಕಥೆ ಇತ್ತು. ಐಐಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮೂರು ಎವರೇಜ್ ಎಂದು ಕರೆಸಿಕೊಂಡ ವಿದ್ಯಾರ್ಥಿಗಳ ರೋಚಕ ಕಥೆ ಅದರಲ್ಲಿ ಇತ್ತು. ಭಾರತದ ಶಿಕ್ಷಣ ಪದ್ಧತಿಯ ಹುಳುಕುಗಳನ್ನು ನಿವಾಳಿಸಿ ಎಸೆಯುವ ವಿಡಂಬನೆ ಇತ್ತು. ಚೇತನ್ ಭಗತ್ ತಾನು ದೆಹಲಿ ಐಐಟಿಯಲ್ಲಿ ಓದುತ್ತಿದ್ದಾಗ ನಡೆದ ಘಟನೆಗಳನ್ನು ತಮ್ಮದೇ ಕಲ್ಪನೆಯಲ್ಲಿ ಅತ್ಯಂತ ಸುಂದರವಾಗಿ ನಿರೂಪಣೆ ಮಾಡಿದ್ದರು. ನವಿರು ಪ್ರೇಮಕತೆ ಕೂಡ ಇತ್ತು. ಹಿರಾನಿಗೆ ಕಥೆ ತುಂಬಾ ಇಷ್ಟವಾಯಿತು. ಅವರು ನಿರ್ಮಾಪಕರಾದ ವಿಧು ವಿನೋದ್ ಚೋಪ್ರಾ ಅವರನ್ನು ಸಂಪರ್ಕಿಸಿ ಕಥೆಯನ್ನು ಹೇಳಿದಾಗ ಸಿನಿಮಾ ಮಾಡುವ ನಿರ್ಧಾರ ಗಟ್ಟಿಯಾಯಿತು. ಆಮೀರ್ ಖಾನ್ ಕಥೆ ಕೇಳಿ ಥ್ರಿಲ್ ಆದರು. ಆರ್.ಮಾಧವನ್, ಶರ್ಮನ್ ಜೋಶಿ, ಬೊಮ್ಮನ್ ಇರಾನಿ, ಓಮಿ ವೈದ್ಯ ಮೊದಲಾದ ಉದಯೋನ್ಮುಖ ಕಲಾವಿದರನ್ನು ಒಟ್ಟು ಮಾಡಲಾಯಿತು. ಕರೀನಾ ಕಪೂರ್ ಸಮ್ಮತಿಸಿದರು. ಸ್ವತಃ ರಾಜಕುಮಾರ್ ಹಿರಾನಿ ಚಿತ್ರಕಥೆ ಬರೆದರು. ಮೂರು ತಿಂಗಳ ಶೂಟಿಂಗ್ ಮುಗಿಸಿ ಸಿನಿಮಾ ಬಿಡುಗಡೆ ಆಯ್ತು.

3 ಈಡಿಯಟ್ಸ್ ಸೂಪರ್ ಹಿಟ್ ಆಯ್ತು

2009ರಲ್ಲಿ ‘3 ಈಡಿಯಟ್ಸ್’ ಹಿಂದಿ ಸಿನಿಮಾ ದೇಶದಾದ್ಯಂತ ಬಿಡುಗಡೆ ಆಯ್ತು. ಭಾರತೀಯರಿಗೆ ಆ ಕಥೆಯಲ್ಲಿ ಇದ್ದ ರೋಚಕತೆ, ಮೊನಚು ನಿರೂಪಣೆ, ಹೃದ್ಯವಾದ ಸಂಭಾಷಣೆ, ಮನೋಹರವಾದ ಹಾಡುಗಳು ತುಂಬಾ ಇಷ್ಟವಾದವು. ಎಲ್ಲರ ಅಭಿನಯಗಳು ಮಿರಾಕಲ್ ಆಗಿದ್ದವು. ಆಮೀರ್ ಖಾನ್ ಮಾಡಿದ ರಾಂಚೊ ಪಾತ್ರ, ಬೊಮ್ಮನ್ ಇರಾನಿಯ ವೀರೂ ಸಹಸ್ರಬುದ್ಧೆ (ವೈರಸ್) ಪಾತ್ರ, ಓಮಿ ವೈದ್ಯ ಮಾಡಿದ್ದ ಚತುರ್ ಪಾತ್ರಗಳು ಸಿನೆಮಾ ವೀಕ್ಷಕರಿಗೆ ಭಾರಿ ಕಚಗುಳಿ ಇಟ್ಟವು. ಮಾಧವನ್ ಮೂಲಕ ನಿರೂಪಣೆ ಮಾಡಿಸಿದ್ದು, ಶರ್ಮನ್ ಜೋಶಿ ಅವರ ಹೃದಯವನ್ನು ತಟ್ಟುವ ಮಧ್ಯಮವರ್ಗದ ಕುಟುಂಬದ ಕಥೆ, ಕರೀನಾ ಕಪೂರ್ ಅವರ ಲೈಫ್‌ಟೈಮ್ ಅಭಿನಯ ಎಲ್ಲವೂ ಸೂಪರ್ ಆಗಿದ್ದವು.

ಬ್ಲಾಕ್‌ಬಸ್ಟರ್ ಆಯಿತು ಸಿನಿಮಾ

3 ಈಡಿಯಟ್ಸ್ ಸಿನೆಮಾ ಆ ಕಾಲಕ್ಕೆ 460 ಕೋಟಿ ದುಡ್ಡು ಮಾಡಿತು. ವಿದೇಶಗಳಲ್ಲಿಯೂ ಹಲವು ಭಾಷೆಗೆ ಡಬ್ ಆಗಿ ಸಂಚಲನ ಮೂಡಿಸಿತು. ಮೂರು ರಾಷ್ಟ್ರಪ್ರಶಸ್ತಿಗಳನ್ನು ಪಡೆಯಿತು. ಫಿಲ್ಮ್‌ಫೇರ್ ಪ್ರಶಸ್ತಿಯ 11 ವಿಭಾಗಗಳಲ್ಲಿ ನಾಮಿನೇಟ್ ಆಯಿತು. ನೋಡಿದವರೇ ಆ ಸಿನಿಮಾ ಮತ್ತೆ ಮತ್ತೆ ನೋಡಿದರು.

ಮೂರು ಗಂಟೆಯ ಕಾಲ ಕಣ್ಣು ರೆಪ್ಪೆ ಮುಚ್ಚದೆ ನಾನು ನೋಡಿದ ಸಿನಿಮಾ ಅದು. ವಿಮರ್ಶಕರು ಅದನ್ನು ಶತಮಾನದ ಟಾಪ್ 3 ಸಿನಿಮಾಗಳಲ್ಲಿ ಒಂದು ಎಂದು ಕರೆದರು. ಆಮೀರ್ ಖಾನ್ ಮಾಡಿದ ರಾಂಚೊ ಪಾತ್ರವನ್ನು ಇಡೀ ಭಾರತ ಮೆಚ್ಚಿ ಹೊಗಳಿತು. ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಸಿನಿಮಾದಲ್ಲಿ ಅಂತರ್ಗಾಮಿಯೇ ಆಗಿದ್ದ ‘ಆಲ್ ಇಸ್ ವೆಲ್’ ಕಾನ್ಸೆಪ್ಟ್ ವೀಕ್ಷಕರಿಗೆ ಭಾರಿ ಇಷ್ಟವಾಯಿತು. ಯಾವುದನ್ನೂ ಗಂಭೀರವಾಗಿ ಹೇಳದೆ ಕಾಮಿಡಿಯ ಪಂಚಿಂಗ್ ಮೂಲಕ ನಿರೂಪಣೆ ಮಾಡಿದ್ದು ಸಿನೆಮಾವನ್ನು ಬ್ಲಾಕ್ ಬಸ್ಟರ್ ಮಾಡಿತು.

ಮುಂದೆ ತಮಿಳು ಭಾಷೆಯಲ್ಲಿ ‘ನನ್ಬನ್’ ಎಂಬ ಹೆಸರಿನಿಂದ ಈ ಸಿನಿಮಾ ರೀಮೇಕ್ ಆಗಿ ಅಲ್ಲಿ ಕೂಡ ಹಿಟ್ ಆಯ್ತು. ಮೆಕ್ಸಿಕನ್ ಭಾಷೆಯಲ್ಲಿ ಕೂಡ ರೀಮೇಕ್ ಆಯಿತು. ಭಾರತದಲ್ಲಿ ಮುಂದೆ ಸಿನಿಮಾ ಹಲವು ಬಾರಿ ಬಿಡುಗಡೆ ಆಗಿ ದುಡ್ಡಿನ ಹೊಳೆಯನ್ನೇ ಹರಿಸಿತು.

ಆದರೂ ಚೇತನ್ ಭಗತ್ ಮಾಡಬೇಕಾಯಿತು ಕಾನೂನು ಹೋರಾಟ

ಇಷ್ಟೆಲ್ಲ ಸಿನಿಮಾ ಸಕ್ಸೆಸ್ ಆದರೂ ನಿರ್ದೇಶಕ, ನಿರ್ಮಾಪಕ ಇಬ್ಬರೂ ಕಥೆಗಾರ ಚೇತನ್ ಭಗತ್ ಅವರಿಗೆ ಸಿಗಬೇಕಾದ ಟೈಟಲ್ ಗೌರವ, ರಾಯಲ್ಟಿ ಕೊಡುವ ದೊಡ್ಡ ಮನಸು ಮಾಡಲಿಲ್ಲ. ಆಗ ಚೇತನ್ ಭಗತ್ ನ್ಯಾಯಾಲಯದ ಮೊರೆ ಹೋಗಿ ತನಗೆ ಸಿಗಬೇಕಾದ ಗೌರವವನ್ನು, ಗೌರವಧನವನ್ನು ಪಡೆದದ್ದು ವಿಪರ್ಯಾಸ.

ಮುಂದೆ ಚೇತನ್ ಭಗತ್ ಒಬ್ಬ ಲೇಖಕರಾಗಿ ಸ್ಟಾರ್ ವ್ಯಾಲ್ಯೂ ಪಡೆದರು. ಅವರ ಇತರ 4 ಕತೆಗಳು ಸಿನಿಮಾ ಆಗಿ ಬಾಕ್ಸ್ ಆಫೀಸಿನಲ್ಲಿ ಕ್ರಾಂತಿ ಮಾಡಿದವು. ಹೀಗೆ ಚೇತನ್ ಭಗತ್ ಭಾರತದ ಶ್ರೇಷ್ಠ ಯೂತ್ ಐಕಾನ್ ಆದರು. ವಿಕಸನದ ಗುರು ಆದರು. ಭಾರತದ ಯುವಜನತೆ ಅವರನ್ನು ಲೆಜೆಂಡ್ ಆಗಿ ಸ್ವೀಕಾರ ಮಾಡಿತು. ಅವರು ಬರೆದ ಎಲ್ಲ ಪುಸ್ತಕಗಳು ಭಾರತದ ಟಾಪ್ ಸೆಲ್ಲರ್ ಸರಣಿಯಲ್ಲಿ ಸ್ಥಾನ ಪಡೆದಿವೆ, ಅವರು ಇಂದು ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟುವ ಕಥೆಗಾರ ಅನ್ನೋದೇ ಇಂದಿನ ಭರತವಾಕ್ಯ.

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top