ಬರಗಾಲದ ಹೊಡೆತದಿಂದ ತತ್ತರಿಸಿದ ಜಿಂಬಾಬ್ವೆಯಲ್ಲಿ ಆನೆ ಮಾಂಸ ಭಕ್ಷಣೆ

200 ಆನೆಗಳನ್ನು ಕೊಂದು ಜನರಿಗೆ ಮಾಂಸ ಪೂರೈಕೆ

ಹರಾರೆ: ನಮೀಬಿಯ ಬಳಿಕ ಜಿಂಬಾಬ್ವೆ ಸರ್ಕಾರ ಕೂಡ ಜನರ ಹಸಿವು ತಣಿಸಲು ಕಾಡಾನೆ ಮತ್ತಿತರ ಕಾಡುಪ್ರಾಣಿಗಳನ್ನು ಸಾಯಿಸಿ ಮಾಂಸ ಹಂಚಲು ನಿರ್ಧರಿಸಿದೆ. ನಮೀಬಿಯದಂತೆ ಜಿಂಬಾಬ್ವೆ ಕೂಡ ಭೀಕರ ಬರಗಾಲವನ್ನು ಅನುಭವಿಸುತ್ತಿದೆ. ಮಳೆಯಾಗದೆ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಹೀಗಾಗಿ ಆಹಾರದ ತೀವ್ರ ಕೊರತೆ ತಲೆದೋರಿ ಜನರು ಹಸಿವಿನಿಂದ ಸಾಯತೊಡಗಿದ್ದಾರೆ. ಹೀಗಾಗಿ ಜಿಂಬಾಬ್ವೆ ಸರ್ಕಾರ ಕಾಡಾನೆ ಸಹಿತ ಕಾಡುಪ್ರಾಣಿಗಳನ್ನು ಕೊಂದು ಜನರಿಗೆ ಮಾಂಸ ಪೂರೈಸಲು ತೀರ್ಮಾನಿಸಿದೆ.
1.63 ಕೋಟಿ ಜನಸಂಖ್ಯೆ ಹೊಂದಿರುವ ಜಿಂಬಾಬ್ವೆಐಲ್ಲಿ ಅರ್ಧದಷ್ಟು ಜನ ಹಸಿವಿನಿಂದ ಬಳಲುತ್ತಿದ್ದಾರೆ. ಅವರ ಹಸಿವನ್ನು ನೀಗಿಸುವ ಉದ್ದೇಶದಿಂದ 200 ಆನೆಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ. ಆನೆಗಳನ್ನು ಕೊಲ್ಲುವ ನಿರ್ಧಾರಕ್ಕೆ ಜಿಂಬಾಬ್ವೆ ಬೇರೆಯೇ ಕಾರಣ ಹೇಳುತ್ತಿದೆ. 55,000 ಆನೆಗಳಿಗೆ ಆಶ್ರಯ ಒದಗಿಸಬಲ್ಲ ಸಾಮರ್ಥ್ಯವಿರುವ ನಮ್ಮ ದೇಶದಲ್ಲಿ ಪಸ್ತುತ 84,000 ಆನೆಗಳಿದ್ದು, ಆನೆಗಳ ಸಂಖ್ಯೆಯಲ್ಲಿ ಜಿಂಬಾಬ್ವೆ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ. ಹೆಚ್ಚುವರಿ ಆನೆಗಳನ್ನು ನಿಗ್ರಹಿಸದಿದ್ದರೆ ಮುಂದೆ ಗಂಭೀರ ಸಮಸ್ಯೆಗಳು ತಲೆದೋರುತ್ತವೆ ಎಂದಿದೆ ಅಲ್ಲಿನ ಸರ್ಕಾರ.
ಆನೆಗಳನ್ನು ಕೊಂದು ಮಾಂಸವನ್ನು ಒಣಗಿಸಿ ಪ್ರೋಟೀನ್ ಅವಶ್ಯಕತೆ ಇರುವವರಿಗೆ ಕೊಡುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಜಿಂಬಾಬ್ವೆ ಪರಿಸರ ಸಚಿವ ಸಿತೆಂಬಿಸೋ ನಿಯೋನಿ ಹೇಳಿದ್ದಾರೆ.
ಪ್ರತಿ 5 ವರ್ಷಗಳಿಗೊಮ್ಮೆ ಆನೆ ಗಣತಿಯನ್ನು ನಡೆಸಲಾಗುತ್ತದೆ. 2021ರ ಆನೆ ಗಣತಿ ವರದಿ ಪ್ರಕಾರ ಜಿಂಬಾಬ್ವೆ 1 ಲಕ್ಷ ಆನೆಗಳನ್ನು ಹೊಂದಿದ್ದು, ವಿಶ್ವಕ್ಕೆ 2ನೇ ಸ್ಥಾನದಲ್ಲಿತ್ತು. ಆದರೀಗ 84 ಸಾವಿರ ಆನೆಗಳನ್ನಷ್ಟೇ ಹೊಂದಿದೆ ಎಂದು ವರದಿಗಳು ತಿಳಿಸಿವೆ.
ಕೆಲ ದಿನಗಳ ಹಿಂದೆಯಷ್ಟೇ ನಮೀಬಿಯಾ ಸರ್ಕಾರ ಪ್ರಾಣಿಗಳನ್ನು ಕೊಲ್ಲುವ ನಿರ್ಧಾರ ತೆಗೆದುಕೊಂಡಿದೆ. ಬರದಿಂದ ತತ್ತರಿಸಿರುವ ನಮೀಬಿಯಾ ಜನರಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ 83 ಆನೆಗಳು ಸೇರಿದಂತೆ 723 ಕಾಡುಪ್ರಾಣಿಗಳನ್ನು ಕೊಲ್ಲುವ ಯೋಜನೆಯನ್ನು ರೂಪಿಸಿದೆ. ತೀವ್ರ ಬರಗಾಲದಿಂದ ಆಹಾರಕ್ಕಾಗಿ ಹೆಣಗಾಡುತ್ತಿರುವವರಿಗೆ ಮಾಂಸವನ್ನು ವಿತರಿಸುವುದಾಗಿ ಸರ್ಕಾರ ಇತ್ತೀಚೆಗೆ ಹೇಳಿತ್ತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top