ಪುತ್ತೂರು: ಚದುರಂಗ ಎಂಬುದು ಕೇವಲ ಆಟ ಮಾತ್ರವಲ್ಲ, ಬದಲಾಗಿ ಜೀವನದುದ್ದಕ್ಕೂ ಅರಿತುಕೊಳ್ಳುವ ಪಾಠ. ಇಲ್ಲಿ ಸ್ಪರ್ಧಾಳುಗಳಾಗಿ ಆಗಮಿಸಿರುವ ಎಲ್ಲಾಆಟಗಾರರು ಚದುರಂಗದ ಆಟದಲ್ಲಿ ಮಾತ್ರ ಚಾಂಪಿಯನ್ಸ್ ಆಗದೆ ಜೀವನ ಎಂಬ ಚದುರಂಗದಲ್ಲೂ ಚಾಂಪಿಯನ್ಸ್ ಗಳಾಗಬೇಕು. ಸಮಾಜದಲ್ಲಿಉತ್ತಮ ನಾಗರಿಕನಾಗಿ, ದೇಶಕ್ಕೆಉತ್ತಮ ಆಸ್ತಿಯಾಗಬೇಕು. ಸ್ವಾಸ್ಥ್ಯ ಮನಸ್ಸಿನೊಂದಿಗೆ, ಸ್ವಾಸ್ಥ್ಯ ಸಮಾಜಕ್ಕಾಗಿದುಡಿಯಬೇಕು” ಎಂದು ದ್ವಾರಕಾ ಕನ್‌ಸ್ಟ್ರಕ್ಷನ್ ಮಾಲಕ ಗೋಪಾಲಕೃ ಭಟ್ ಹೇಳಿದರು.
ವಿವೇಕಾನಂದ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ) ದೈಹಿಕ ಶಿಕ್ಷಣ ಮತ್ತುಕ್ರೀಡಾ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಕಾಲೇಜಿನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನಡೆದ ಅಂತರ್‌ಜಿಲ್ಲಾ ಅಂತರ್ ಕಾಲೇಜು ಮಟ್ಟದ 43ನೇ ಮಾನ್ಸೂನ್ ಚೆಸ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ, ಶ್ರೀಪತಿ ಕಲ್ಲೂರಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಚದುರಂಗ ಸ್ಪರ್ಧೆ 43 ವರ್ಷಗಳಿಂದ ನಡೆಯುತ್ತಾ ಬಂದಿರುವುದು ಅತ್ಯಂತ ಸಂತಸದ ಸಂಗತಿ. ಇಲ್ಲಿ ತಂದೆ, ಮಕ್ಕಳು ಸೇರಿದಂತೆ ತಲೆಮಾರುಗಳೇ ಆಡಿರುವ ಪಂದ್ಯಾಟ ಇದಾಗಿದೆ. ಈ ಆಟದ ಜೊತೆಗೆ ಇತಿಹಾಸವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಚದುರಂಗ ಆಟ ಬೇರೆಯದಕ್ಕಿಂತ ಭಿನ್ನವಾಗಿದೆ. ಇದರಿಂದಾಗಿ ನಿರ್ಧಿಷ್ಟ ರೀತಿಯಲ್ಲಿ ಭೌದ್ಧಿಕ, ಮಾನಸಿಕ ಲಾಭಗಳು ಹಲವಾರಿವೆ. ಪ್ರಾಚೀನ ಪುರಾಣಗಳಲ್ಲಿ ಚದುರಂಗ ಸೇನೆಯೆಂಬ ಯುದ್ಧ ಕಲೆಯೂ ಇತ್ತು. ಇಡೀಜಗತ್ತಿನಲ್ಲಿ ಚೆಸ್ ಕ್ರೀಡೆಗೆ ಉತ್ತಮ ಸ್ಥಾನಮಾನವಿದ್ದು, ಪಾಲ್ಗೊಂಡ ಎಲ್ಲರೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವಂತಾಗಲಿ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ಪರೀಕ್ಷಾಂಗ ಕುಲಸಚಿವ ಹಾಗೂ ಸ್ನಾತಕೋತ್ತರ ವಿಭಾಗದ ನಿರ್ದೇಶಕ ಎಚ್.ಜಿ ಶ್ರೀಧರ್, ಉಪಸ್ಥಿತರಿದ್ದರು. ಒಟ್ಟು 13 ಕಾಲೇಜುಗಳಿಂದ ದೈಹಿಕ ಶಿಕ್ಷಕರು ಹಾಗೂ 85 ಸ್ಪರ್ಧಾಳುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ರವಿಶಂಕರ್ ಸ್ವಾಗತಿಸಿ, ಯತೀಶ್ ವಂದಿಸಿದರು. ಉಪನ್ಯಾಸಕಿ ಹವ್ಯ ಕಾರ್ಯಕ್ರಮ ನಿರೂಪಿಸಿದರು.