ಅ.1ರಿಂದ ಬಾಟಲಿಗೆ 15-20 ರೂ. ಹೆಚ್ಚಿಸಲು ಅಬಕಾರಿ ಇಲಾಖೆ ಪ್ರಸ್ತಾಪ
ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ಬಿಯರ್ ಬೆಲೆ ಏರಿಸಲು ಸರ್ಕಾರ ಮುಂದಾಗಿದೆ. ಬಿಯರ್ ಬೆಲೆ ಏರಿಕೆಗೆ ಅಬಕಾರಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಸರ್ಕಾರ ಅಸ್ತು ಅಂದಿದೆ. ಹೀಗಾಗಿ ಅಕ್ಟೋಬರ್ 1ರಿಂದಲೇ ಬಿಯರ್ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಬಾಟಲಿ ಮೇಲೆ 15-20 ರೂ. ತನಕ ಹೆಚ್ಚಿಸುವ ಸಾಧ್ಯತೆಯಿದೆ.
ಕಳೆದ ಆ.29ರಿಂದ ಪ್ರೀಮಿಯಂ, ಸೆಮಿಪ್ರೀಮಿಯಂ ಮದ್ಯದ ದರ ಇಳಿಸಿದ ಬೆನ್ನಲ್ಲೇ ಬಿಯರ್ ದರ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದ್ದು, ಅ.1ರಿಂದ ದರ ಪರಿಷ್ಕರಣೆಗೊಳ್ಳುವ ಸಾಧ್ಯತೆ ಇದೆ. ಒಂದೇ ವರ್ಷದ ಅವಧಿಯಲ್ಲಿ ಎರಡು ಬಾರಿ ಮದ್ಯಪ್ರಿಯರಿಗೆ ಶಾಕ್ ನೀಡಿದ್ದ ಸರ್ಕಾರ ಈಗ ಮತ್ತೊಮ್ಮೆ ಶಾಕ್ ಕೊಡಲು ಮುಂದಾಗಿದೆ. ಈಗಾಗಲೇ ಒಂದು ವರ್ಷದ ಅವಧಿಯಲ್ಲಿ ಎರಡು ಬಾರಿ ಮದ್ಯ ದರ ಏರಿಕೆ ಮಾಡಿ ಸರ್ಕಾರ ಶಾಕ್ ನೀಡಿತ್ತು.
2023ರ ಜುಲೈನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಐಎಂಎಲ್ ಮೇಲೆ ಶೇ.20 ಮತ್ತು ಬಿಯರ್ ಮೇಲೆ ಶೇ.10 ಅಬಕಾರಿ ಸುಂಕ ಹೆಚ್ಚಿಸಿದ್ದರು. ಇದಕ್ಕೂ ಮುನ್ನ ರಾಜ್ಯದಲ್ಲಿ ತಯಾರಿಸಲಾದ ಅಥವಾ ಆಮದು ಮಾಡಿಕೊಳ್ಳುವ ಬಿಯರ್ ಬಾಟಲ್ ಮೇಲೆ ಹೆಚ್ಚವರಿ ಅಬಕಾರಿ ಸುಂಕವನ್ನು ಶೇ.10ರಷ್ಟು ಹೆಚ್ಚಿಸಲಾಗಿತ್ತು.
ಬಿಯರ್ ಬೆಲೆ ಹೆಚ್ಚಿಸುವ ಸರ್ಕಾರದ ನಿರ್ಧಾರಕ್ಕೆ ಬಾರ್ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ. ಒಂದೂವರೆ ವರ್ಷದಲ್ಲಿ ಮೂರನೇ ಬಾರಿಗೆ ದರ ಪರಿಷ್ಕರಣೆಯಾಗುತ್ತಿದೆ. ರಾಜ್ಯದಲ್ಲಿ ಬಿಯರ್ ಮಾರಾಟ ಹೆಚ್ಚಾಗಿದೆ. ಈ ಮಧ್ಯೆ ಸರ್ಕಾರ ಸುಂಕ ಹೆಚ್ಚಳ ಮಾಡಿದರೆ ಗ್ರಾಹಕರ ಜೊತೆಗೆ ಮಾರಾಟಗಾರರಿಗೂ ಹೊಡೆತ ಬೀಳಲಿದೆ. ಸರ್ಕಾರ ಏರಿಕೆ ಬದಲು ದರ ಇಳಿಕೆ ಬಗ್ಗೆ ಯೋಚನೆ ಮಾಡಿದರೆ ಹೆಚ್ಚು ಮಾರಾಟವಾಗಲಿದೆ. ಈ ಮೂಲಕ ಸರ್ಕಾರ ಮತ್ತು ಮಾಲೀಕರಿಗೆ ಅನೂಕೂಲವಾಗಲಿದೆ ಎನ್ನುತ್ತಿದ್ದಾರೆ.