ವಿಶ್ವ ಚಾಂಪಿಯನ್‌ಷಿಪ್ ಫೈನಲ್‌ಗೆ ಲಗ್ಗೆಯಿಡಲು ಮಹತ್ವದ ಸರಣಿ
ಚೆನ್ನೈ : ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿ ಇಂದಿನಿಂದ ಶುರುವಾಗಲಿದೆ. 5 ಪಂದ್ಯಗಳ ಈ ಸರಣಿಯಲ್ಲಿ ಮೊದಲು ಎರಡು ಟೆಸ್ಟ್ ಪಂದ್ಯಗಳನ್ನಾಡಲಾಗುತ್ತಿದ್ದು, ಇದಾದ ಬಳಿಕ ಟಿ20 ಸರಣಿ ನಡೆಯಲಿದೆ. ಈ ಸರಣಿಯ ಮೊದಲ ಟೆಸ್ಟ್ ಪಂದ್ಯ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಗುರುವಾರದಿಂದ ಆರಂಭವಾಗಲಿದ್ದು, ಎರಡನೇ ಪಂದ್ಯ ಸೆಪ್ಟೆಂಬರ್ 27ರಿಂದ ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆಯಲಿದೆ.
ಈ ಎರಡು ಟೆಸ್ಟ್ ಪಂದ್ಯಗಳು ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಭಾಗವಾಗಿರುವ ಕಾರಣ ಉಭಯ ತಂಡಗಳಿಗೆ ಈ ಸರಣಿಯು ತುಂಬಾ ಮಹತ್ವದ್ದು. ಅದರಲ್ಲೂ ಭಾರತ ತಂಡ ಈ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದರೆ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ಆಡುವುದು ಬಹುತೇಕ ಖಚಿತವಾಗಲಿದೆ. ಹೀಗಾಗಿ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಭರ್ಜರಿ ಜಯ ಸಾಧಿಸುವ ಇರಾದೆಯೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ.
ಪಾಕಿಸ್ಥಾನ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದಿರುವ ಬಾಂಗ್ಲಾದೇಶ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ ರೇಸ್ನಲ್ಲಿದೆ. ಹೀಗಾಗಿ ಭಾರತದ ವಿರುದ್ಧದ ಸರಣಿಯನ್ನು ಗೆಲ್ಲುವ ಮೂಲಕ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರುವ ವಿಶ್ವಾಸದಲ್ಲಿದೆ.
ಉಭಯ ತಂಡಗಳು
ಬಾಂಗ್ಲಾದೇಶ : ನಜ್ಮುಲ್ ಹೊಸೈನ್ ಶಾಂತೊ (ನಾಯಕ), ಮಹಮ್ಮದುಲ್ ಹಸನ್ ಜಾಯ್, ಝಾಕಿರ್ ಹಸನ್, ಶದ್ಮಾನ್ ಇಸ್ಲಾಂ, ಮೊಮಿನುಲ್ ಹಕ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್, ಲಿಟ್ಟನ್ ಕುಮಾರ್ ದಾಸ್, ಮೆಹಿದಿ ಹಸನ್ ಮಿರಾಝ್, ತೈಜುಲ್ ಇಸ್ಲಾಂ, ನಯೀಮ್ ಹಸನ್, ನಹಿದ್ ರಾಣಾ, ಹಸನ್ ಮಹಮ್ಮದ್, ತಸ್ಕಿನ್ ಅಹ್ಮದ್, ಸೈಯದ್ ಖಾಲಿದ್ ಅಹ್ಮದ್, ಜಾಕರ್ ಅಲಿ.
ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸರ್ಫರಾಝ್ ಖಾನ್, ಕೆ.ಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ , ಆಕಾಶ್ ದೀಪ್ ಮತ್ತು ಯಶ್ ದಯಾಳ್.