ಜಗತ್ತನ್ನು ಚಕಿತಗೊಳಿಸಿದ ಹೊಸ ರೀತಿಯ ಯುದ್ಧತಂತ್ರ
ಬೇರುತ್ : ಮಂಗಳವಾರವಷ್ಟೇ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಉಗ್ರರು ಬಳಸುತ್ತಿದ್ದ ಸಾವಿರಾರು ಪೇಜರ್ಗಳು ಸ್ಫೋಟಗೊಂಡು 10 ಮಂದಿ ಸತ್ತು 3,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಇದರ ಬೆನ್ನಲ್ಲೇ ಈಗ ವಾಕಿಟಾಕಿಗಳು ಸ್ಫೋಟಗೊಂಡಿವೆ. ಮಂಗಳವಾರದ ಸ್ಫೋಟದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ ಬುಧವಾರ ನಡೆಯುತ್ತಿರುವಾಗಲೇ ವಾಕಿಟಾಕಿಗಳು ಹಾಗೂ ಇತರ ಉಪಕರಣಗಳು ಸ್ಫೋಟಗೊಂಡು 20ಕ್ಕೂ ಅಧಿಕ ಮಂದಿ ಸಾವಿಒಗೀಡಾಗಿದ್ದಾರೆ ಹಾಗೂ 500ರಷ್ಟು ಮಂದಿ ಗಾಯಗೊಂಡಿದ್ದಾರೆ.
ಇದು ಕೂಡ ಇಸ್ರೇಲ್‌ನದ್ದೇ ಕೃತ್ಯ ಎನ್ನಲಾಗಿದೆ. ಇಸ್ರೇಲ್ ಸಾರಿರುವ ಈ ಹೊಸ ಸಮರವನ್ನು ಇಡೀ ಜಗತ್ತು ಅಚ್ಚರಿಯಿಂದ ನೋಡುತ್ತಿದೆ.
ದೇಶದ ಅನೇಕ ಪ್ರದೇಶಗಳಲ್ಲಿ ಎಲೆಕ್ಟ್ರಾನಿಕ್ ಸಾಧನಗಳು ಸ್ಫೋಟಗೊಂಡಿರುವ ಇತ್ತೀಚಿನ ಪ್ರಕರಣಗಳಲ್ಲಿ 450ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಸರ್ಕಾರ ದೃಢಪಡಿಸಿದೆ. ಹಿಜ್ಬುಲ್ಲಾಗಳು ಹೊಂದಿದ್ದ ಪೇಜರ್ ಸಾಧನಗಳು ದೇಶದಾದ್ಯಂತ ಸ್ಫೋಟಗೊಂಡು 3000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಕಣ್ಣಿಗೆ ತೀವ್ರ ಗಾಯಗಳಾಗಿದ್ದು, ಬೆರಳುಗಳು ದೇಹದಿಂದ ಬೇರ್ಪಟ್ಟಿವೆ ಎಂದು ವೈದ್ಯರು ಹೇಳಿದ್ದಾರೆ.
ಈ ಹೊಸ ದಾಳಿಗಳ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಲೆಬನಾನ್ ಹೇಳಿದೆ. ಇಸ್ರೇಲ್ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಹಿಜ್ಬುಲ್ಲಾ ಎಚ್ಚರಿಕೆ ನೀಡಿದೆ. ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಲೆಬನಾನ್ ದೂರು ನೀಡಿದೆ. ಮೃತರದಲ್ಲಿ ಇಬ್ಬರು ಹಿಜ್ಬುಲ್ಲಾ ಸದಸ್ಯರು, ಸಂಸದರೊಬ್ಬರ ಪುತ್ರ ಕೂಡ ಸೇರಿದ್ದಾನೆ.
ಕಳೆದ ಅಕ್ಟೋಬರ್‌ನಿಂದ ಹಿಜ್ಬುಲ್ಲಾ ನಾಯಕರ ಮೇಲೆ ಗುರಿಯಿಟ್ಟು ಇಸ್ರೇಲ್ ದಾಳಿ ನಡೆಸುತ್ತಿತ್ತು. ಸ್ಮಾರ್ಟ್‌ಫೋನ್ ಬಳಕೆಯಿಂದ ಮಾಹಿತಿಗಳು ಸೋರಿಕೆಯಾಗಿ ಇಸ್ರೇಲ್ ದಾಳಿ ಮಾಡುತ್ತಿದೆ ಎಂದು ಅರಿತ ಹಿಜ್ಬುಲ್ಲಾ ಫೋನ್ ಬಳಸದೆ ಸಂವಹನಕ್ಕಾಗಿ ಪೇಜರ್ ಬಳಸುತ್ತಿತ್ತು.
ಹೊಸ ಮಾಡೆಲ್‌ನ ವಾಕಿಟಾಕಿಗಳನ್ನು ಇರಾನ್‌ನಿಂದ ತಂದು ಲೆಬನಾನ್‌ನಲ್ಲಿ ಬಳಕೆ ಮಾಡಲಾಗಿದೆ. ಇಸ್ರೇಲ್ ಜೊತೆ ಇರಾನ್‌ನ ಕಂಪನಿ ಕೈಜೋಡಿಸಿರಬಹುದು ಎಂದು ಹೇಳಲಾಗುತ್ತಿದೆ.